ಕೆಆರ್‌ಎಸ್‌ನಲ್ಲಿ ನೀರಿನ ಕೊರತೆ, ಒಂದು ಸಭೆ ನಡೆಸಿಲ್ಲ: ವಿಪಕ್ಷನಾಯಕ ಆರ್.ಅಶೋಕ ಕಿಡಿ – ಎಕರೆಗೆ 50 ಸಾವಿರ ಪರಿಹಾರ ಘೋಷಿಸಿ

 


ಮಂಡ್ಯ / ಶ್ರೀರಂಗಪಟ್ಟಣ: ಮಳೆ ಕೊರತೆಯಿಂದ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಕಡಿಮೆಯಾದರೂ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ. ಕೂಡಲೇ ಸರ್ಕಾರ ಎಕರೆಗೆ 50,000 ರೂ. ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.

ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಒಂದು ತಿಂಗಳಾಗುವ ವೇಳೆಗೆ ರಾಜ್ಯದ ಎಲ್ಲ ಜಲಾಶಯಯಗಳು ಖಾಲಿಯಾಗಿವೆ. ಕೆಆರ್‌ಎಸ್‌ನಲ್ಲಿ 6 ಟಿಎಂಸಿ ನೀರು ಮಾತ್ರ ಇದೆ. ಒಳಹರಿವು 900 ಕ್ಯೂಸೆಕ್ಸ್ ಇದೆ. ಆದರೆ ಹೊರಗೆ ಹೆಚ್ಚು ನೀರು ಬಿಡಲಾಗುತ್ತಿದೆ ಎಂಬ ಅನುಮಾನವಿದೆ. ಪ್ರತಿ ತಿಂಗಳು 3 ಟಿಎಂಸಿಯ ಅಗತ್ಯವಿದೆ. ಇದನ್ನು ಕುಡಿಯುವ ನೀರಿಗೆ ಬಳಸಬಹುದು. 1 ಲಕ್ಷ ಎಕರೆಗಿಂತಲೂ ಅಧಿಕ ಜಮೀನಿನಲ್ಲಿ ರೈತರು ಬೆಳೆ ಬೆಳೆದಿದ್ದಾರೆ. ಆದರೆ ಬೆಳೆ ಬೆಳೆಯಬಾರದು ಎಂದು ಮುಖ್ಯಮಂತ್ರಿ ಕರೆ ನೀಡಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮಿತವ್ಯಯದ ಕರೆ ನೀಡಿದರೆ ಬಾಯಿ ಬಡಿದುಕೊಂಡು ಕಾಂಗ್ರೆಸ್ ಈಗ ರೈತರಿಗೆ ಅದೇ ರೀತಿ ಕರೆ ನೀಡಿದೆ. ಧೈರ್ಯವಿದ್ದರೆ ತಮಿಳುನಾಡು ರೈತರು ಬೆಳೆ ಬೆಳೆಯಬಾರದು ಎಂದು ಕರೆ ನೀಡಬೇಕಿತ್ತು. ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ವಿರುದ್ಧ ನಿರ್ಣಯ ಕೈಗೊಂಡರೂ ಅದರ ವಿರುದ್ಧ ಮಾತಾಡಿಲ್ಲ. ತಮಿಳುನಾಡಲ್ಲಿ ಪಾಲುದಾರ ಪಕ್ಷದ ಒಳಿತಿಗಾಗಿ ನಮ್ಮ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದರು.

ಅಧಿಕಾರಿಗಳ ಪ್ರಕಾರ ಶೇ.5 ರಷ್ಟು ಮಾತ್ರ ಬಿತ್ತನೆ ನಡೆದಿದೆ. ಈ ಸಂದರ್ಭದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ರೈತ ಮುಖಂಡರ ಸಭೆ ಕರೆದು ಬೆಳೆ ಬಗ್ಗೆ ಚರ್ಚಿಸಬೇಕಿತ್ತು. ಆದರೆ ಕಸ, ಸುರಂಗ ರಸ್ತೆ ಮೊದಲಾದ ಯೋಜನೆಗಳಿಗೆ ಟೆಂಡರ್ ಕರೆಯಲು ಗಡಿಬಿಡಿ ಮಾಡುತ್ತಿದ್ದಾರೆ. ಈ ಆಸಕ್ತಿ ರೈತರ ಬಗ್ಗೆ ಇಲ್ಲವಾಗಿದೆ. ಮಳೆ ಕೊರತೆ, ಬಿತ್ತನೆ ಯಾವುದೇ ವಿಷಯದ ಬಗ್ಗೆ ಚರ್ಚಿಸಲು ಒಂದೇ ಒಂದು ಸಭೆ ನಡೆಸಿಲ್ಲ. ಕೃಷಿ ಇಲಾಖೆಗೆ ಸಚಿವರಿಲ್ಲ ಹಾಗೂ ಸಂಪುಟದಲ್ಲಿ ಸಚಿವರೂ ಇಲ್ಲ. ದೆಹಲಿಗೆ ಪೇಮೆಂಟ್ ಕೊಡಲು ಕಾಯುತ್ತಿದ್ದಾರಾ? ಎಂದು ಪ್ರಶ್ನೆ ಮಾಡಿದರು.

ಬರಗಾಲಕ್ಕೆ ಯಾವುದೇ ಸಿದ್ಧತೆಯನ್ನು ಈ ಸರ್ಕಾರ ಮಾಡಿಲ್ಲ. ರೈತರು ಬದಲಿ ಬೆಳೆ ಬೆಳೆಯಲು ಸಲಹೆ ನೀಡುತ್ತಾರೆಯೇ ಹೊರತು ಸರ್ಕಾರದಿಂದ ಯಾವುದೇ ಕ್ರಮ ವಹಿಸಿಲ್ಲ. ರೈತರಿಗಾಗುವ ನಷ್ಟವನ್ನು ಕೊಡುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಬೇಕಿತ್ತು. ಬಿಜೆಪಿ ಅವಧಿಯಲ್ಲಿ ದುಪ್ಪಟ್ಟು ಪರಿಹಾರ ನೀಡಬೇಕಿತ್ತು. ಈಗ ಎಕರೆಗೆ 50,000 ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಎಸ್‌ಐಆರ್‌ನಲ್ಲಿ ಅಧಿಕಾರಿಗಳು ಮನೆಗೆ ಹೋಗಿ ಅರ್ಜಿ ಭರ್ತಿ ಮಾಡಿಸಬೇಕು. ಬಾಂಗ್ಲಾ, ಪಾಕಿಸ್ತಾನಿ ಜನರ ಅನುಕೂಲಕ್ಕಾಗಿ ಮಸೀದಿಗಳಲ್ಲಿ ಅರ್ಜಿ ಭರ್ತಿ ಮಾಡುವುದು ನಾನು ವಿರೋಧಿಸಿದ್ದೇನೆ. ಈ ಬಗ್ಗೆ ಅಧಿಕಾರಿಗಳಿಗೂ ತಿಳಿಸಲಾಗಿದೆ ಎಂದರು.

ಬಿಜೆಪಿ ಅಧ್ಯಕ್ಷರನ್ನು ಹೊರ ತಳ್ಳಿದ ಪೊಲೀಸರು.

ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಕೆಆರೆಸ್ ಜಲಾಶಯ ವೀಕ್ಷಣೆಗೆ ಬಂದ ವೇಳೆ ಶ್ರೀರಂಗಪಟ್ಟಣ ಬಿಜೆಪಿ ಮಂಡಲ ಅಧ್ಯಕ್ಷರನ್ನು ಅವರೊಂದಿಗೆ ಹೋಗಲು ಬಿಡದೆ ಬ್ಯಾರಿಕೇಡ್ ನಿಂದ ಪೊಲೀಸರು ಹೊರ ತಳ್ಳಿದ ಘಟನೆ ನಡೆಯಿತು. ಬರ ಹಾಗೂ ಕೆಆರೆಸ್ ಜಲಾಶಯದ ನೀರು ಖಾಲಿಯಾಗುವುದನ್ನು ಪರಿಶೀಲೀಸರು ಬಂದ ಅಶೋಕ್ ಅವರೊಂದಿಗೆ ಮಾಜಿ ಸಂಸದರು, ಶಾಸಕರು ಹಾಗೂ ಜಿಲ್ಲೆಯ ಬಿಜೆಪಿ ಅಧ್ಯಕ್ಷರು ಹಿರಿಯ ಮುಖಂಡರು ಅವರ ಹಿಂದೆ ಕೆಆರೆಸ್ ಜಲಾಶಯ ವೀಕ್ಷಣೆಗೆ ಹೋಗುವಾಗ ಅವರ ಹಿಂದೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೆಶ್ ಅವರು ಹೋಗುವಾಗ ಅವರನ್ನು ಪೊಲೀಸರು ತಡೆದು ಬ್ಯಾರಿಕೇಡ್ ತೆಗೆದು ಹೊರ ತಳ್ಳಿದರು. ನಂತರ ರಮೇಶ್ ಈ ಕ್ಷೇತ್ರದ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ನಾನು ಎಂದು ಪೊಲೀಸರಿಗೆ ತಿಳಿಸಿದರು. ಅಲ್ಲದೆ ಅಕ್ಕ ಪಕ್ಕದಲ್ಲಿ ನಿಂತಿದ್ದ ಬಿಜೆಪಿ ಮುಖಂಡರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ಅವರೊಬ್ಬರನ್ನು ಒಳ ಬಿಡುವಂತೆ ಕೋರಿಕೊಂಡರೂ ಸಹ ಪ್ರೋಟೋಕಾಲ್ ನಂತೆ ಬಂದ ಕ್ಷೇತ್ರ ಬಿಜೆಪಿ ಅಧ್ಯಕ್ಷರನ್ನು ಜಲಾಶಯ ವೀಕ್ಷಣೆಯ ನಾಯಕರೊಂದಿಗೆ ಬಿಡದೆ ಹೊರ ತಳ್ಳಿದ್ದು, ಅಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಬೇಸರ ತಂದು ಪೊಲೀಸರನ್ನು ಶಪಿಸಿದರು. ಇದರಿಂದ ಬೇಸತ್ತ ಬಿಜೆಪಿ ಅಧ್ಯಕ್ಷ ರಮೇಶ್ ಪೀಹಳ್ಳಿ ಮೌನ ವಹಿಸಿ ತನ್ನ ಕಾರು ಹತ್ತಿ ಶ್ರೀರಂಗಪಟ್ಟಣದತ್ತ ಪ್ರಯಾಣ ಬೆಳೆಸಿದರು.

Recent Articles

spot_img

Related Stories

Share via
Copy link