ಅಮೆರಿಕ ವಿರುದ್ಧದ ಪ್ರತೀಕಾರದ ಸುಂಕ ಮತ್ತೆ ಹೆಚ್ಚಿಸಿದ ಚೀನಾ; ಶೇ. 125ಕ್ಕೆ ಏರಿಕೆ

ಬೀಜಿಂಗ್: 

   ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ರಫ್ತುಗಳ ಮೇಲಿನ ಸುಂಕವನ್ನು ಶೇ.104 ರಿಂದ ಶೇ. 145ಕ್ಕೆ ಹೆಚ್ಚಿಸಿದ್ದು, ಇದಕ್ಕೆ ಪ್ರತಿಯಾಗಿ ಚೀನಾ ಸಹ, ಅಮೆರಿಕದಿಂದ ಬರುವ ಎಲ್ಲಾ ಸರಕುಗಳ ಮೇಲಿನ ಸುಂಕವನ್ನು ಶುಕ್ರವಾರ ಮತ್ತೊಮ್ಮೆ ಹೆಚ್ಚಳ ಮಾಡಿದ್ದು, ಈಗ ಶೇ.125ಕ್ಕೆ ಹೆಚ್ಚಿಸಿದೆ.

  ಚೀನಾ ಈ ಮುಂಚೆ ಅಮೆರಿಕದ ಸರಕುಗಳ ಮೇಲೆ ಶೇ.34 ರಷ್ಟು ಸುಂಕ ವಿಧಿಸುವುದಾಗಿ ಹೇಳಿತ್ತು. ಬಳಿಕ ಅದನ್ನು ಶೇ.84ಕ್ಕೆ ಹೆಚ್ಚಿಸುವ ಮೂಲಕ ಅಮೆರಿಕಕ್ಕೆ ತಿರುಗೇಟು ನೀಡಿತ್ತು. ಆದೇ ರೀತಿ ಅಮೆರಿಕ ಸಹ ಚೀನಾದ ರಫ್ತುಗಳ ಮೇಲೆ ಶೇ. 104 ರಷ್ಟು ಸುಂಕ ವಿಧಿಸುವುದಾಗಿ ಹೇಳಿತ್ತು. ಆದರೆ ಅದನ್ನು ದಿಢೀರ್ ಅಂತ 145ಕ್ಕೆ ಹೆಚ್ಚಿಸಲಾಗಿದ್ದು, ಇದರಿಂದ ಕೆರಳಿದ ಚೀನಾ ಈಗ ಅಮೆರಿಕದ ರಫ್ತುಗಳ ಮೇಲಿನ ಸುಂಕವನ್ನು 125ಕ್ಕೆ ಏರಿಕೆ ಮಾಡಿದೆ.

   ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಹೆಚ್ಚುವರಿ ಸುಂಕವನ್ನು ಶೇ. 125 ಕ್ಕೆ ಏರಿಸಲಾಗಿದೆ ಎಂದು ಬೀಜಿಂಗ್‌ನಲ್ಲಿರುವ ಚೀನಾ ವಾಣಿಜ್ಯ ಸಚಿವಾಲಯ ತಿಳಿಸಿದೆ. ಅಮೆರಿಕ ಸುಂಕ ಏರಿಕೆಯ ನಂತರ ಚೀನಾ ಡಬ್ಲ್ಯೂಟಿಒಗೆ ದೂರು ದಾಖಲಿಸಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.ಕಳೆದ ಬುಧವಾರ ಚೀನಾ ಎಲ್ಲಾ ಅಮೆರಿಕದ ಸರಕುಗಳ ಮೇಲೆ ಶೇ.84 ರಷ್ಟು ಸುಂಕ ವಿಧಿಸುವುದಾಗಿ ಹೇಳಿತ್ತು.

  “ಯುನೈಟೆಡ್ ಸ್ಟೇಟ್ಸ್ ಚೀನಾ ವಿರುದ್ಧ ಸುಂಕ ಏರಿಕೆ ಮಾಡುವ ಮೂಲಕ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಿದೆ ಮತ್ತು ಚೀನಾದ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ತೀವ್ರವಾಗಿ ಉಲ್ಲಂಘಿಸುತ್ತಿದೆ” ಎಂದು ಚೀನಾ ಸಚಿವಾಲಯ ಕಿಡಿ ಕಾರಿತ್ತು.