ಹಾನಗಲ್ಲ :
ತಂತ್ರಜ್ಞಾನ ಯುಗದಲ್ಲಿ ಇಂದು ದೂರದರ್ಶನ ಹಾಗೂ ಮೋಬೈಲ್‍ಗಳ ಹಾವಳಿಯಿಂದ ರಂಗಭೂಮಿ ಕಲೆ ಅವಸಾನದ ಅಂಚಿಕೆ ಹೋಗುತ್ತಿದ್ದು, ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸುವುದು ಇಂದಿನ ಅಗತ್ಯ ಎಂದು ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಹೇಳಿದರು.
ತಾಲೂಕಿನ ಕಾಲ್ವೆಕಲ್ಲಾಪೂರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಯುವಕ ಸಂಘ ಬೆಲ್ಲಿಬೀಡ ಇವರ ಆಶ್ರಯದಲ್ಲಿ, ಗುಬ್ಬಿ ನಂಜುಂಡೇಶ್ವರ ಜಾತ್ರಾ ನಿಮಿತ್ತ, ಶ್ರೀ ಮಾರುತಿ ದೇವಸ್ಥಾನದ ಕಟ್ಟಡದ ಸಹಾಯಾರ್ಥವಾಗಿ, ಗುಬ್ಬಿ ನಂಜುಂಡೇಶ್ವರ ಕಲಾ ನಾಟ್ಯ ಸಂಘ ಆಯೋಜಿಸಿದ “ಕನಿಕರವಿಲ್ಲದ ಧನಿಕ” ಎಂಬ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಡಿದರು.
ಎರಡು ದಶಕಗಳ ಹಿಂದಿನ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ರಂಗಭೂಮಿ ಹವ್ಯಾಸವುಳ್ಳ ಕಲಾವಿದರು, ಯುವಕರನ್ನು ಒಗ್ಗೂಡಿಸಿ ನಾಟಕದ ಹವ್ಯಾಸವನ್ನು ಬೆಳೆಸುತ್ತಿರುವುದು ಸಂತಸದ ಸಂಗತಿ. ಆದರೆ ಪ್ರತಿನಿತ್ಯ ಬರುವ ಹೊಸ ಹೊಸ ಮಾದರಿ ಸಂಶೋಧನೆಗಳು ಯುವ ಸಮುದಾಯವನ್ನು ಅಡ್ಡದಾರಿಗೆಳೆಯುತ್ತಿವೆ. ಯುವ ಸಮುದಾಯ ನಮ್ಮ ಸಂಸ್ಕತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ, ಸಂಘ ಸಂಸ್ಥೆಗಳು ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದರು.
ಈಪಂ ಸದಸ್ಯ ಮಾಲತೇಶ ಸೊಪ್ಪಿನ ಮಾತನಾಡಿ, ರಂಗಭೂಮಿ ನಾಟಕಗಳ ಮೂಲಕ ಉತ್ತಮ ಸಾಮಾಜಿಕ ಸಂದೇಶಗಳನ್ನು ನೀಡುತ್ತ ಬಂದಿದೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ರಂಗಭೂಮಿ ಪ್ರಮುಖ ಪಾತ್ರ ವಹಿಸುತ್ತದೆ. ಇಂಥ ರಂಗಭೂಮಿ ಇಂದು ಕಣ್ಮರೆಯಾಗುತ್ತಿರುವುದು ವಿಷಾದದ ಸಂಗತಿ. ಇದನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ಯುವಕರ ಮೇಲಿದೆ ಎಂದರು. ಶಾಂತವೀರಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ವೀರಣ್ಣ ಮರಡಿ ಅಧ್ಯಕ್ಷತೆ ವಹಿಸಿದ್ದರು. ಉಮೇಶ ದಾನಪ್ಪನವರ, ಎಂ.ಎಫ್ ದ್ಯಾವನಕಟ್ಟಿ, ಭರಮಣ್ಣ ಶೀವೂರ, ಎಸ್.ಎಸ್.ಪಾಟೀಲ, ಎಸ್.ಜಿ.ಗುರಮ್ಮನವರ, ಗಿರೀಶಗೌಡ ಪಾಟೀಲ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ