ಚಿತ್ರದುರ್ಗ;
ಈ ಬಾರಿ ಮಳೆ ಕೈ ಕೊಟ್ಟಿದೆ. ರೈತರ ಬೆಳೆಯೂ ಹಾನಿಯಾಗಿದ್ದು, ಚಿತ್ರದುರ್ಗ ತಾಲ್ಲೂಕನ್ನು ಬರದ ತಾಲ್ಲೂಕು ಎಂದು ಸರ್ಕಾರ ಈಗಾಗಲೇ ಘೊಷಣೆ ಮಾಡಿದೆ. ಅಧಿಕಾರಿಗಳು ಜನರಿಗೆ ಉದ್ಯೋಗ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಸುವ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್ ಸೂಚಿಸಿದರು
ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬಿತ್ತನೆ ಮಾಡಿದ ಬೀಜಗಳು ಬೆಳೆಯದ ಸ್ಥಿತಿಯಲ್ಲಿದೆ. ಇದರಿಂದ ಅಧಿಕಾರಿಗಳು ಸಹಾ ಜನತೆಯ ಸಮಸ್ಯೆಗಳಿಗೆ ಸ್ಫಂದಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಈ ಸಮಯದಲ್ಲಿ ನಿಮ್ಮ ಕೆಲಸದ ನಿಷ್ಠೆಯನ್ನು ತೋರಿಸಬೇಕಿದೆ ಎಂದು ಹೇಳಿದರು
ತಾಲ್ಲೂಕು ಕೃಷಿ ಅಧಿಕಾರಿ ವೆಂಕಟೇಶ್ ತಾಲ್ಲೂಕಿನ ಮಳೆ, ಬೆಳೆಯ ಬಗ್ಗೆ ಮಾಹಿತಿ ನೀಡಿ ತಾಲ್ಲೂಕಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಳೆ ಬಂದರೂ ಸಹಾ ಸಕಾಲಕ್ಕೆ ಬಾರದ ಹಿನ್ನಲೆಯಲ್ಲಿ ಉಪಯೋಗವಾಗುತ್ತಿಲ್ಲ ಬಿತ್ತಿದಾಗ ಬಂದ ಮಳೆ ಮತ್ತೇ ಸಕಾಲಕ್ಕೆ ಸರಿಯಾಗಿ ಬಾರದ ಹಿನ್ನಲೆಯಲ್ಲಿ ಬೆಳೆ ಒಣಗಿದೆ ಈಗ ಮಳೆ ಬಂದರೂ ಸಹಾ ಅವುಗಳು ಪುನಶ್ವೇತನವಾಗದ ರೀತಿಯಲ್ಲಿ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲು ಅನುದಾನದ ಕೊರತೆಯಿದೆ ಈಗಲೇ ಕಳೆದ ಸಾಲಿನ ಹಲವಾರು ಅರ್ಜಿಗಳು ಬಾಕಿ ಇದೆ, ಆದರೆ ಸಾಮಾನ್ಯ ವರ್ಗದಲ್ಲಿ ಅನುದಾನ ಇದ್ದರೂ ಸಹಾ ಅರ್ಹ ಫಲಾನುಭವಿಗಳು ಬರುತ್ತಿಲ್ಲ ಎಂದು ತಿಳಿಸಿ, ಈ ಬಾರಿಯೂ ಸಹಾ ಬೆಳೆ ವಿಮೆ ಜಾರಿಯಲ್ಲಿದ್ದು ಹಣವನ್ನು ತುಂಬಬಹುದಾಗಿದೆ ಎಂದು ಮಾಹಿತಿ ನೀಡಿದಾಗ ಸ್ಥಾಯಿ ಸಮಿತಿ ಅಧ್ಯಕ್ಷ ಬೋರಯ್ಯ ಮಾತನಾಡಿ ಕಳೆದ ಸಾಲಿನ ಬೆಳೆ ವಿಮೆಯೇ ರೈತರ ಕೈಗೆ ಬಂದಿಲ್ಲ ಈ ಬಾರಿ ಹಣ ತುಂಬಿ ಎಂದರೆ ಹೇಗೆ ಇದರ ಬಗ್ಗೆ ರೈತರು ಆಶಾಭಾವನೆ ಇಟ್ಟುಕೊಂಡಿಲ್ಲ ಎಂದಾಗ ಇದಕ್ಕೆ ಧ್ವನಿಗೂಡಿಸಿದ ಉಪಾಧ್ಯಕ್ಷ ಶ್ರೀಮತಿ ಶೋಭಾ ವಿಮೆಯನ್ನು ಕಟ್ಟಲು ರೈತರ ಹತ್ತಿರ ಹಣ ಇಲ್ಲ ಎಲ್ಲಿಂದ ಕಟ್ಟುತ್ತಾರೆ ಎಂದರು.
ರಾಜ್ಯ ಸರ್ಕಾರ ಚಿತ್ರದುರ್ಗ ತಾಲ್ಲೂಕನ್ನು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿದ ಹಿನ್ನಲೆಯಲ್ಲಿ ಕೃಷಿ ಇಲಾಖೆ ಕಾರ್ಯೋಖನಾಗಿದೆ ಸೆ. 20 ರಿಂದ ಅ.20ರವರೆಗೆ ರೈತರ ಬೆಳೆ ಹಾನಿಯಾದ ಬಗ್ಗೆ ಸರ್ವೆ ಕಾರ್ಯವನ್ನು ಮಾಡಿಸಲು ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ, ಇದಕ್ಕೆ ಬೇಕಾದ ಸರ್ವೇಯರನ್ನು ಖಾಸಗಿಯಾಗಿ ತೆಗೆದುಕೊಂಡು ಅವರಿಗೆ ತರಬೇತಿ ನೀಡುವುದರ ಮೂಲಕ ಅವರಿಂದ ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆಯಲಾಗುವುದು, ಇದರ ಪರಿಶೀಲನೆಗಾಗಿ ಗ್ರಾಮ, ಹೋಬಳಿ ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ವೆಂಕಟೇಶ್ ತಿಳಿಸಿದರು.
ಎಸ್.ಇ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಈಗಾಗಲೇ ನೀಡಿದ ಸೌಲಭ್ಯಗಳನ್ನು ಪಡೆಯದೇ ಇದ್ದವರು ಹೆಸರನ್ನು ಪಟ್ಟಿ ಮಾಡಿ ಅದನ್ನು ಬೇರೆಯವರಿಗೆ ನೀಡಿ ಎಂದು ಅಧ್ಯಕ್ಷರು ಸೂಚಿಸಿ ಮಾನವ ಉದ್ಯೋಗ ದಿನಗಳನ್ನು ಹೆಚ್ಚಳ ಮಾಡುವಂತೆ ಸೂಚಿಸಿದಾಗ ಅಧಿಕಾರಿ ವೆಂಕಟೇಶ್ ಇದುವರೆವಿಗೆ ಆದ ಕೆಲಸದ ಬಗ್ಗೆ ಪಿಡಿಓಗಳು ಸರಿಯಾದ ಮಾಹಿತಿ ನೀಡಿಲ್ಲ ಇದರ ಬಗ್ಗೆ ಮಾಹಿತಿ ಕೊಡಿಸುವಂತೆ ಕೋರಿದರು.
ಬೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡುತ್ತಾ, ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಅರ್ಜಿಗಳನ್ನು ತಡ ಮಾಡದೇ ವಿಲೇವಾರಿ ಮಾಡಲಾಗುತ್ತಿದೆ, ಇದೇ ರೀತಿ ಗ್ರಾಮಾಂತರ ಪ್ರದೇಶದಲ್ಲಿನ ಕುಡಿಯವ ನೀರಿನ ಕೊಳವೆಬಾವಿಗೆ ನೀಡಿದ ಸಂಪರ್ಕದಲ್ಲಿ ಕೊಳವೆಬಾವಿ ನೀರಿಲ್ಲದೆ ಹಾಳಾಗಿದ್ದರೆ ಅಂತಹ ಮೀಟರ್‍ನ್ನು ರದ್ದು ಮಾಡಿ ಅದನ್ನೇ ಬೇರೆ ಕಡೆಗೆ ವರ್ಗ ಮಾಡಲಾಗುವುದು ಆದರೆ ಇದರ ಬಗ್ಗೆ ಪಿಡಿಓಗಳು ಮಾಹಿತಿ ನೀಡಬೇಕಿದೆ ಎಂದರು.
ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರ ಜ್ಯೋತಿ ಕಾರ್ಯಕ್ರಮದಡಿಯಲ್ಲಿ ಫಲಾನುಭವಿಗಳಿಂದ ಹಣದ ಬೇಡಿಕೆಯನ್ನು ಇಡುತ್ತಿದ್ದಾರೆ ಇದು ಸರ್ಕಾರದ ಯೋಜನೆ ಪೂರ್ಣ ಪ್ರಮಾಣದಲ್ಲಿ ಉಚಿತವಾಗಿದೆ ಯಾಕೆ ಹಣವನ್ನು ಕೇಳಲಾಗುತ್ತಿದೆ ಎಂದು ಅಧ್ಯಕ್ಷರು ಪ್ರಶ್ನಿಸಿದಾಗ ಇದು ನಮ್ಮ ಇಲಾಖೆಯಿಂದ ಆದ ತಪ್ಪಲ್ಲ ಇಲಾಖೆವತಿಯಿಂದ ಗುತ್ತಿಗೆದಾರರಿಗೆ ಟೆಂಡರ್ ನೀಡಿದ್ದು ಅವರು ಮತ್ತೆ ಬೇರೆ ಗುತ್ತಿಗೆ ನೀಡಿದ್ದಾರೆ ಅವರು ಈ ಕೆಲಸ ಮಾಡಿದ್ಧಾರೆ ಇದರ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ ಈಗಾಗಲೇ ಸೂಚನೆ ನೀಡಲಾಗಿದೆ ಇದೇ ರೀತಿ ಮುಂದುವರೆದರೆ ಕಪ್ಪು ಪಟ್ಟಿಗೆ ಸೇರಿಸಲಾಗುವುದೆಂದು ಸೂಚಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ ಮಾತನಾಡಿ ಚಿತ್ರದುರ್ಗ ತಾಲ್ಲೂಕಿನಲ್ಲಿ ಈ ಬಾರಿ ಶಿಕ್ಷಕ ಕೊರತೆ ಉಂಟಾಗಿದೆ. ಒಟ್ಟಿಗೆ 102 ಜನ ನಿವೃತ್ತಿ ಹೊಂದಿದ್ದರಿಂದ ಕೆಲವೆಡೆ ಸಮಸ್ಯೆ ಉಂಟಾಗಿದೆ, ಸರ್ಕಾರ ಮುಂದಿನ ದಿನದಲ್ಲಿ ವರ್ಗಾವಣೆಯನ್ನು ಪ್ರಾರಂಭ ಮಾಡುತ್ತಿದೆ ಅದರಲ್ಲಿ ಶಿಕ್ಷಕರು ಬರಲಿದ್ದಾರೆ ಆಗ ಭರ್ತಿ ಮಾಡಲಾಗುವುದು ಎಂದು ತಿಳಿಸಿ ತಾಲ್ಲೂಕಿನಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಅದು ಬಂದ ಮೇಲೆ ನೂತನ ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು ಇದೇ ರೀತಿ ಸೈಕಲ್‍ಗಳ ಬೇಡಿಕೆ ಬಗ್ಗೆಯೂ ಸಹಾ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದು ರಾಜ್ಯ ಮಟ್ಟದಲ್ಲಿ ಟೆಂಡರ್ ನಡೆಯುತ್ತಿದ್ದು ನೇರವಾಗಿ ಶಾಲೆಗಳಿಗೆ ಬರಲಿದೆ ಎಂದರು.ಪಂಚಾಯಿತಿ ಇಓ ಕೃಷ್ಣಾನಾಯ್ಕೆ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.