ದೆಹಲಿ :
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಉದ್ಯಮಿ ಮತ್ತು ಬ್ರಿಂಡ್ಕೊ ಸೇಲ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅಮನದೀಪ್ ಸಿಂಗ್ ಧಲ್ ಅವರಿಗೆ ಸುಪ್ರೀಂ ಕೋರ್ಟ್ ಅಕ್ಟೋಬರ್ 25 ರಂದು ಜಾಮೀನು ನೀಡಿದೆ. ಹಗರಣದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾದ ಇತರ ಆರೋಪಿಗಳಾದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಬಿಆರ್‌ಎಸ್ ನಾಯಕಿ ಕೆ .ಕವಿತಾ ಕೋರ್ಟನಿಂದ ಜಾಮೀನು ಪಡೆದುಕೊಂಡಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಎಲ್ಲರೂ ಬೇಲ್ ಮೇಲೆ ಹೊರಕ್ಕೆ ಬಂದಂತಾಗಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಒಳಗೊಂಡ ಅವರ ಪೀಠವು ಸುದೀರ್ಘವಾಗಿ ಪ್ರಕರಣದ ವಿಚಾರಣೆ ನಡೆಸಿ ಅಮನದೀಪ್ ಸಿಂಗ್ ಧಲ್ ಅವರಿಗೆ ಜಾಮೀನನ್ನು ನೀಡಿದೆ. 2021 ರಲ್ಲಿ ದೆಹಲಿ ಅಬಕಾರಿ ನೀತಿ ಹಗರಣದ ಸಂಬಂಧ ಧಲ್ ಬಂಧನಕ್ಕೆ ಒಳಗಾಗಿದ್ದರು . 2024 ರಲ್ಲಿ ಹೈ ಕೋರ್ಟ್ ಆದೇಶ ಪ್ರಶ್ನಿಸಿ ಧಲ್ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು.
ಶುಕ್ರವಾರ ಸಿಬಿಐ ಸಲ್ಲಿಸಿದ್ದ 300 ಸಾಕ್ಷಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟನ ನ್ಯಾಯ ಪೀಠ ಹಗರಣವನ್ನು ಸುದೀರ್ಘವಾಗಿ ವಿಚಾರಣೆ ನಡೆಸಬೇಕು ಆರೋಪಿ ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದು ಯಾವುದೇ ಸಾಕ್ಷ್ಯನಾಶ ಮಾಡಬಾರದು ಎಂಬ ಷರತ್ತಿನ ಮೇಲೆ ಅರೋಪಿಗೆ ಜಾಮೀನು ಮಂಜೂರು ಮಾಡಿದೆ.
ದೆಹಲಿಯ ಮದ್ಯದಂಗಡಿ ಲೈಸನ್ಸ್ ಹಂಚಿಕೆ ಪ್ರಕರಣ ಸಂಬಂಧ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ದೆಹಲಿ ಸರ್ಕಾರದಲ್ಲಿ ಸಚಿವರಾಗಿದ್ದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ತೆಲಂಗಾಣದ ಬಿಆರ್’ಎಸ್ ಪಕ್ಷದ ಶಾಸಕಿ ಕೆ.ಕವಿತಾ ಕೇಂದ್ರದ ತನಿಖಾ ಸಂಸ್ಥೆಗಳ ಬಲೆಗೆ ಬಿದ್ದಿದ್ದರು.
ಅಬಕಾರಿ ನೀತಿ ಹಗರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ 9 ಬಾರಿ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ಇದು ರಾಜಕೀಯ ಸೇಡಿಗಾಗಿ ಕೈಗೊಂಡ ಕ್ರಮ ಎಂದು ಆರೋಪಿಸಿ ವಿಚಾರಣೆಗೆ ದೆಹಲಿ ಮಾಜಿ ಸಿಎಂ ಗೈರಾಗುತ್ತಲೇ ಬಂದಿದ್ದರು. ಈ ನಡುವೆ ಮದ್ಯ ಲೈಸೆನ್ಸ್ ಪ್ರಕರಣದಲ್ಲಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡಬೇಕೆಂದು ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಳ್ಳಿ ಹಾಕಿತ್ತು. ಕೋರ್ಟ್ ರಕ್ಷಣೆ ನಿರಾಕರಿಸಿದ ಬೆನ್ನಲ್ಲೇ ಇಡಿ ಅಧಿಕಾರಿಗಳ ತಂಡ ಗುರುವಾರ ರಾತ್ರಿ ಕೇಜ್ರಿವಾಲ್ ಮನೆ ಮೇಲೆ ದಾಳಿ ನಡೆಸಿ, 2 ಗಂಟೆಗಳ ವಿಚಾರಣೆ ನಡೆಸಿದ ಬಳಿಕ ಕೇಜ್ರಿವಾಲ್ ಅವರನ್ನು ಬಂಧನಕ್ಕೊಳಪಡಿಸಿದ್ದರು.
