ಬಳ್ಳಾರಿ:
ಇಡೀ ಜಗತ್ತಿಗೆ ಮಾರ್ಗದರ್ಶನ ನೀಡಿದ ದೇವರು ಶ್ರೀ ಕೃಷ್ಣ, ಇವರ ಆದರ್ಶಗಳು ಎಲ್ಲಾ ಮನಕುಲದವರು ಪಾಲಿಸಬೇಕು ಎಂದು ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಅವರು ಹೇಳಿದರು.
ಶ್ರೀ ಕೃಷ್ಣ ಜಯಂತಿ ನಿಮಿತ್ತ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರವಿವಾರ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀ ಕೃಷ್ಣ ಇಡೀ ವಿಶ್ವಕ್ಕೆ ದಾರಿದೀಪ. ಭಗವದ್ಗೀತಾ, ಕುರುಕ್ಷೇತ್ರ, ಮಹಾಭಾರತ ಪುರಾಣಗಳಲ್ಲಿ ಶ್ರೀಕೃಷ್ಣನ ಮಾರ್ಗದರ್ಶನಗಳನ್ನು ನಾವು ಕಾಣಬಹುದು. ಮುಂದಿನ ದಿನಗಳಲ್ಲಿ ಎಲ್ಲಾ ಹಿಂದೂಗಳು ಸೇರಿ ಶ್ರೀ ಕೃಷ್ಣ ಜಯಂತಿಯನ್ನು ಅದ್ದೂರಿಯಾಗಿ ಮಾಡಬೇಕು. ಶ್ರೀ ಕೃಷ್ಣನು ಕೇವಲ ಒಂದು ಜಾತಿಗೆ ಸೀಮಿತವಲ್ಲ. ಇತನು ಎಲ್ಲಾ ಹಿಂದೂಗಳಿಗೆ ದೇವರಾಗಿದ್ದಾನೆ ಎಂದು ಹೇಳಿದ ಅವರು ಐ.ಎ.ಎಸ್ ಮತ್ತು ರಾಜಕೀಯ ಕ್ಷೇತ್ರದಲ್ಲಿ ಈ ಸಾಮಾಜದವರು ಉತ್ತರ ಭಾರತದಲ್ಲಿ ಅತೀ ಹೆಚ್ಚಿನ ಜನಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿನ ಯುವಕರು ಸಹ ಐಎಎಸ್ ಮತ್ತು ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ತೋರಿಸಬೇಕು ಎಂದರು.
ಗೊಲ್ಲರ ಸಮಾಜಕ್ಕೆ ನೀಡಿರುವ ಖಾಲಿ ಸ್ಥಳದಲ್ಲಿ ಕಾಂಪ್ಲೆಕ್ಸ್ನ್ನು ಕಟ್ಟಿಸಿ ಯುವಕರಿಗೆ ಉಚಿತವಾಗಿ ವಿಧ್ಯಾಭ್ಯಾಸ, ಊಟ ವ್ಯವಸ್ಥೆಯನ್ನು ನೀಡಿ ಅವರ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಶ್ರೀ ಕೃಷ್ಣನ ಇಷ್ಟವಾದ ಆಟವಾದ ಮಡಿಕೆ ಕಟ್ಟಿ ಹೊಡಿಯುವುದನ್ನು ಮುಂದಿನ ದಿನಗಳಲ್ಲಿ ಇನ್ನೂ ಅದ್ಧೂರಿಯಾಗಿ ಆಚರಣೆ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರು ಮಾತನಾಡಿದರು.
ಕೆ.ಇ.ಚಿದಾನಂದಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ಸ್ವಾಗತಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಪಿ.ತಿಮ್ಮಪ್ಪ, ಪಾಲಿಕೆಯ ಸದಸ್ಯ ಚಂದ್ರಕಲಾ, ಮಾಜಿ ಉಪಮೇಯರ್ ಬೆಣಕಲ್ಲು ಬಸವರಾಜ, ಆಶಲತಾ, ಸೋಮಪ್ಪ, ಗೋವಿಂದರಾಜು, ಕೃಷ್ಣಮೂರ್ತಿ, ಪಿ.ಗಾದೆಪ್ಪ, ರಾಯಚೂರಿನ ಸಹಾಯಕ ಸಾರಿಗೆ ಆಯುಕ್ತ ವೆಂಕಟೇಶಪ್ಪ, ಸೋಮರೆಡ್ಡಿ ಹಾಗೂ ಸಮಾಜದ ಎಲ್ಲಾ ಮುಖಂಡರುಗಳು, ಪದಾಧಿಕಾರಿಗಳು ಇದ್ದರು.
ಶ್ರೀಕೃಷ್ಣ ಭಾವಚಿತ್ರ ಮೆರವಣೆಗೆ: ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜಯಂತಿಯ ಅಂಗವಾಗಿ ಏರ್ಪಡಿಸಿದ ಮೆರವಣಿಗೆಯನ್ನು ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಅವರು ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣೆಗೆಯು ಮುನ್ಸಿಪಲ್ ಕಾಲೇಜು ಮೈದಾನದಿಂದ ಪ್ರಾರಂಭವಾಗಿ ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೇ ಬ್ರೂಸ್ಪೇಟೆ ಪೊಲೀಸ್ ಠಾಣೆ, ಜೈನ್ ಮಾರ್ಕೆಟ್, ಹೆಚ್.ಆರ್.ಗವಿಯಪ್ಪ ವೃತ್ತ ಮುಖಾಂತರ ವೇದಿಕೆ ಸ್ಥಳವಾದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರಕ್ಕೆ ತಲುಪಿತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಮಲ್ಲನಗೌಡ, ಶ್ರೀನಿವಾಸ ಮೋತಕೋರ್, ಮಾಜಿ ಮೇಯರ್ ಬೆಣಗಲ್ಲು ಬಸವರಾಜ್, ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಪಿ.ತಿಮ್ಮಪ್ಪ, ಚಿಂದಾನಂದಪ್ಪ, ಪಿ.ಗಾದೆಪ್ಪ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಹಾಗೂ ಸಮಾಜದ ಮುಖಂಡರುಗಳು ಇದ್ದರು.
