ಚಿತ್ರದುರ್ಗ:
ಪ್ರಧಾನ ಮಂತ್ರಿ ಫಸಲ್‍ಭೀಮ ಯೋಜನೆಯಡಿ ಬೆಳೆ ವಿಮೆ ಕಂಪನಿಯವರು ಅವೈಜ್ಞಾನಿಕವಾಗಿ ವಿಮೆ ರೂಪಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ತಾಲೂಕುಗಳಲ್ಲಿ ಕಳೆದ ಹದಿನೈದು ವರ್ಷಗಳಿಂದಲೂ ಮಳೆ ಬೆಳೆಯಿಲ್ಲದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2017-18 ನೇ ಸಾಲಿನಿಂದ ಪರಿಷ್ಕರಿಸಿರುವ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‍ಭೀಮಾ ಯೋಜನೆಯಿಂದ ರೈತರಿಗೆ ಯಾವುದೇ ಅನುಕೂಲವಿಲ್ಲ.
ಕಳೆದ ಏಳು ವರ್ಷಗಳಲ್ಲಿ ಉತ್ತಮವಾದ ಐದು ವರ್ಷಗಳ ಇಳುವರಿಯ ಸರಾಸರಿಯನ್ನು ಪ್ರಾರಂಭಿಕ ಇಳುವರಿ ಲೆಕ್ಕಾಚಾರವನ್ನಾಗಿ ತೆಗೆದುಕೊಳ್ಳಲಾಗುತ್ತಿದೆ. ಚಳ್ಳಕೆರೆಯಂತ ಬರಪೀಡಿತ ತಾಲೂಕಿನಲ್ಲಿ ಕಳೆದ ಐದು ವರ್ಷಗಳನ್ನು ಬರಪೀಡಿತ ತಾಲೂಕೆಂದು ಘೋಷಿಸಲಾಗಿದೆ. ಇಲ್ಲಿನ ಪ್ರಮುಖ ಬೆಳೆಗಳಾದ ಶೇಂಗಾ ಮತ್ತು ತೊಗರಿ ಬೆಳೆಗಳು ಐದು ವರ್ಷಗಳ ಸರಾಸರಿ ಇಳುವರಿಯಲ್ಲಿ ಪ್ರಮಾಣ ಕಡಿಮೆಯಾಗಿದೆ. ಬೆಳೆ ವಿಮೆಯ ಪರಿಹಾರ ರೈತರಿಗೆ ಸಿಗುತ್ತಿಲ್ಲ.
ಅದಕ್ಕಾಗಿ ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ತಾಲೂಕಿನ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‍ಭೀಮಾ ಯೋಜನೆಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಜಿಲ್ಲಾಧಿಕಾರಿ ಗಮನ ಸೆಳೆದರು.
ಸರ್ಕಾರ ಮಧ್ಯಪ್ರವೇಶಿಸಿ ಅವೈಜ್ಞಾನಿಕ ರೀತಿಯಲ್ಲಿ ಪ್ರಾರಂಭಿಕ ಇಳುವರಿಯ ಮೇಲೆ ಲೆಕ್ಕಾಚಾರ ಮಾಡುವುದನ್ನು ಬದಲಾಯಿಸಿ ಪ್ರತಿ ತಾಲೂಕಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಯಾವ ವರ್ಷ ಉತ್ತಮ ಇಳುವರಿಯನ್ನು ಪಡೆಯಲಾಗಿರುತ್ತದೋ ಅದನ್ನೇ ಪ್ರಾರಂಭಿಕ ಇಳುವರಿಯನ್ನಾಗಿ ಪರಿಗಣಿಸಿದರೆ ರೈತರಿಗೆ ಲಾಭ ದೊರಕಿಸಿಕೊಟ್ಟಂತಾಗುತ್ತದೆ. ಅಲ್ಲದೆ ಶೇಂಗಾ ಬೆಳೆ ನಷ್ಟ ಪರಿಹಾರ ಇನ್‍ಪುಟ್ ಸಬ್ಸಿಡಿಯನ್ನು ಆಂಧ್ರ ಮಾದರಿಯಲ್ಲಿ ಹೆಕ್ಟೇರ್‍ಗೆ ಇಪ್ಪತ್ತು ಸಾವಿರ ರೂ.ಗಳನ್ನು ನೀಡಬೇಕು ಎಂದು ರೈತರು ಜಿಲ್ಲಾಧಿಕಾರಿಯನ್ನು ವಿನಂತಿಸಿದರು.
ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಜಿಲ್ಲಾ ಸಂಚಾಲಕ ಧನಂಜಯ, ಎಂ.ಬಿ.ತಿಪ್ಪೇಸ್ವಾಮಿ, ಜಿ.ಹೆಚ್.ತಿಪ್ಪೇಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.