ಬೆಳಗಾವಿ:
ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಬೆಳಗಾವಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು. ಎಲ್ಲ ನಾಯಕರ ಸಹಮತ ಪಡೆದು ಜಿಲ್ಲೆ ವಿಭಜನೆ ಆಗಲಿ. ಜಿಲ್ಲೆ ವಿಭಜನೆ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ಆಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಾಯಕರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಮಹಿಳೆಯಾಗಿ ಹೇಳುತ್ತೇನೆ ಗೋಹತ್ಯೆ ನಿಷೇಧ ಅಷ್ಟೇ ಅಲ್ಲ, ಯಾವ ಪ್ರಾಣಿಯ ಹತ್ಯೆಯನ್ನೂ ನಾನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಗೃಹಜ್ಯೋತಿ ಯೋಜನೆಯಿಂದ ಬಾಡಿಗೆದಾರರು ವಂಚಿತರಾಗುವ ಆತಂಕ ವ್ಯಕ್ತವಾಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು ಯಾವುದೇ ವದಂತಿಗೆ ದಯಮಾಡಿ ಯಾರೂ ಕಿವಿಗೊಡಬೇಡಿ. ಬೆಲೆ ಏರಿಕೆಯಿಂದ ತತ್ತರಿಸಿದ ನಿಮಗೆ ಆಶಾಕಿರಣ ಮೂಡಿಸಿದ್ದು ಕಾಂಗ್ರೆಸ್. ಕಾಂಗ್ರೆಸ್ ಕೊಟ್ಟ ಭರವಸೆಯನ್ನು ಈಡೇರಿಸುತ್ತದೆ. ಮನೆ ಮಾಲೀಕರು, ಬಾಡಿಗೆದಾರರಿಗೆ ಯಾವುದೇ ಆತಂಕ ಬೇಡ. ಇನ್ನು ಅಧಿಕಾರಿಗಳು, ಮಂತ್ರಿಗಳ ಹಂತದಲ್ಲಿ ಎಲ್ಲಾ ಯೋಜನೆಗಳ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.