ರಾಣಿಬೆನ್ನೂರು:
ಮಾನವ ಸೇರಿದಂತೆ ಪ್ರತಿಯೊಂದು ಜೀವವೈವಿಧ್ಯತೆಗಳೆಲ್ಲವೂ ಅರಣ್ಯ ನಾಶದಿಂದಾಗಿ ಅಳಿವಿನ ಅಂಚಿನಲ್ಲಿವೆ. ಈಗಲಾದರೂ ಎಚ್ಚೆತ್ತುಕೊಂಡು ಪ್ರತಿಯೊಬ್ಬರೂ ಅರಣ್ಯ ಬೆಳೆಸಿ ಭೂಮಿಯನ್ನೆಲ್ಲಾ ಹಸಿರಾಗಿಸೋಣಾ, ಇಲ್ಲದಿದ್ದರೆ ಮುಂದೆ ಜೀವ ಸಂಕುಲವೇ ನಾಶವಾಗುವ ದಿನ ಸನ್ನಹಿತವಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಉಷಾ ರಾಣಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಅರಣ್ಯ ಇಲಾಖೆಯ ಆಶ್ರಯದಲ್ಲಿ ಹಸಿರು ಕರ್ನಾಟಕ ಆಂದೋಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮರಗಳನ್ನು ನಮ್ಮ ಮಕ್ಕಳನ್ನು ಬೆಳೆಸಿದಂತೆ ಪಾಲನೆ ಪೋಷಣೆ ಮಾಡುವ ಅನಿವಾರ್ಯತೆ ಇದೆ ಎಂದರು.
ಪ್ರಾಧ್ಯಾಪಕಿ ಶೋಭಾ ಸಾವುಕಾರ ಮಾತನಾಡಿ, ಕಾಲಕಾಲಕ್ಕೆ ಮಳೆ ಬರಲು ಹಾಗೂ ಪರಿಸರ ವ್ಯವಸ್ಥೆ ಸಮದೂಗಿಸಲು ಗಿಡ-ಮರಗಳು ಹೆಚ್ಚಿನ ಸಂಖ್ಯೆಯಲ್ಲಿರಲೇಬೇಕು. ಅರಣ್ಯ ಇದ್ದರೆ ನಮ್ಮೆಲ್ಲರ ಬದುಕಿಗೆ ಆಧಾರ ಎಂದರು.
ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಕಾಲ ನಡೆದ ತಾಲೂಕ ಮಟ್ಟದ ಅರಣ್ಯ ಬೆಳೆಸುವಲ್ಲಿ ಸಾರ್ವಜನಿಕರ ಪಾತ್ರ ಕುರಿತು ನಿಬಂಧ ಸ್ಪರ್ಧೆ, ಅರಣ್ಯ ಪೋಷಣೆ ಮತ್ತು ರಕ್ಷಣೆ ಜವಾಬ್ದಾರಿ ಯಾರದ್ದು? ಸರ್ಕಾರದ್ದ ಅಥವಾ ನಮ್ಮೆಲ್ಲರದ್ದ ಕುರಿತು ಚರ್ಚಾ ಸ್ಪರ್ಧೆ, ಅರಣ್ಯ ಮತ್ತು ವನ್ಯಜೀವಿ-ಅಂದು ಮತ್ತು ಇಂದು ವಿಷಯದ ಕುರಿತು ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಮಾಡುವ ಮೂಲಕ ಅವುಗಳನ್ನು ಬೆಳೆಸಲು ತಿಳಿಸಲಾಯಿತು.
ಡಾ. ಸಿದ್ದಲಿಂಗಮ್ಮ ಬಿ.ಜಿ, ರಾಜೇಶ್ವರಿ ಆರ್ಕಾಚಾರಿ, ವಿಜಯಕುಮಾರ ಗೌಡ, ಮಾಲತೇಶ, ಕಸ್ತೂರಿ, ಶ್ರೀದೇವಿ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.