ಸಿರಿಗೇರಿ
ನೀರಾವರಿ ಇಲಾಖೆ ಅಧಿಕಾರಿರಗಳ ನಿರ್ಲಕ್ಷ್ಯ ಹಾಗೂ ಮಿದು ಧೋರಣೆ ಖಂಡಿಸಿ ಇಲ್ಲಿನ ಸಮೀಪದ ಗುಂಡಿಗನೂರು ಗ್ರಾಮದ ರೈತರು ಶನಿವಾರ ಗುಂಡಿಗನೂರ್ ಕೆರೆ ಹತ್ತಿರ ಪ್ರತಿಭಟನೆ ನಡೆಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ರೈತ ಮುಖಂಡರು ಪದೇ ಪದೇ ಕೆರೆಯ ಆಣೆಕಟ್ಟು ಬೋಂಗಾ ಬಿದ್ದು ಕುಸಿದು ಹೋಗುತ್ತಿದೆ. ಇದರಿಂದ ಈ ಹಿಂದೆಯೂ ಕೂಡ ಸಾವಿರಾರು ಎಕರೆ ಪ್ರದೇಶ ಜಲಾವೃತಗೊಂಡಿರುವುದಲ್ಲದೆ ಗುಂಡಿಗನೂರು,ಮುದ್ದಟನೂರು, ಹಾವಿನಹಾಳು ಸೇರಿದಂತೆ ಸುಮಾರು ನಾಲ್ಕು ಹಳ್ಳಿಯ ಜನ ಸಾವು ನೋವು ಅನುಭವಿಸುವುದಲ್ಲದೆ, ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಆರೋಪ:
ಆದರೆ ವಾಸ್ತವ ಸ್ಥಿತಿಯನ್ನು ಮರೆ ಮಾಚುತ್ತಿರುವ ನೀರಾವರಿ ಇಲಾಖೆ ಅಧಿಕಾರಿಗಳು ಕೊಂಚಿಗೇರಿ ಬಳಿ ಶುಕ್ರವಾರ ಎಲ್.ಎಲ್.ಸಿ ಕಾಲುವೆ ಒಡೆಯಲು ಗುಂಡಿಗನೂರು ರೈತರೇ ಕಾರಣವೆಂದು ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹೊರಡಿಸಿರುವುದು ಅಕ್ಷಮ್ಯ ಅಪರಾಧ. ಇದರ ಹಿಂದೆ ರೈತಾಪಿ ವರ್ಗದ ಜನರ ನಡುವೆಯೇ ಬಿರುಕು ಹುಟ್ಟಿಸುವ ಪ್ರಯತ್ನ ನಡೆದಿದೆ. ಕಾಲುವೆ ಹೊಡೆಯಲು ಗುತ್ತಿಗೆದಾರರ ಕಳಪೆ ಕಾಮಗಾರಿ ಪ್ರಮುಖ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಯಂ ಸೇವೆ: ಕಾಲುವೆ ಒಡೆದ ಪರಿಣಾಮವಾಗಿ ಗುಂಡಿಗನೂರು ಕೆರೆ ಭರ್ತಿಯಾಗಿ ಬಾರಿ ಗಾತ್ರದ ಬೊಂಗಾ ಕಾಣಿಸಿಕೊಂಡು ಇನ್ನೇನು ಕೆಲವೇ ಘಳಿಗೆಯಲ್ಲಿ ಕೆರೆ ಕೋಡಿ ಹರಿಯುವುದನ್ನು ವೀಕ್ಷಿಸಿದ ಗುಂಡಿಗನೂರು ಗ್ರಾಮಸ್ತರು ಕೆಲ ಕಾಲ ಆತಂಕಕ್ಕೊಳಗಾದರು. ಆದರೂ ಪರಿಸ್ಥಿತಿ ವಿಕೋಪಗೊಳ್ಳುವ ಮುನ್ನವೇ ಗ್ರಾಮಸ್ತರೆಲ್ಲಾ ಒಗ್ಗೂಡಿ ಬೋಂಗಾ ಮುಚ್ಚುವಲ್ಲಿ ಹರ ಸಾಹಸ ಪಟ್ಟು ಸಫಲರಾದರು.
ನಿರ್ಲಕ್ಷ್ಯ: ಇದೇ ವೇಳೆ ಗ್ರಾಮಸ್ತರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಬೋಂಗಾ ಕುರಿತು ವಾಸ್ತವಾಂಶ ಮನವರಿಕೆ ಮಾಡಿಕೊಟ್ಟರೂ ಸಹ ಸ್ಥಳಕ್ಕೆ ಆಗಮಿಸದೇ ಇರುವುದು ನಿರ್ಲಕ್ಷ್ಯ ದೋರಣೆಯಾಗಿದೆ ಎಂದು ರೈತರು ಅಧಿಕಾರಿಗಳ ವಿರುಧ್ಧ ಕಿಡಿಕಾರಿದರು.
ಈ ಸಂಧರ್ಭದಲ್ಲಿ ಸುಮಾರು ನೂರಾರು ಜನ ರೈತರು ಹಾಗೂ ಗುಂಡಿಗನೂರು ಗ್ರಾಮಸ್ತರು ಉಪಸ್ಥಿತರಿದ್ದರು.