ಆಯೋಗದ ಮಾರ್ಗಸೂಚಿಯಂತೆ ಮೂರುದಿನಗಳಲ್ಲಿ ಮತಗಟ್ಟೆಗಳು ಸಿದ್ಧವಾಗಬೇಕು : ಡಾ.ಅಖ್ತರ್ ರಿಯಾಜ್

ಹಾವೇರಿ

         ಭಾರತ ಚುನಾವಣಾ ಆಯೋಗದ ಮಾರ್ಗ ಸೂಚಿಯಂತೆ ಮತದಾರರಿಗೆ ಮತಗಟ್ಟೆಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಲಭ್ಯವಾಗಬೇಕು. ಮೂರು ದಿನಗಳ ಒಳಗಾಗಿ ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಲು ಹಾವೇರಿ ಲೋಕಸಭಾ ಕ್ಷೇತ್ರದ ನಿಯೋಜಿತ ಕೇಂದ್ರ ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕರಾದ ಡಾ.ಅಖ್ತರ್ ರಿಯಾಜ್ ತಾಕೀತು ಮಾಡಿದರು.

          ಮತಗಟ್ಟೆಗಳಲ್ಲಿ ಕನಿಷ್ಠ ಮೂಲ ಸೌಕರ್ಯ ಖಾತ್ರಿ ಕುರಿತಂತೆ ಮಂಗಳವಾರ ಗದಗ ಮತ್ತು ಹಾವೇರಿ ಜಿಲ್ಲೆಯ ಸಹಾಯಕ ಚುನಾವಣಾಧಿಕಾರಗಳು, ತಹಶೀಲ್ದಾರಗಳು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಸಿಬ್ಬಂದಿಗಳ ಸಭೆ ನಡೆಸಿದ ಅವರು, ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಕಚೇರಿಯಿಂದ ಮತಗಟ್ಟೆಗಳಿಗೆ ತೆರಳಿ ಮೂಲ ಸೌಕರ್ಯಗಳ ಕುರಿತಂತೆ ಪರಿಶೀಲನೆ ನಡೆಸಿ ಎಂದು ಸೂಚಿಸಿದರು.

          ನಮ್ಮಲ್ಲಿ ಸಮಯ ಕಡಿಮೆ ಇದೆ. ತ್ವರಿತವಾಗಿ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ಮತಗಟ್ಟೆವಾರು ಭೇಟಿ ನೀಡಿ ಮೂಲ ಸೌಕರ್ಯಗಳ ಕುರಿತು ಪುರ್ನ ಪರಿಶೀಲನೆ ನಡೆಸಿ ಖಾತ್ರಿ ಪಡಿಸಿಕೊಳ್ಳಬೇಕು. ಯಾವ ಮತಗಟ್ಟೆಗಳಲ್ಲಿ ಸೌಲಭ್ಯಗಳ ಕೊರತೆ ಇದೆಯೋ ಆ ಮತಗಟ್ಟೆಗೆ ಮೂರು ದಿನಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ಪೂರ್ಣಗೊಳಿಸಬೇಕೆಂದು ಸೂಚಿಸಿದರು.

         ಪ್ರತಿ ಮತಗಟ್ಟೆಯಲ್ಲೂ ಕನಿಷ್ಠ ಸೌಲಭ್ಯಗಳಾದ ಶೌಚಾಲಯ, ವಿಕಲಚೇತನರಿಗೆ ರ್ಯಾಂಪ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಮತದಾರರು ಸರತಿ ಸಾಲಿನಲ್ಲಿ ನಿಲ್ಲಲು ನೆರಳಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.
ವೀಶೇಷ ಚೇತನರ ಮತಗಟ್ಟೆ, ಸಖಿ ಮತಗಟ್ಟೆ ಹಾಗೂ ಮಾದರಿ ಮತಗಟ್ಟೆಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಎಲ್ಲ ಮೂಲ ಸೌಕರ್ಯ ಕಲ್ಪಿಸುವುದರ ಜೊತೆಗೆ ಮತದಾರರನ್ನು ಆಕರ್ಷಿಸುವಂತೆ ವಿನ್ಯಾಸಗೊಳಿಸಬೇಕು. ಮಾದರಿ ಮತಗಟ್ಟೆಗಳಲ್ಲಿ ಹಬ್ಬದ ವಾತಾವರಣವನ್ನು ಉಂಟುಮಾಡುವ ವ್ಯವಸ್ಥೆ ಕಲ್ಪಿಸಬೇಕು. ಒಂದೊಮ್ಮೆ ಮಾದರಿ ಮತಗಟ್ಟೆಗಳಾಗಿ ಗುರುತಿಸಿರುವ ಕಟ್ಟಡಗಳಲ್ಲಿ ಸ್ಥಳವಕಾಶದ ಕೊರತೆ ಇದ್ದರೆ ಪರ್ಯಾಯ ಕಟ್ಟಡವನ್ನು ಗುರುತಿಸಿ ಆಯೋಗದಿಂದ ಅನುಮತಿ ಪಡೆಯುವಂತೆ ಸಲಹೆ ನೀಡಿದರು.

            ಕೆಲವು ಶಾಲಾ ಕೊಠಡಿಯ ಗೋಡೆಗಳ ಮೇಲೆ ವಿವಿಧ ಚಿತ್ರಗಳನ್ನು ಹಾಗೂ ಬರಹಗಳನ್ನು ಪೇಂಟ್ ಮಾಡಲಾಗಿದೆ. ಈ ಎಲ್ಲವನ್ನು ಸುಣ್ಣ, ಬಣ್ಣಗಳಿಂದ ಮರೆಮಾಚಬೇಕು ಎಂದು ಸೂಚಿಸಿದರು.ಈಗಾಗಲೇ ನಾನು ಕ್ಷೇತ್ರದ ಕನಿಷ್ಠ 200 ಮತಗಟ್ಟೆಗಳಿಗೆ ಖುದ್ದಾಗಿ ಭೇಟಿ ನೀಡಿರುವೆ. ಕೆಲವು ಮತಗಟ್ಟೆಗಳು ಇನ್ನೂ ಮೂಲಸೌಕರ್ಯಗಳ ಕೊರತೆ ಕಾಣುತ್ತಿದೆ. ಈ ಕೊರತೆಯನ್ನು ತೀವ್ರ ತರದಲ್ಲಿ ನೀಗಿಸಬೇಕು ಎಂದು ಸೂಚಿಸಿದರು. ಶಾಲೆಯಲ್ಲಿ ನೀರಿನ ಸರಬರಾಜಿನ ಕೊರತೆ ಕಂಡುಬಂದಲ್ಲಿ ಮತದಾನದ ದಿನ ಟ್ಯಾಂಕರ್ ಮೂಲಕ ಪರ್ಯಾಯವಾಗಿ ನೀರಿನ ಸೌಕರ್ಯ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

     ಮುಂದಿನ ಐದಾರು ದಿನದಲ್ಲಿ ವೆಚ್ಚ ವೀಕ್ಷಕರು, ಪೊಲೀಸ್ ವೀಕ್ಷಕರೊಂದಿಗೆ ಎರಡನೇ ಸುತ್ತಿನಲ್ಲಿ ಮತಗಟ್ಟೆಗಳಿಗೆ ಭೇಟಿ ನೀಡುವೆ. ಈ ಸಂದರ್ಭದಲ್ಲಿ ಎಲ್ಲ ಮತಗಟ್ಟೆಗಳಲ್ಲಿ ಪೂರ್ಣ ಪ್ರಮಾಣದ ಸೌಲಭ್ಯಗಳಿರಬೇಕು. ಒಂದೊಮ್ಮೆ ಕೊರತೆ ಕಂಡುಬಂದರೆ ಮುಂದಿನ ಕ್ರಮ ಕೈಗೊಳ್ಳಬೇಕಾದೀತು ಎಂದು ಹೇಳಿದರು.

      ಅಕ್ರಮಗಳ ಬಗ್ಗೆ ನಿಗಾ: ಚುನಾವಣಾ ಅಕ್ರಮಗಳ ಬಗ್ಗೆ ಕಣ್ಗಾವಲು ಬಿಗಿಗೊಳಿಸಬೇಕು. ಎಲ್ಲ ಚೆಕ್ ಪೋಸ್ಟ್ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಸ್ಥಿರ ಕಣ್ಗಾವಲು ತಂಡ ಕಾರ್ಯಾಚರಣೆಯನ್ನು ತೀವ್ರಗೊಳಿಸಬೇಕು. ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ತೀವ್ರ ಗಮನಹರಿಸಬೇಕು. ವಾಹನಗಳ ಚಲನವಲನಗಳ ಬಗ್ಗೆ ತೀವ್ರ ಗಮನಹರಿಸಬೇಕು. ಚುನಾವಣಾ ಸಭೆ-ಸಮಾರಂಭಗಳ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಯಾಗಿದೆಯೇ ಎಂಬುದರ ಬಗ್ಗೆ ತೀವ್ರ ಗಮನಹರಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗದ ಹಾವೇರಿ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ಐ.ಆರ್.ಎಸ್. ಅಧಿಕಾರಿ ಹಸನ್ ಅಹ್ಮದ ಅವರು ಸೂಚಿಸಿದರು.

        ಹಣ, ವಸ್ತು ಹಾಗೂ ಮದ್ಯ ಹಂಚಿಕೆ, ಸಾಗಾಣಿಕೆ ಚಟುವಟಿಕೆಗಳ ಬಗ್ಗೆ ತೀವ್ರ ತರವಾದ ಗಮನಹರಿಸಬೇಕು. ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾವಹಿಸಬೇಕು. ತಮ್ಮದೇ ಮೂಲಗಳಿಂದ ಮಾಹಿತಿ ಸಂಗ್ರಹಿಸಬೇಕು. ಹಣ ವಶಪಡಿಸಿಕೊಂಡಿರುವ ಪ್ರಕರಣಗಳ ಜಿಲ್ಲೆಯಲ್ಲಿ ಬಹಳ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಫಲಿತಾಂಶವನ್ನು ಈ ತಂಡಗಳಿಂದ ನಿರೀಕ್ಷಿಸುತ್ತೇನೆ ಎಂದು ಹೇಳಿದರು.

          ಸಹಾಯಕ ಚುನವಣಾಧಿಕಾರಿಗಳಿಗೆ ಅಂಗರಕ್ಷಕರ ಪಡೆ ಅಗತ್ಯವಾಗಿದೆ. ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಸೂಕ್ತ ಪೊಲೀಸ್ ರಕ್ಷಣೆಯೊಂದಿಗೆ ತೆರಳಿ ಹಾಗೂ ಫ್ಲೈಯಿಂಗ್ ಸ್ಕ್ವಾಡ್‍ಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಕಲ್ಪಿಸಿ. ಹಗಲು ರಾತ್ರಿ ಎನ್ನದೇ ಅಕ್ರಮಗಳ ಬಗ್ಗೆ ತೀವ್ರ ಕಣ್ಗಾವಲಿರಿಸುವವಂತೆ ಸಾಮಾನ್ಯ ವೀಕ್ಷಕರಾದ ಐ.ಎ.ಎಸ್. ಅಧಿಕಾರಿ ಡಾ.ಅಖ್ತರ್ ರಿಯಾಜ್ ಅವರು ಹೇಳಿದರು.

       ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾತನಾಡಿ, ಮತಗಟ್ಟೆಗಳ ದುರಸ್ತಿಗೆ ಈಗಾಗಲೇ ಅನುದಾನ ಬಿಡುಗಡೆಮಾಡಲಾಗಿದೆ. ರ್ಯಾಂಪ್ ವ್ಯವಸ್ಥೆ, ಕಟ್ಟಡ ದುರಸ್ತಿ, ಶೌಚಾಲಯ, ಕುಡಿಯುವ ನೀರು, ಪೇಂಟ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ತುರ್ತಾಗಿ ಕಲ್ಪಿಸಬೇಕು. ವೀಕ್ಷಕರ ಸೂಚನೆಯಂತೆ ಕಾಲ ಮಿತಿಯೊಳಗೆ ಸೌಕರ್ಯ ಕಲ್ಪಿಸಿ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಗದಗ ಮತ್ತು ಹಾವೇರಿ ಜಿಲ್ಲೆಯ ವಿಧಾನಸಭಾವಾರು ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರ ಇತರ ಅಧಿಕಾರಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link