ಬಳ್ಳಾರಿ : ಕೃಷ್ಣನಗರ ಮತದಾನ ಬಹಿಷ್ಕಾರ : ಅಧಿಕಾರಿಗಳ ಮನವೊಲಿಕೆ ಯಶಸ್ವಿ

ಬಳ್ಳಾರಿ

    ಲೋಕಸಭಾ ಕ್ಷೇತ್ರದಲ್ಲಿಯೂ ಮತದಾನ ಬೆಳಗ್ಗೆ ಆರಂಭವಾಗಿದೆ. ಆದರೆ ಕ್ಷೇತ್ರದ ಒಂದು ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಅಧಿಕಾರಿಗಳು ಜನರ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಮಂಗಳವಾರ ಮತದಾನ ಮಾಡುವುದಿಲ್ಲ ಎಂದು ಬಳ್ಳಾರಿ ತಾಲೂಕು ಕೃಷ್ಣನಗರ ಕ್ಯಾಂಪ್‌ನ ಜನರು ಮತದಾನ ಬಹಿಷ್ಕಾರ ಮಾಡಿದ್ದರು. ಆದ್ದರಿಂದ ವಿವಿಧ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಮನವೊಲಿಸಿದ ಬಳಿಕ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದಾರೆ.

   ಅಧಿಕಾರಿಗಳ ಭೇಟಿ, ಮನವೊಲಿಕೆ ಬಳಿಕ ಮತದಾನದ ಮಹತ್ವ ಅರಿತು ಜವಾಬ್ದಾರಿಯನ್ನು ಪೂರೈಸಿದ ಎಲ್ಲ ಮತದಾರರಿಗೂ ವಂದನೆಗಳು ಎಂದು ರಾಜ್ಯ ಚುನಾವಣಾ ಆಯೋಗ ಫೇಸ್‌ಬುಕ್ ಪೋಸ್ಟ್ ಮೂಲಕ ಧನ್ಯವಾದಗಳನ್ನು ಸಲ್ಲಿಕೆ ಮಾಡಿದೆ.

ಬಹಿಷ್ಕಾರ ಏಕೆ………..? 

    ಬಳ್ಳಾರಿ ತಾಲೂಕು ಕೃಷ್ಣನಗರ ಕ್ಯಾಂಪ್‌ ಕೊಳಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಕೃಷ್ಣ ನಗರ ಕ್ಯಾಂಪ್ ಅನ್ನು 2ಎ ಅಡಿಯಲ್ಲಿ ಕಂದಾಯ ಗ್ರಾಮವನ್ನಾಗಿ ಮಾಡುವುದರಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಜನರು ಮತದಾನ ಬಹಿಷ್ಕಾರ ಮಾಡಿದ್ದರು.

   ಏಪ್ರಿಲ್ 23ರಂದು ಕ್ಯಾಂಪಿನ ಜನರು ಪ್ರತಿಭಟನೆಯನ್ನು ನಡೆಸಿ ಮೇ 7ರಂದು ನಡೆಯುವ ಮತದಾನವನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿದ್ದರು. ಕ್ಯಾಂಪ್‌ನಲ್ಲಿ ಈಗಾಗಲೇ ಸಮೀಕ್ಷೆಯನ್ನು ಮಾಡಿ ಕಂದಾಯ ಗ್ರಾಮವನ್ನಾಗಿ ಮಾಡಲು ಸಿದ್ಧತೆ ನಡೆದಿದೆ ಎಂದು ಆರೋಪಿಸಿದ್ದರು.

   ಗ್ರಾಮದಲ್ಲಿ ಅನೇಕ ಪಟ್ಟಾ ಜಮೀನುಗಳು ಸರ್ಕಾರಿ ಜಮೀನುಗಳಾಗಿ ಪರಿವರ್ತನೆಗೊಂಡಿದೆ. ಪಟ್ಟಾದಾರರು ರೈತಾಪಿ ವರ್ಗದವರು. ಕೃಷಿ ಜಮೀನಿನಲ್ಲಿ ಮನೆಗಳನ್ನು ಸಹ ನಿರ್ಮಾಣ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದರು.

    ಈ ಗ್ರಾಮದಲ್ಲಿ ಅನೇಕ ಅವಿಭಕ್ತ ಕುಟುಂಬಗಳಿವೆ. ಸರ್ಕಾರ ಕಂದಾಯ ಗ್ರಾಮದ ಹೆಸರಿನಲ್ಲಿ ನಮ್ಮ ಸ್ವಂತ ಹಣದಿಂದ ಖರೀದಿ ಮಾಡಿದ ಜಮೀನನ್ನು ತನ್ನದಾಗಿಸಿಕೊಳ್ಳುತ್ತಿದೆ. ಈ ಕುರಿತು ಹಿಂದೆಯೂ ಅನೇಕ ಬಾರಿ ಮನವಿ ಸಲ್ಲಿಕೆ ಮಾಡಲಾಗಿದೆ. ಆದರೆ ಯಾವುದೇ ಅಧಿಕಾರಿಗಳು ಸ್ಪಂದಿಸಿಲ್ಲ. ಆದ್ದರಿಂದ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಜನರು ತಿಳಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap