ಬ್ಯಾಡಗಿ:
ಎರಡು ಧರ್ಮ ಅಥವಾ ದೇಶಗಳು ಒಂದುಗೂಡಲು ರಾಜತಾಂತ್ರಿಕ ನಿರ್ಣಯಗಳಿಗಿಂತಲೂ ಸಾಂಸ್ಕತಿಕ ಮನಸ್ಸುಗಳು ಹೆಚ್ಚು ಪರಿಣಾಮಕಾರಿ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಆಂಜನೇಯ ಯುವಕ ಮಂಡಳದ ಆಶ್ರಯದಲ್ಲಿ ಗಣೇಶೋತ್ಸವದ ಅಂಗವಾಗಿ ಪಟ್ಟಣದ ವಾಜಪೇಯಿ ರಂಗಮಂದಿರದಲ್ಲಿ ಆಯೋಜಿಸಿದ್ದ ಸಂಕಮ್ಮ ಸಂಕಣ್ಣನವರ ವಿರಚಿತ ಕವನಗಳ ಧ್ವನಿ ಸುರುಳಿ ‘ಗಾನಾಂಕುರ’ ಸಿಡಿ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮನಸ್ಸುಗಳಲ್ಲಿ ಸಾಮ್ಯತೆ ಮತ್ತು ಸ್ಪರ್ಶತೆ ಇದ್ದಲ್ಲಿ ಭಾವನೆಗಳ ಸಮ್ಮಿಲನವಾಗಲು ಸಾಧ್ಯ ಇಂತಹ ಸಂದರ್ಭಗಳಲ್ಲಿ ಎದುರಾಗುವ ಎಂತಹ ಬಿಕ್ಕಟ್ಟನ್ನು ಕೂಡ ಬಗೆ ಹರಿಸಬಹುದಾಗಿದೆ ಎಂದರು.
ಭಾರತೀಯ ಪರಂಪರೆ ಮತ್ತು ಇಲ್ಲಿನ ಸಂಸ್ಕøತಿಗೆ ಸಮನಾದ ದೇಶ ಇನ್ನೊಂದಿಲ್ಲ ಇಲ್ಲಿನ ಸಂಸ್ಕøತಿಯನ್ನು ಯಾವ ಪದಗಳಿಂದ ಹೊಗಳಿದರೂ ಸಾಲದು, ಅದರಲ್ಲೂ ಸಂಪ್ರದಾಯ ಆಚರಣೆಗಳಲ್ಲಿ ಅನ್ಯ ಧರ್ಮೀಯರ ಜೊತೆ ಕಾಣುವಂತಹ ಭಾತೃತ್ವ ಮನೋಭಾವನೆ ಅತ್ಯದ್ಭುತವಾಗಿದೆ, ಈ ಹಿನ್ನೆಲೆಯಲ್ಲಿ ಸರ್ವ ಧರ್ಮಗಳ ಸಮ್ಮಿಲನವಾಗಿ ಗಣೇಶೋತ್ಸವದ ಆಚರಣೆಗಳು ನಡೆಯಬೇಕು, ಮತ್ತು ಅದರ ಅಂಗವಾಗಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳು ಸಹ ಉತ್ಕøಷ್ಟವಾಗಿರಬೇಕು ಇಂತಹ ವಾತಾವರಣದಲ್ಲಿ ನಡೆಯುವ ಹಬ್ಬದಾಚರಣೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಈ ಹಿನ್ನೆಲೆಯಲ್ಲಿ ಸ್ಥಳೀಯ ಆಂಜನೇಯ ಯುವಕ ಮಂಡಳಿಯ ಕಾರ್ಯವೈಖರಿ ಶ್ಲಾಘನೀಯ ಎಂದರು.
ಸಾಹಿತ್ಯದ ಬಹುಮುಖ ಪ್ರತಿಭೆಗಳಿವೆ:ಜಿಲ್ಲೆಯಲ್ಲಿಯೂ ಸಾಹಿತ್ಯದ ಬಹುಮುಖ ಪ್ರತಿಭೆಗಳು ಅನಾವರಣಗೊಂಡಿವೆ, ಅಷ್ಟೇ ಏಕೆ ಇಲ್ಲಿನ ಸಾಹಿತಿಗಳು ನಮ್ಮ ಜಿಲ್ಲೆಯ ಸಂಸ್ಕøತಿಯನ್ನು ಎತ್ತಿ ಹಿಡಿಯುವ ಮೂಲಕ ವಿಶ್ವದ ಭೂಪಟದಲ್ಲಿ ಜಿಲ್ಲೆಯ ಹೆಸರು ಅಚ್ಚಯಳಿಯದಂತೆ ಮಾಡಿದ್ದಾರೆ, ಅವರೆಲ್ಲರ ಮಾರ್ಗದರ್ಶನದಲ್ಲಿ ಕಿರಿಯ ಸಾಹಿತಿಗಳು ತಮ್ಮ ಸಾಹಿತ್ಯದ ಬದುಕನ್ನು ಮುಂದುವರೆಸಿದ್ದೇ ಆದಲ್ಲಿ ಜಿಲ್ಲೆಯಲ್ಲಿ ಸಾಹಿತ್ಯ ಇನ್ನಷ್ಟು ಶ್ರೀಮಂತಗೊಳ್ಳಲಿದೆ ಎಂದರು.
ಪರಿಶ್ರಮವಿಲ್ಲದೇ ಕನಸು ಸಾಕಾರಾಗೊಳ್ಳಲು ಸಾಧ್ಯವಿಲ್ಲ:ಜಪಾನ್ ಮಾದರಿಯಲ್ಲಿ ದೇಶವನ್ನು ಮುನ್ನಡೆಸುವ ಕಾರ್ಯ ಭಾರತದಲ್ಲಾಗಬೇಕು ನಿವೃತ್ತಿ ಇಲ್ಲದ ಬದುಕನ್ನು ಸಾಗಿಸುತ್ತಿರುವ ಅಲ್ಲಿನ ಜನರು ‘ದೇಶಕ್ಕಾಗಿ ನಾನು’ ಎಂಬ ತತ್ವದಡಿ ಮುಂದಡಿಯಿಡುತ್ತಿದ್ದಾರೆ, 104 ವರ್ಷದ ವಯೋವೃದ್ದ ವೈದ್ಯನೊಬ್ಬ ಇಂ ದಿಗೂ ಜನರಿಗೆ ಚಿಕತ್ಸೆ ನೀಡುತ್ತಿರುವುದು ಇದಕ್ಕೊಂದು ಉದಾಹರಣೆ, ಕಳೆದ 1945 ರಲ್ಲಿ ನೆಲಸಮವಾಗಿದ್ದ ಜಪಾನ ಆರೇಳು ದಶಕಗಳಲ್ಲಿ ಮತ್ತೆ ವಿಶ್ವ ಭೂಪಟದಲ್ಲಿ ಗುರ್ತಿಸಿ ಕೊಳ್ಳುವಂತೆ ಮಾಡಿದ್ದಾರೆ, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ದೇಶಕ್ಕಾಗಿ ಪರಿಶ್ರಮ ಹಾಕುವ ಮೂಲಕ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವಂತೆ ಕರೆ ನೀಡಿದರು.
ನಡೆದಾಡುವ ವಿಶ್ವವಿದ್ಯಾಲಯಗಳು:ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಜಾನಪದ ಸಾಂಸ್ಕøತಿಕ ಕಲೆಗಳು ಬರವಣಿಗೆ ರೂಪವಿಲ್ಲದ ನಡೆ ದಾಡುವ ವಿಶ್ವವಿದ್ಯಾಲಯಗಳು, ಅವುಗಳು ಪೌರಾಣಿಕ ತಳಹದಿಯಲ್ಲಿದ್ದರೂ ಸಮಾಜದ ತಿದ್ದು ತೀರುವಳಿಗೆ ದಿವ್ಯೌಷದವಿದ್ದಂತೆ, ಹಬ್ಬದಾಚರಣೆ ನೆಪದಲ್ಲಿ ಭಾಷೆ, ಕಲೆ, ಸಾಹಿತ್ಯಗಳು ಸುಮನ ಮನೋಹರವಾಗಿ ಅನಾವರಣಗೊಳ್ಳುತ್ತಿರುವ ವಿಷಯ ನಿಜಕ್ಕೂ ಸ್ವಾಗತಾರ್ಹ ಅದರಲ್ಲೂ ಸಾಹಿತಿ ಸಂಕಮ್ಮ ಸಂಕಣ್ಣನವರ ಅವರ ಹಾಡುಗಳಿಗೆ ರಾಗ ಸಂಯೋಜನೆ ನೀಡುವ ಮೂಲಕ ಸ್ವತಃ ಹಿನ್ನೆಲೆಗಾಯಕರಾದ ಪ್ರಸನ್ನ ಭೋಜಶೆಟ್ಟರ ಎಂಬ ಬಹುಮಖ ಪ್ರತಿಭೆ ಇಂದು ನಮ್ಮೆಲ್ಲರಿಗೂ ಪರಿಚಯವಾಗಿದೆ ಎಂದರು.
ಗುರ್ತಿಸಿದ್ದಕ್ಕೆ ಚಿರಋಣಿ: ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಸಂಕಮ್ಮ ಸಂಕಣ್ಣನವರ ಮಾತನಾಡಿ, ಸಾಹಿತಿಯನ್ನು ಮುಖ್ಯವಾಹಿನಿಗೆ ತರಬೇಕಾದಲ್ಲಿ ಸಂಗೀತದ ಅವಶ್ಯ, ಶಿಶುನಾಳ ಶರೀಫರಂತಹ ತತ್ವಜ್ಞಾನಿಯ ಕುರಿತು ತಮ್ಮ ಮಧುರ ವಾದ ಕಂಠಗಳಿಂದ ಹಾಡುಗಳನ್ನು ಹಾಡುವ ಮೂಲಕ ವಿಶ್ವಕ್ಕೆ ಪರಿಚಯಿಸಿಕೊಟ್ಟ ಕೀರ್ತಿ ದಿವಂಗತ ಸಿ.ಅಶ್ವಥ ಅವರಿಗೆ ಸಲ್ಲುತ್ತದೆ, ಗಾನಯೋಗಿ ಪಂಚಾಕ್ಷರಿ ಗವಾಯಿ ಎಂಬ ಅಂಧ ಕಲಾವಿದನೊಬ್ಬನ ಅಗಾಧ ಶಕ್ತಿ, ಜ್ಞಾನ ಸಾಧನೆ ಚಲನಚಿತ್ರ ರೂಪದಲ್ಲಿ ಬಂದ ಮೇಲೆಯೇ ಇಡೀ ವಿಶ್ವಕ್ಕೆ ಪರಿಚಯವಾಯಿತು ಎಂದರು.
ಇದಕ್ಕೂ ಮುನ್ನ ಅಟಲ್ ಬಿಹಾರಿ ವಾಜಪೇಯಿ ಹಾಗೂ ರೈತ ಮುಖಂಡ ಕನ್ನಪ್ಪ ಕೊಪ್ಪದ ಅವರ ನಿಧನಕ್ಕೆ ಮೌನಾಚರಣೆ ಮಾಡಲಾಯಿತು, ವೇದಿಕೆಯಲ್ಲಿ ಪುರಸಭೆ ಸದಸ್ಯ ಎಂ.ಆರ್.ಭದ್ರಗೌಡ್ರ, ಸಂಗೀತಗಾರ ಪ್ರಸನ್ನ ಭೋಜಶೆಟ್ಟರ, ರಾಜು ತವರದ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಶಂಭು ಮಠದ ಸ್ವಾಗತಿಸಿದರು, ಜೀವರಾಜ ಛತ್ರ ನಿರೂಪಿಸಿದರು, ರಮೇಶ ಮೋಟೆಬೆನ್ನೂರ ವಂದಿಸಿದರು.