ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ:

  ಪೆಟ್ರೋಲ್, ಡೀಸೆಲ್ ಮತ್ತು ಅಡಿಗೆ ಅನಿಲಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್‍ನ ಕಾರ್ಮಿಕ ಘಟಕದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿರುವ ಗಾಂಧೀ ಪ್ರತಿಮೆ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ನಿರಂತರವಾಗಿ ಇಂಧನ ಬೆಲೆ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

   ಈ ಸಂದರ್ಭದಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಿ.ಬಸವರಾಜ್, ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚ ತೈಲ ಬೆಲೆ ಕಡಿಮೆ ಇದ್ದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದಿನೇ ದಿನೇ ಪೆಟ್ರೋಲ್, ಡೀಸೆಲ್ ಮತ್ತು ಅಡಿಗೆ ಅನಿಲಗಳ ಬೆಲೆ ಹೆಚ್ಚಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಆರೋಪಿಸಿದರು.

   ಯು.ಪಿ.ಎ. ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಒಂದು ಬ್ಯಾರಲ್‍ಗೆ 130 ಡಾಲರ್ ಇದ್ದಾಗ, ದೇಶದಲ್ಲಿ 50 ರೂ.ಗೆ ಡೀಸೆಲ್ ಹಾಗೂ 60 ರೂ.ಗೆ ಪೆಟ್ರೋಲ್ ಹಾಗೂ 380 ರೂಪಾಯಿಗೆ ಒಂದು ಅಡಿಗೆ ಅನಿಲದ ಸಿಲೆಂಡರ್ ದೊರೆಯುತ್ತಿತ್ತು. ಆದರೆ, ಇಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಒಂದು ಬ್ಯಾರಲ್‍ಗೆ ಕೇವಲ 70 ರೂಪಾಯಿ ನಿಗದಿಯಾಗಿದ್ದರೂ ದೇಶದಲ್ಲಿ 75 ರೂ.ಗೆ ಲೀಟರ್ ಡಿಸೆಲ್, 86 ರೂ.ಗೆ. ಲೀಟರ್ ಪೆಟ್ರೋಲ್ ಹಾಗೂ ಅಡುಗೆ ಅನಿಲದ ಸಿಲಿಂಡರ್ ಒಂದಕ್ಕೆ 820 ರೂ. ನಿಗದಿ ಮಾಡುವ ಮೂಲಕ ಕೇಂದ್ರ ಸರ್ಕಾರ ಜನತೆಯ ಬದುಕು ದುಸ್ತರಗೊಳಿಸಿದೆ. ಆದ್ದರಿಂದ ಜನತೆ ಬರು ಚುನಾವಣೆಯಲ್ಲಿ ಈ ಜನ ವಿರೋಧಿ ಮೋದಿ ಸರ್ಕಾರವನ್ನು ಕಿತ್ತು ಹಾಕಬೇಕೆಂದು ಕರೆ ನೀಡಿದರು.

  ಪ್ರತಿತಿಂಗಳ ಕೊನೆಯ ಭಾನುವಾರ ಪ್ರಧಾನಿ ಮೋದಿ ನೀಡುವ ಮನ್‍ಕೀ ಬಾತ್ ಕಾರ್ಯಕ್ರಮದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಯುವಕಾಂಗ್ರಸ್ ಮಾಧ್ಯಮ ಸಂಚಾಲಕ ಮೈನುದ್ದೀನ್, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಅಲ್ಲಾವಲಿಘಾಜಿ ಖಾನ್, ಕೆ.ಜಿ. ರಹಮತ್‍ವುಲ್ಲಾ, ಹೆಚ್.ಕೆ. ಮುಶರಫ್, ಅಶ್ರಫ್ ಅಲಿ, ಬಿ. ವಿನಾಯಕ, ಡಿ. ಶಿವಕುಮಾರ್, ರಮೇಶ್, ಎಂ.ಜಿ. ನಾಗೇಂದ್ರ, ಲಿಯಾಖತ್ ಅಲಿ, ಮಮತಾಜ್ ಬೇಗಂ, ಉಮಾ ತೋಟಪ್ಪ, ಅಬ್ದುಲ್ ಜಬ್ಬಾರ್, ಸಾಧಿಕ್ ಖಾನ್ ಮತ್ತಿತರರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link