ಹಾನಗಲ್ಲ :
ಹಾನಗಲ್ಲ ಪುರಸಭೆ ಬಿಜೆಪಿ ಆಡಳಿತದಲ್ಲಿದ್ದುದರಿಂದ ಹಿಂದಿನ ಕಾಂಗ್ರೇಸ್ ಸರಕಾರ ಹಾನಗಲ್ಲ ಪಟ್ಟಣದ ಅಭಿವೃದ್ಧಿಗೆ ಅನುದಾನ ನೀಡದೆ ಇರುವುದರಿಂದ ಪಟ್ಟಣ ಅಭಿವೃದ್ಧಿ ಕುಂಠಿತವಾಗಿರುವುದು ವಿಷಾದದ ಸಂಗತಿ ಎಂದು ಶಾಸಕ ಸಿ.ಎಂ.ಉದಾಸಿ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಬಿಜೆಪಿ ಸರಕಾರ ಅವಧಿಯಲ್ಲಿ ಹಲವು ಅಭಿವೃದ್ದಿಗಳ ಕಾಮಗಾರಿಗಳಾದವು. ಆದರೆ ನಂತರ ಬಂದ ಕಾಂಗ್ರೇಸ್ ಸರಕಾರ ಹಾನಗಲ್ಲ ಪುರಸಭೆಯಲ್ಲಿ ಬಿಜೆಪಿ ಆಡಳಿತ ಇರುವುದರಿಂದ ಸರಿಯಾದ ಅಭಿವೃದ್ಧಿ ಅನುದಾನಗಳನ್ನು ನೀಡದೆ ಇರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇದು ಕಾಂಗ್ರೇಸ್ ಮಾಡಿದ ಅನ್ಯಾಯವಾಗಿದೆ ಎಂದರು.
ಹತ್ತಾರು ವರ್ಷಗಳಿಂದ ಮಳೆಯ ಅಭಾವದ ಕಾರಣವಾಗಿ ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಕೊಳವೆ ಭಾವಿಗಳು ಅಂತರ್ಜಲ ಕಡಿಮೆಯಾಗಿದ್ದಲ್ಲದೆ ಆನಿಕೆರೆಗೂ ನೀರು ತುಂಬುವ ಸಂದರ್ಭಗಳು ಕಡಿಮೆಯಾದವು. ಇಂತಹ ಪರಿಸ್ಥಿತಿಯಲ್ಲು ಧರ್ಮಾ ನದಿಯಿಂದ ಆನಿಕೆರೆಗೆ ನೀರು ತುಂಬಿ ಪಟ್ಟಣಕ್ಕೆ ಇಡೀ ಜಿಲ್ಲೆಯಲ್ಲಿಯೇ ಅತ್ಯುತ್ತಮವಾಗಿ ಕುಡಿಯುವ ನೀರು ಒದಗಿಸಿದ ಪಟ್ಟಣವೆಂಬ ಖ್ಯಾತಿ ಪಡೆದಿದೆ. ಇದು ಬಿಜೆಪಿ ಆಡಳಿತದ ಸಾಫಲ್ಯ ಎಂದರು.
ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಆನಿಕೆರೆಗೆ ವರದಾ ನದಿಯಿಂದ 59 ಕೋಟಿ ರೂ ವೆಚ್ಚದಲ್ಲಿ ಆನಿಕೆರೆಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಕಾಂಗ್ರೇಸ್ ಅವಧಿಯ ಸರಕಾರ ಈ ಯೋಜನೆ ಕಾರ್ಯಗತಗೊಳಿಸದೆ ಪಟ್ಟಣಕ್ಕೆ ಅನ್ಯಾಯ ಮಾಡಿದೆ. ಇದಲ್ಲದೆ ಪಟ್ಟಣದ ರಸ್ತೆ, ಒಳ ಚರಂಡಿ ವ್ಯವಸ್ಥೆ ಸೇರಿದಂತೆ ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೇಸ್ ನಿರಾಸಕ್ತಿ ತೋರಿದೆ ಎಂದು ಆಪಾದಿಸಿದರು.
ಹಾನಗಲ್ಲ ಪುರಸಭೆ ಮತ್ತೆ ಬಿಜೆಪಿ ಆಡಳಿತಕ್ಕೆ ಬರುವುದು ಖಚಿತ. ಕುಡಿಯುವ ನೀರು, ವಿದ್ಯುತ್,ಚರಂಡಿ, ಮನೆ ನಿರ್ಮಾಣ, ರಸ್ತೆ ನಿರ್ಮಾಣದಂತಹ ಅವಶ್ಯಕತೆಗಳನ್ನು ಪೂರೈಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದರು