ಅಬಕಾರಿ ಇಲಾಖೆಗೆ ರೈತರ ಅಭಿನಂದನೆ

ಹುಳಿಯಾರು:

     ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಾರಂದೂರಿನ ಮಲೆನಾಡು ನೆಟ್ ಅಂಡ್ ಸ್ಪೈಸ್ ರೈತ ಉತ್ಪಾದಕರ ಕಂಪನಿಗೆÀ ರಾಜ್ಯದ ಮೊದಲ ನೀರಾ ಉತ್ಪಾದನೆ, ಸಂಸ್ಕರಣೆ ಮತ್ತು ಸಗಟು ಮಾರಾಟಕ್ಕೆ ಪರವಾನಗೆ ನೀಡಿರುವ ಸಲುವಾಗಿ ತೆಂಗು ಬೆಳೆಗಾರರ ಪರವಾಗಿ ಅಬಕಾರಿ ಇಲಾಖೆಗೆ ಅಭಿನಂಧಿಸುವುದಾಗಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ತಿಳಿಸಿದರು.

    ಹುಳಿಯಾರಿನಲ್ಲಿ ಈ ಸಂಬಂಧ ನೀರಾ ಹೋರಾಟಗಾರರಾದ ನೀರಾ ಈರಣ್ಣ ಮತ್ತು ಕರಿಯಪ್ಪ ಅವರೊಂದಿಗೆ ಪತ್ರಿಕಾ ಗೋಷ್ಠಿ ಕರೆದು ಅವರು ಮಾತನಾಡಿದರು.

     ಪ್ರೊ.ಎಂ.ಡಿ ನಂಜುಂಡಸ್ವಾಮಿ ಅವರು 2001 ರಲ್ಲಿ ನೀರಾ ಹೋರಾಟ ಆರಂಭಿಸಿದರು. ನಂತರದ ದಿನಗಳಲ್ಲಿ ರಾಜ್ಯದ ಎಲ್ಲಾ ರೈತ ಸಂಘದ ಘಟಕಗಳು ಹೋರಾಟ ಮುಂದುವರಿಸಿದ ಫಲ ಹಾಗೂ ಬಾರಂದೂರು ಗ್ರಾಮದಲ್ಲಿ ನೀರಾ ಉತ್ಪಾದನಾ ಘಟಕ ಆರಂಭಿಸಿ ಪರವಾನಗಿಗೆ ಹೋರಾಡಿದ ಫಲವಾಗಿ ಇಂದು ಅಬಕಾರಿ ಇಲಾಖೆಯಿಂದ ಪರವಾನಗಿ ಸಿಕ್ಕಿದೆ. ಇದು ರಾಜ್ಯ ತೆಂಗು ಬೆಳೆಗಾರರಿಗೆ ಸಂತಸದ ವಿಷಯವಾಗಿದ್ದು ಈ ಸಂದರ್ಭದಲ್ಲಿ ಇದರ ರುವಾರಿ ಪ್ರೊ.ನಂಜುಂಡಸ್ವಾಮಿ ಅವರನ್ನು ನೆನೆದು ಪೂಜಿಸಬೇಕಿದೆ ಎಂದರು.

      ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನೀರಾ ಇಳಿಸಲು ಅನುಮತಿ ನೀಡುವ ನೀತಿ ರೂಪಿಸಲಾಯಿತು. ಆದರೆ ನೀರಾವನ್ನು ಹುಳಿಮಾಡಿ ಮಾರುವಂತೆ ನಿಯಮ ತಂದಿದ್ದರು. ನೀರಾವನ್ನು ಹುಳಿ ಬಾರದಂತೆ ಯಾವ ರೀತಿ ಸಂಸ್ಕರಿಸಬೇಕೆಂಬ ತಂತ್ರಜ್ಞಾನ ಈವರೆಗೂ ಕಂಡು ಹಿಡಿದಿರಲಿಲ್ಲ. ಕೇರಳದಲ್ಲಿ ಮೊದಲ ಬಾರಿಗೆ ಮೈನಸ್ 4 ಡಿಗ್ರಿ ಉಷ್ಣಾಂಶದಲ್ಲಿ ಸಂಸ್ಕರಿಸಿ ಬಳಸುವ ಪ್ರಯೋಗ ಯಶಸ್ವಿಯಾಗಿತ್ತು. ಈಗ ಅದೇ ಪ್ರಯೋಗವನ್ನು ಬಾರಂದೂರಿನಲ್ಲೂ ಮಾಡಲಾಗುತ್ತಿದೆ. ಹಾಗಾಗಿಯೇ ಅಬಕಾರಿ ಇಲಾಖೆ ಪರವಾನಗಿ ನೀಡಿದ್ದು ರೈತರ ಆರ್ಥಿಕ ಪ್ರಗತಿ ಕಾಣಲು ಬಾರಂದೂರಿನ ರೈತರ ರೀತಿ ಸಂಸ್ಕರಿಸಿ ನೀರ ಮಾರಲು ಮುಂದಾಗಬೇಕಿದೆ ಎಂದರು.

     ವರ್ಷಕ್ಕೆ ಒಂದು ತೆಂಗಿನ ಮರ ಹೆಚ್ಚೆಂದರೆ 100 ಕಾಯಿ ಬಿಡಬಹುದು. ಈಗಿನ ಮಾರ್ಕೆಟ್ ದರದಲ್ಲಿ ವರ್ಷಕ್ಕೆ ಒಂದು ಮರದಿಂದ 1300, 1400ರೂ. ಆದಾಯ ಗಳಿಸಬಹುದು. ಆದರೆ ಒಂದು ಮರ ದಿನಕ್ಕೆ ಕನಿಷ್ಠ 2 ರಿಂದ 3.5 ಲೀಟರ್ ನೀರಾ ಕೊಡುವುದಿದ್ದು ಒಂದು ಲೀಟರ್ ನೀರಾಗೆ 40ರೂ. ಇದ್ದು ತಿಂಗಳಿಗೆ ಒಂದು ಮರದಿಂದ ಕನಿಷ್ಠ 1600 ರೂ. ಸಂಪಾದಿಸಬಹುದು. ಇದರಿಂದ ತೆಂಗು ಬೆಳೆಗಾರರಿಗೆ ಅನುಕೂಲವಾಗಲಿದ್ದು ರಾಜ್ಯದಲ್ಲೇ ಹೆಚ್ಚು ತೆಂಗು ಬೆಳೆಯುವ ಪ್ರದೇಶವಾದ ತುಮಕೂರಿನ ರೈತರಿಗೂ ನೀರಾ ಇಳಿಸಲು ಪರವಾನಗಿ ಕೊಟ್ಟು ಜೊತೆಗೆ ಉಚಿತವಾಗಿ ನೀರಾ ಇಳಿಸಲು ತರಬೇತಿ, ನೀರಾ ಇಳಿಸುವ ಉಪಕರಣ ಮತ್ತು ಸಂಸ್ಕರಿಸುವ ಉಪಕರಣಗಳನ್ನು ಕೊಟ್ಟು ಅನುಕೂಲ ಕಲ್ಪಿಸುವಂತೆ ಅವರು ಒತ್ತಾಯಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link