
ಬೆ0ಗಳೂರು : ಆಷಾಢಮಾಸ ಆರಂಭಕ್ಕೂ ಮುನ್ನ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುವುದು ಪಕ್ಕಾ ಆಗುತ್ತಿದ್ದಂತೆಯೇ ಸಚಿವಾಕಾಂಕ್ಷಿ ಶಾಸಕರುಗಳು ದೆಹಲಿಯಲ್ಲಿ ಮೊಕ್ಕಂ ಹೂಡಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದು, ಹೈಕಮಾಂಡ್ ಮಟ್ಟದಲ್ಲೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ, ಸಮಾಲೋಚನೆಗಳು ನಡೆದಿವೆ.
ಬೆಂಗಳೂರು: ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಆಷಾಢ ಮಾಸಕ್ಕೂ ಮುನ್ನ ಅಂದರೆ ಬಹುತೇಕ ಜುಲೈ 10 ರಂದು ನಡೆಯುವ ಸಾಧ್ಯತೆಯಿದ್ದು, ಇದಕ್ಕಾಗಿ ಲಾಬಿ ತೀವ್ರಗೊಂಡಿದೆ. ಮತ್ತೊಂದೆಡೆ ಸಂಪುಟಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಬೆಕು ಎನ್ನುವ ಕುರಿತ ಪ್ರಕ್ರಿಯೆಗಳು ಚುರುಕುಗೊಂಡಿವೆ. ಜುಲೈ 14ರಿಂದ ಆಗಸ್ಟ್ 12ರ ವರೆಗೆ ಆಷಾಢ ಮಾಸವಾಗಿದ್ದು, ಅದಕ್ಕೂ ಮುನ್ನ ಈ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಂಗವಾಗಿ ಬಿಎಲ್‌ಓ ಮತ್ತು ಬಿಎಲ್‌ಎಗಳು ಈ ತಿಂಗಳ ಅಂತ್ಯದವರೆಗೂ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಅದಕ್ಕಾಗಿ ಎಲ್ಲಾ ಸಚಿವರು, ಶಾಸಕರು ತಮ ಕ್ಷೇತ್ರಗಳಲ್ಲೇ ಇರಬೇಕು ಎಂದು ಸೂಚನೆ ನೀಡಲಾಗಿದೆ. ಎಸ್‌ಐಆರ್ ಕಾರಣಕ್ಕಾಗಿ ವಿಧಾನಮಂಡಲದ ಅಧಿವೇಶನವನ್ನು ಮುಂದೂಡಲಾಗಿದೆ. ಚುನಾವಣಾ ಆಯೋಗ ಆಗಸ್ಟ್ 5ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಿದೆ. ಅನಂತರ ಮಳೆಗಾಲದ ವಿಧಾನಮಂಡಲ ಅಧಿವೇಶನ ಸಮಾವೇಶಗೊಳ್ಳುವ ಸಾಧ್ಯತೆ ಇದೆ.
ಅಧಿವೇಶನಕ್ಕೂ ಮುನ್ನವೇ ಪರಿಪೂರ್ಣ ಸಂಪುಟ ರಚನೆಯಾಗಬೇಕಿದೆ. ಆಗಸ್ಟ್ 15ಕ್ಕೆ ಸ್ವಾತಂತ್ರ÷್ಯ ದಿನಾಚರಣೆ ಅಂಗವಾಗಿ ಎಲ್ಲಾ ಜಿಲ್ಲೆಗಳಲ್ಲಿಯೂ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಬೇಕಿದೆ. ಅದಕ್ಕೂ ಮುನ್ನವೇ ಸಂಪುಟ ಪುನರ್ ರಚನೆಯಾಗುವ ಅನಿವಾರ್ಯತೆ ಇದೆ.
ಸಂಪುಟ ವಿಸ್ತರಣೆಯಾಗಲಿದೆ ಎಂಬ ಸುಳಿವು ದೊರೆಯುತ್ತಿದ್ದಂತೆ ಆಕಾಂಕ್ಷಿಗಳು ಲಾಬಿ ತೀವ್ರಗೊಳಿಸಿದ್ದಾರೆ. ಜು.3ರಂದು ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಪಿ.ಎಂ.ಅಶೋಕ್, ಎ.ಎಸ್.ಪೊನ್ನಣ್ಣ, ಕೆ.ಎನ್.ರಾಜಣ್ಣ, ಎಂ.ಆರ್.ಸೀತಾರಾಮ್ ಮತ್ತಿತರರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮಗೆ ಸಂಪುಟದಲ್ಲಿ ಸ್ಥಾನ ದೊರಕಿಸಿಕೊಡುವಂತೆ ಒತ್ತಡ ಹೇರಿದ್ದಾರೆ.
ಇತ್ತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಒಂದೆಡೆ ಮುಖಂಡರು ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ಆಕಾಂಕ್ಷಿಗಳು ಹಿರಿಯ ನಾಯಕರ ಬೆನ್ನಿಗೆ ಬಿದ್ದು ಅವಕಾಶಕ್ಕಾಗಿ ಒತ್ತಡ ಹೇರುತ್ತಿದ್ದಾರೆ.
ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಜುಲೈ 6ರಂದು ಐರ್ಲಾ್ಯಂಡ್ ಪ್ರವಾಸದಿಂದ ಮರಳುವ ಸಾಧ್ಯತೆ ಇದೆ. ಜುಲೈ 7 ಅಥವಾ 8ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ದೆಹಲಿಗೆ ತೆರಳುವ ಸಾಧ್ಯತೆಯಿದ್ದು, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಹೈಕಮಾಂಡ್ ಸಮ್ಮತಿ ನೀಡಿದರೆ ಜುಲೈ 12ರೊಳಗೆ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ. ಮೂಲಗಳ ಪ್ರಕಾರ ಜುಲೈ 10 ರಂದು ಶುಕ್ರವಾರ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲಾ ಈಗಾಗಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ 2-3 ಬಾರಿ ಚರ್ಚೆ ನಡೆಸಿದ್ದು, ಅಂತಿಮವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಇವರುಗಳ ಜತೆಯೂ ಚರ್ಚಿಸಿ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿ ಈ ಪಟ್ಟಿಗೆ ರಾಹುಲ್‌ಗಾಂಧಿ ಅವರ ಒಪ್ಪಿಗೆ ಪಡೆಯುವರು ಎಂದು ಹೇಳಲಾಗಿದೆ.
ಜು. 8 ರಂದು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ತಮ್ಮ ಬೆಂಬಲಕ್ಕಿರುವ ಶಾಸಕರಲ್ಲಿ ಯಾರನ್ನು ಸಚಿವರನ್ನಾಗಿಸಬೇಕು ಎಂದು ತನ್ನದೇ ಆದ ಪಟ್ಟಿಯನ್ನು ದೆಹಲಿಗೆ ಕೊಂಡೊಯ್ಯಲಿದ್ದು, ಈ ಪಟ್ಟಿಯನ್ನು ಹೈಕಮಾಂಡ್ ಮುಂದಿಟ್ಟು ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಸರ್ವ ಪ್ರಯತ್ನ ನಡೆಸುವರು.
ಕಾಂಗ್ರೆಸ್‌ನಲ್ಲಿ ಈಗಿರುವ ಬೆಳವಣಿಗೆಗಳನ್ನು ಗಮನಿಸಿದರೆ ಆಷಾಢಮಾಸದ ಒಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವುದು ಬಹುತೇಕ ನಿಶ್ಚಿತ.
ಬಾಕ್ಸ್
ಜು. 8 : ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಗೆ
ಸಂಪುಟ ವಿಸ್ತರಣೆ ಸಂಬAಧ ಹೈಕಮಾಂಡ್ ಜತೆ ಚರ್ಚಿಸಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲು ಈ ತಿಂಗಳ 8 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರುಗಳು ದೆಹಲಿಗೆ ತೆರಳಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ತೆರಳಬೇಕಾಗಿತ್ತಾದರೂ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಅವರು ವಿದೇಶ ಪ್ರವಾಸದಿಂದ ಬರುವುದು ಮೂರು ದಿನ ತಡವಾಗಿದ್ದು, ಜು. 8 ರಂದು ರಾಹುಲ್‌ಗಾಂಧಿ ವಿದೇಶದಿಂದ ವಾಪಸ್ಸಾಗುವರು. ಹಾಗಾಗಿ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಇವರಿಬ್ಬರೂ ನಾಳೆ ಬದಲು ಜು. 8 ರಂದು ದೆಹಲಿಗೆ ತೆರಲಿ 2 ದಿನಗಳ ಕಾಲ ಅಲ್ಲಿಯೇ ಮೊಕ್ಕಾಂ ಹೂಡಿ ರಾಹುಲ್‌ಗಾಂಧಿ ಅವರ ಜತೆ ಚರ್ಚಿಸಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವರು.








