
ಬೆ0ಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೩ ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಇನ್ನೂ ಸರ್ಕಾರಿ ನಿವಾಸವನ್ನು ಮಂಜೂರು ಮಾಡಿಲ್ಲ. ಹುದ್ದೆ ಅಲಂಕರಿಸಿದಾಗಿನಿAದ ಈವರೆಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿಕೊಂಡಿ ದ್ದರೂ, ರಾಜ್ಯ ಸರ್ಕಾರವು ಸ್ಪಂದಿಸಿಲ್ಲ ಎಂದು ಅವರು ಆಡಳಿತ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಷ್ಟಾಚಾರದ ಪ್ರಕಾರ ವಿಧಾನಸಭೆ ಹಾಗೂ ವಿಧಾನಪರಿಷತ್ ವಿಪಕ್ಷದ ನಾಯಕರಿಗೆ ಸರ್ಕಾರಿ ಬಂಗಲೆ ನೀಡಬೇಕು. ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಕುಮಾರ ಕೃಪ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆ ನೀಡಲಾಗಿತ್ತು. ಇದು ಅದೃಷ್ಟದ ಬಂಗಲೆ ಎಂದೇ ನಂಬಲಾಗಿತ್ತು. ಇದೀಗ ಆ ಬಂಗಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಉಳಿದುಕೊಂಡಿದ್ದಾರೆ.
ಆರ್.ಅಶೋಕ್ ಅವರು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ ಅಥವಾ ಕುಮಾರ ಪಾರ್ಕ್ನಲ್ಲಿರುವ ನಿವಾಸಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಇದುವರೆಗೆ ೫ ರಿಂದ ೬ ಬಾರಿ ಅಧಿಕೃತ ಪತ್ರಗಳನ್ನು ಬರೆದಿದ್ದಾರೆ. ಹಲವು ಬಾರಿ ಪತ್ರ ಬರೆದು ಹಾಗೂ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಅಧಿಕೃತ ನಿವಾಸ ಇಲ್ಲದಿರುವುದರಿಂದ, ಅವರು ತಮ ಸ್ವಂತ ನಿವಾಸವಾದ ಜಯನಗರದಿಂದಲೇ ಅಧಿಕೃತ ಸಭೆಗಳನ್ನು ನಡೆಸುತ್ತಿದ್ದಾರೆ.
ಈ ಬಗ್ಗೆ ಸ್ವತಃ ಆರ್.ಅಶೋಕ್ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ನಾವು ಐದಾರು ಬಾರಿ ಈ ಸಂಬAಧ ಪತ್ರವನ್ನು ಬರೆದಿದ್ದೇವೆ. ಹಾಗಿದ್ದರೂ ಸರ್ಕಾರ ಸ್ಪಂದನೆ ಮಾಡಿಲ್ಲ ಎಂದಿದ್ದಾರೆ. ಬಿಜೆಪಿ ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಿದ್ದು ತಡವಾಗಿ. ವಿರೋಧಪಕ್ಷದ ನಾಯಕ ಸ್ಥಾನಕ್ಕೆ ಅಶೋಕ ಆಯ್ಕೆ ಆದ ಬಳಿಕ ಸರ್ಕಾರಿ ನಿವಾಸ ಕೋರಿ ನಾಲ್ಕು ಪತ್ರಗಳನ್ನು ಬರೆದರೂ ಸರ್ಕಾರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಶೋಕ ಅವರ ವಿಶೇಷ ಅಧಿಕಾರಿ ಈ ಸಂಬAಧ ಮುಖ್ಯ ಕಾರ್ಯದರ್ಶಿಯವರನ್ನು ಎರಡು- ಮೂರು ಬಾರಿ ಭೇಟಿ ಮಾಡಿದ್ದರು. ಬೇಗನೆ ಕೊಡುತ್ತೇವೆ ಎಂದು ಹೇಳಿದರೂ ಇಲ್ಲಿಯವರಿಗೂ ಕೊಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.
ನಂ೧, ಕುಮಾರಕೃಪಾ ಪೂರ್ವ, ನಂ ೧ ರೇಸ್‌ವ್ಯೂ ಕಾಟೇಜ್, ರೇಸ್‌ಕೋರ್ಸ್ ರಸ್ತೆ, ನಂ ೨, ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ ಈ ಮೂರರಲ್ಲಿ ಒಂದನ್ನು ಅಧಿಕೃತ ನಿವಾಸವಾಗಿ ಕೊಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ಈ ಮೂರೂ ನಿವಾಸಗಳು ಖಾಲಿ ಇದ್ದು, ವಿಧಾನಸೌಧಕ್ಕೆ ಹತ್ತಿರದಲ್ಲೇ ಇರುವುದರಿಂದ ಮೂರರಲ್ಲಿ ಒಂದನ್ನು ಕೊಡುವಂತೆ ಅಶೋಕ ಕೋರಿದ್ದಾರೆ.
ಈ ಹಿಂದೆ ತಾವು ಸಚಿವರಾಗಿದ್ದಾಗ ತಮಗೆ ಹಂಚಿಕೆ ಆಗಿದ್ದ ರೇಸ್‌ವ್ಯೂ ಕಾಟೇಜ್ ನಿವಾಸ ಸಂಖ್ಯೆ-೨ನ್ನು ಅಂದಿನ ಸಭಾಧ್ಯಕ್ಷರಿಗೆ ಬಿಟ್ಟುಕೊಟ್ಟಿದ್ದಾಗಿ ಎಂದು ಅವರು ಪತ್ರದಲ್ಲಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಸಿ.ಎಂ ಮುಂದೆಯೇ ಅಸಮಾಧಾನ : ಗುರುವಾರ ವಿಧಾನಸೌಧದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಯ್ಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು ಸಭೆಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಸಭೆಯ ಸಭಾಧ್ಯಕ್ಷ ಯು ಟಿ ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭಾಗವಹಿಸಿದ್ದರು.
ಈ ವೇಳೆ ವಿಷಯ ಪ್ರಸ್ತಾಪಿಸಲು ಅಶೋಕ್ ಅವರು, ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಳಿಸುತ್ತಿದೆ ಅಧಿಕೃತ ವಿಧಾನ ಸಭೆಯ ವಿರೋಧ ಪಕ್ಷದ ನಾಯಕನಿಗೆ ನಿಮ ಸರ್ಕಾರ ಒಂದು ಸರ್ಕಾರಿ ಬಂಗಲೇ ನೀಡದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಈ ರೀತಿ ನಡೆಸಿಕೊಳ್ಳುವುದೇ? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಹಿಂದೆ ನೀವು ವಿರೋಧ ಪಕ್ಷದ ನಾಯಕನಾಗಿದ್ದ ವೇಳೆ ನಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ನಿಮಗೆ ಕೇಳಿದ ಕಡೆ ಸರ್ಕಾರಿ ಬಂಗಲೆಯನ್ನು ಮಂಜೂರು ಮಾಡಿದ್ದೆವು ಮೂರು ವರ್ಷಗಳಲ್ಲಿ ನಾನು ಮುಖ್ಯ ಕಾರ್ಯದರ್ಶಿಯವರಿಗೆ ಆರು ಬಾರಿ ಪತ್ರ ಬರೆದಿದ್ದೇನೆ. ಆದರೂ ಒಂದು ನಿವಾಸ ಮಂಜೂರು ಮಾಡಲು ಸಾಧ್ಯವಾಗಿಲ್ಲ ಎಂದರೆ ಇದನ್ನು ಜವಾಬ್ದಾರಿತ ಸರ್ಕಾರ ಎಂದು ಕರೆಯಬೇಕೇ? ಮುಂದೆ ನಮ ಸರ್ಕಾರ ಬಂದರೆ, ನಾನು ಕೂಡಾ ಹೇಗೆ? ಯಾರಿಗೆ ? ಯಾವಾಗ ? ಮನೆ ಮಂಜೂರು ಮಾಡಬೇಕು ಎಂಬುದು ಗೊತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಇದು ಗಂಭೀರವಾದ ವಿಷಯ ನನಗೆ ಈವರಿಗೆ ಮಾಹಿತಿ ಇರಲಿಲ್ಲ ತಕ್ಷಣವೇ ನಿಮಗೆ ಸರ್ಕಾರಿ ಬಂಗಲೇ ಮಂಜುನಾಥ ಮಾಡಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಅಲ್ಲದೇ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನು ಮಂಡಿಸುವುದಾಗಿ ಸಿಎಂ ಆಶ್ವಾಸನೆ ನೀಡಿದ್ದಾರೆ. ಅಲ್ಲದೆ ಸಭೆಯಲ್ಲಿ ಭಾಗಿಯಾಗಿದ್ದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕೂಡಲೇ ಅಗತ್ಯವಿರುವ ಕಡೆ ನಿವಾಸ ಮಂಜೂರಾತಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.








