ಚಿತ್ರದುರ್ಗ
ರಾಜ್ಯದ ಎಲ್ಲರಿಗೂ ಒನಕೆ ಓಬವ್ವನ ಪರಿಚಯವಿದೆ. ಚಿತ್ರದುರ್ಗದ ಪಾಳೆಗಾರರ ನಡುವಿನ ಒಡನಾಟ ಹಾಗೂ ಓಬವ್ವನ ಬಾಲ್ಯ ಸೇರಿದಂತೆ ಇನ್ನಿತರ ಸನ್ನಿವೇಶಗಳನ್ನಟ್ಟಿಕೊಂಡು ಚಿತ್ರದುರ್ಗದ ಒನಕೆ ಓಬವ್ವ ಚಿತ್ರಿಕರಿಸಲಾಗಿದೆ ಎಂದು ಕಾದಂಬರಿಕಾರ ಬಿ.ಎಲ್. ವೇಣು ಹೇಳಿದರು.
ಐಶ್ವರ್ಯ ಪೋರ್ಟ್ ಸಭಾಂಗಣದಲ್ಲಿ ಭಾಗ್ಯೋದಯ ಸಿನಿ ಕ್ರಿಯೇಷನ್ಸ್ ನಿಂದ ಹಮ್ಮಿಕೊಂಡಿದ್ದ ತಮ್ಮ ಐತಿಹಾಸಿಕ ಕಾದಂಬರಿ ಆಧಾರಿತ ‘ಚಿತ್ರದುರ್ಗದ ಒನಕೆ ಓಬವ್ವ’ ಚಿತ್ರದ ಪೋಸ್ಟರ್ ಹಾಗೂ ಧ್ವನಿ ಸುರಳಿ ಬಿಡುಗಡೆ ಮಾಡಿ ಮಾತನಾಡಿದರು.
ಓಬವ್ವನಲ್ಲಿ ನಾಡು, ನುಡಿ, ಚಿತ್ರದುರ್ಗದ ಪ್ರೇಮವಿತ್ತು. ಒನಕೆಯಿಂದ ಕೋಟೆಯನ್ನು ರಕ್ಷಣೆ ಮಾಡಿದ್ದಾರೆ. ಚಿತ್ರದಲ್ಲಿ ಹಾಡು, ಸಂಗೀತ, ನಟನೆ ಅದ್ಭುತವಾಗಿ ಮೂಡಿಬಂದಿದೆ. ಐತಿಹಾಸಿಕ ಸಿನಿಮಾ ಮಾಡುವುದು ಇಂದಿನ ದಿನಗಳಲ್ಲಿ ಕಷ್ಟದ ಸಂಗತಿ. ಹೊಸ ನಟರು ಉತ್ತಮವಾಗಿ ನಟಿಸಿದ್ದಾರೆ. ಕನ್ನಡಿಗರು ಹೆಚ್ಚು ಕನ್ನಡ ಸಿನಿಮಾ ನೋಡಲಿ. ಚಿತ್ರದುರ್ಗದ ಎಲ್ಲ ಓಬವ್ವಂದಿರು ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ನೋಡಬೇಕು. ಎಂದರು.
ಶಾಸಕ ಟಿ. ರಘುಮೂರ್ತಿ ಮಾತನಾಡಿ, ಚಿತ್ರದುರ್ಗ ಐತಿಹಾಸ ಪ್ರಸಿದ್ದ ಜಿಲ್ಲೆ. ನಾಗರಹಾವು, ಕಲ್ಲರಳಿ ಹೂವಾಗಿ ಚಿತ್ರಗಳು ಯಶಸ್ವಿಯಾಗಿವೆ. ಅದರಂತೆ ಒನಕೆ ಓಬವ್ವ ಚಿತ್ರವು ಯಶಸ್ವಿಯಾಗಲಿ ಎಂದ ಅವರು ಐತಿಹಾಸಿಕ ಚಿತ್ರಗಳನ್ನು ನೋಡುವವರು ಇಂದಿನ ದಿನಗಳಲ್ಲಿ ನೋಡುವುದು ಕಡಿಮೆಯಾಗಿದೆ. ಐತಿಹಾಸಿಕ ಚಲನ ಚಿತ್ರಗಳನ್ನು ನಿರ್ಮಾಣ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು ಎಂದ ಶಾಸಕರು ಕಾದಂಬರಿಕಾರ ಬಿ.ಎಲ್. ವೇಣು ಅವರು ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಲಿ ಎಂದರು.
ನಿರ್ದೇಶಕ ಪುರುಷೋತ್ತಮ್ ಓಂಕಾರ್ ಮಾತನಾಡಿ, ಐತಿಹಾಸಿಕ, ಪೌರಾಣಿಕ ಸಿನಿಮಾ ಮಾಡಲು ಯಾರು ಸಹ ಮುಂದಾಗುತ್ತಿಲ್ಲ. ಸಂಸ್ಕೃತಿ ಉಳಿಸುವ ಸಿನಿಮಾ ನಿರ್ಮಾಣವಾಗಬೇಕು .ಇಂದಿನ ಯಾರು ಕೂಡ ಮನಸ್ಸು ಪೂರ್ವಕವಾಗಿ ಸಿನಿಮಾ ನೋಡುತ್ತಿಲ್ಲ. ಪ್ರೇಕ್ಷಕರ ಅಭಿರುಚಿಗೆ ಅನುಗುಣವಾಗಿ ಸಿನಿಮಾ ಮಾಡಬೇಕು. ಒನಕೆ ಓಬವ್ವ ಚಿತ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ಮಾಪಕ ಎ.ದೇವರಾಜ್ ,ಎಸ್. ಆರ್. ಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಹಿರಿಯ ನಟಿ ಪುಷ್ಪಾ ಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ವೈಶಾಲಿ ನರ್ಸಿಂಗ್ ಹೋಂನ ಡಾ.ರಾಮಚಂದ್ರನಾಯಕ, ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ನಟರಾದ ಗಣೇಶ್, ಶಿಲ್ಪಗೌಡ, ಪ್ರವೀಣ್ ದಾಸ್ ಇದ್ದರು.