ಇದು ಕಟ್ ಆಯಂಡ್ ಪೇಸ್ಟ್ ಬಜೆಟ್ : ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು:

     ಇದು ಕಟ್ ಆಯಂಡ್ ಪೇಸ್ಟ್ ಬಜೆಟ್. ಕೇಂದ್ರದ ನರೇಂದ್ರ ಮೋದಿ ಅವರ ಸರಕಾರ, ಹಿಂದಿನ ಬಿಜೆಪಿ ಸರಕಾರವನ್ನು ನಿಂದಿಸಲು ಮೀಸಲಾದ ಬಜೆಟ್.ರಾಜಕೀಯ ಹೇಳಿಕೆಗಳಿಗೆ ಸೀಮಿತವಾದ ಬಜೆಟ್.ಹಾಗೂ ಅನೇಕ ಎಟಿಎಮ್ ಗಳನ್ನು ತುಂಬಿಸಿಕೊಳ್ಳಲು ಮಾಡಲಾದ ಬಜೆಟ್.ರಾಜ್ಯ ಮುಂಗಡ ಪತ್ರದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ÷್ಣವಾಗಿ ವ್ಯಕ್ತಪಡಿಸಿದ ಅಭಿಪ್ರಾಯವಿದು.

    ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಲೆಖಾನುದಾನ ಪಡೆದಿದ್ದರು. ಅದರ ಮುಂದುವರೆದ ಭಾಗವೇ ಈ ಬಜೆಟ್. ನಮ್ಮ ಹಣಕಾಸು ಸಚಿವರು ದಾಖಲೆ ಸ್ಥಾಪನೆ ಮಾಡಿಕೊಳ್ಳಲು ಮಂಡಿಸಿದ ದಾಖಲೆಯ ಬಜೆಟ್ ಅಷ್ಟೇ ಇದು ಎಂದು ಅವರು ಕಟುವಾಗಿ ಟೀಕಿಸಿದರು.

    ಇದನ್ನು ರಾಜ್ಯದ ಬಜೆಟ್ ಪುಸ್ತಕ ಅನ್ನುವುದಕ್ಕಿಂತ ಬಿಜೆಪಿಯ ನಿಂದನಾ ಪುಸ್ತಕ ಎಂದರೆ ಸರಿಯಾದೀತು. ಕೇಂದ್ರ ಸರ್ಕಾರ ಮತ್ತು ಹಿಂದಿನ ಸರಕಾರ ಬಿಜೆಪಿಯ ಆಡಳಿತ ಬಂದ ನಂತರ ಆರ್ಥಿಕ ಶಿಸ್ತನ್ನ ಉಲ್ಲಂಘಿಸಿದ್ದಾರೆ, ಸ್ವೆಚ್ಚಾಚಾರದಿಂದ ಆರ್ಥಿಕ ಶಿಸ್ತು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ದೂರದೃಷ್ಟಿ, ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಟ್ಟು ಹೇಳುವ ಬದಲು ಕೇವಲ ಅನ್ಯರನ್ನು ತೆಗಳಲು ಬಜೆಟ್ ಅನ್ನು ಬಳಕೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡಿದೆ ಎಂದು ಬಹಳಷ್ಟು ಕಡೆ ಆರೋಪ ಮಾಡಿದ್ದಾರೆ ಎಂದು ಅವರು ಹೇಳಿದರು.

    ಬಸವರಾಜ ಬೊಮ್ಮಾಯಿಯವರ ಕಾಲದಲ್ಲಿ ನೀರಾವರಿ ಇಲಾಖೆಗೆ 1 ಲಕ್ಷ ಕೋಟಿ ಯೋಜನೆಗಳಿಗೆ ಅನುಮತಿ ಕೊಟ್ಟಿದ್ದಾರೆ. ಅದಕ್ಕೆ ಈಗ 40 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಸೇರ್ಪಡೆ ಆಗಿದೆ. 1 ಲಕ್ಷ 75 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಹಣ ಇಡದೆ ಘೋಷಿಸಿದ್ದಾರೆ. 2013 -18 ರಿಂದ 15 ಲಕ್ಷ ಮನೆ ಕಟ್ಟಿದ್ದೀವಿ ಎಂದು ಹೇಳಿದ್ದಾರೆ. ಎಲ್ಲಿ ಕಟ್ಟಿದ್ದಾರೆ, ಇನ್ನು 12 ಲಕ್ಷ ಮನೆ ಕಟ್ಟಲು 17,815 ಕೋಟಿ ರೂಪಾಯಿ ಬೇಕು ಎಂದು ಹೇಳಿದ್ದಾರೆ. ಅದನ್ನು ಎಲ್ಲಿಂದ ತರುತ್ತಾರೆ. ಈಗ ನೋಡಿದರೆ ಆರ್ಥಿಕ ಶಿಸ್ತನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಅಗತ್ಯ ಇತ್ತೆ ಎಂದು ಅವರು ಪ್ರಶ್ನಿಸಿದರು.

    ಈ ಬಾರಿ 3 ಲಕ್ಷ 28 ಸಾವಿರ ಕೋಟಿ ಬಜೆಟ್ ನಲ್ಲಿ ಎರಡೂವರೆ ಲಕ್ಷ ಕೋಟಿ ರೆವಿನ್ಯೂ ಎಕ್ಸ್ ಪೆಂಡಿಚರ್, 27 ಸಾವಿರ ಕೋಟಿ ಸಾಲ ಮರುಪಾವತಿಗೆ ಇಟ್ಟುಕೊಂಡಿದ್ದಾರೆ. ಅದಾದ ಮೇಲೆ 85 ಸಾವಿರ ಕೋಟಿ ಸಾಲ ಎತ್ತುತ್ತಾರೆ. ಆ ಸಾಲಕ್ಕೆ ತಲೆ ಕೊಡುವುದು ಯಾರು? ಇವರು ನೋಡಿದರೆ ಹಿಂದಿನ ಸರಕಾರ ಆರ್ಥಿಕ ಶಿಸ್ತನ್ನ ಹಾಳು ಮಾಡಿದೆ ಬಜೆಟ್ ಉದ್ದಕ್ಕೂ ಹೇಳಿದ್ದಾರೆ. ಇದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

    ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ. ರಾಜ್ಯದ ತೆರಿಗೆ ಇಲಾಖೆಗಳ ಯಾವುದೇ ಶ್ರಮ ಇಲ್ಲದೆ ಜನರು ರಾಜ್ಯದ ಜನತೆ ಖಜಾನೆ ತುಂಬಿದ್ದಾರೆ. ಅದಕ್ಕಾಗಿ ಜನತೆಯನ್ನು ಅಭಿನಂದಿಸುತ್ತೇನೆ. ಕೋವಿಡ್ ಸಮಸ್ಯೆಯಲ್ಲೂ, ಜನ ಹಣ ತುಂಬಿಸಿಕೊಟ್ಟಿದ್ದಾರೆ. ಒಂದೇ ವರ್ಷಕ್ಕೆ ಜನರ ಮೇಲೆ 85 ಸಾವಿರ ಕೋಟಿ ಸಾಲ ಹೊರೆ ಹೊರೆಸುತ್ತಿದ್ದಾರೆ. ಇಷ್ಟೋಂದು ಸಾಲ ಏಕೆ ಮಾಡ್ತೀದೀರಿ. ಅದಕ್ಕೆ ಕಾರಣ ಕೊಡಿ ಎಂದು ಅವರು ಒತ್ತಾಯ ಮಾಡಿದರು.

    ಈ ಬಜೆಟ್ಟಿನಲ್ಲಿ ದುಡಿಯುವ ಜನರ ಕೈಗೆ ಸ್ವಾವಲಂಭಿಯಾಗಲು, ಅವರು ಬದಕಲು ದೀರ್ಘಕಾಲೀನ ಯೋಜನೆ ಏನು? ಈ ಪ್ರಶ್ನೆ ಹಾಕಿಕೊಂಡರೆ ಉತ್ತರ ಶೂನ್ಯ ಎಂದ ಅವರು; ಇವರ ಯಾವ ಗ್ಯಾರಂಟಿಗೂ ನನ್ನ ತಕರಾರಿಲ್ಲ, ಇನ್ನೂ ಎರಡು ಜ್ಯೋತಿ ಕೊಡಿ. ನಮದ್ದೇನು ತಕರಾರಿಲ್ಲ. ವರ್ಷಕ್ಕೆ 50 ರಿಂದ 60 ಸಾವಿರ ವೆಚ್ಚಾಗಲಿದೆ. ಇದೊಂದೇ ಈ ಬಜೆಟ್ ನಲ್ಲಿ ಇರೊದು. ಆದರೆ ಯಾವುದಕ್ಕೂ ಈ ಬಜೆಟ್ ನಲ್ಲಿ ಹಣ ಇಟ್ಟಿಲ್ಲ. ಇದು ಕೇವಲ ಕೇಂದ್ರ ಸರ್ಕಾರ- ಹಿಂದಿನ ಸರ್ಕಾರವನ್ನ ದೂಷಣೆ ಮಾಡುವ ಬಜೆಟ್ ಅಷ್ಟೇ. ಇದರಲ್ಲಿ ಏನೂ ಇಲ್ಲ ಎಂದು ದೂರಿದರು.

    ನೀರಾವರಿ, ಕೃಷಿಗೆ, ಜನರ ಬದುಕು ಕಟ್ಟಲು, ಜನರು ಸ್ವಾಭಿಮಾನಿಗಳಾಗಿ, ಸ್ವಾವಲಂಬಿಗಳಾಗಿ ಜೀವನ ಮಾಡಲು ಈ ಬಜೆಟ್ ಕೊಟ್ಟ ದೂರದೃಷ್ಟಿ ಏನು? ಇದು ನನ್ನ ಪ್ರಶ್ನೆಯಾಗಿದೆ. ಆದಾಯ ಹೆಚ್ಚಿಸಲು ಅಬಕಾರಿ ಇಲಾಖೆ ಒಂದನ್ನೇ ನೆಚ್ಚಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಈ ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಿಸಿದ್ದಾರೆ. ಅನ್ನಭಾಗ್ಯ ಅಕ್ಕಿಗೆ ಹಣ ಕೊಡಲು ಹೊರಟ್ಟಿದ್ದಾರಲ್ಲ ಇವರು, ಆ ದುಡ್ಡು ಇದಕ್ಕೆ ಹೋಗುತ್ತೆ. ಅನ್ನಭಾಗ್ಯಕ್ಕೆ ಕೊಡುವ ಹಣವನ್ನು ಅಬಕಾರಿ ಮೂಲಕ ಸುಲಿಗೆ ಮಾಡಿಕೊಳ್ಳಲು ಈ ಬಜೆಟ್ ಹುನ್ನಾರ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಆರೋಪ ಮಾಡಿದರು.

   ಯಾರೋ ಒಬ್ಬರ ಬ್ಯಾಂಕ್ ಖಾತೆಗೆ ಹಣ ಹೋಗುತ್ತದೆ. ಆತ ಆ ಹಣವನ್ನು ಮನೆಗೆ ತೆಗೆದುಕೊಂಡು ಹೋಗ್ತಾನೊ.. ಇನ್ನೆಲ್ಲಿ ತಗೊಂಡು ಹೋಗ್ತಾನೊ ಗೊತ್ತಿಲ್ಲ. ಒಂದು ಕಡೆ ಇವರೇ ಬೆಳೆಗೆ 7 ಗಂಟೆಗೆ ಮದ್ಯದ ಅಂಗಡಿ ತೆಗೆಸುತ್ತಾರೆ. ಬೆಳಗ್ಗೆ 7 ಗಂಟೆಗೆ ಒಂದು ರೇಟು, ರಾತ್ರಿ 10 ಗಂಟೆಗೆ ಒಂದು ರೇಟು ಇಟ್ಟಿದ್ದಾರಲ್ಲ?? ಹೀಗೆ ಕಿತ್ತುಕೊಳ್ಳುವ ಹಣ ಎಲ್ಲಿಗೆ ಹೋಗುತ್ತದೆ. ಒಂದು ಕೈಲಿ ಕೊಟ್ಟು ಇನ್ನೊಂದು ಕೈಲಿ ಕಿತ್ತುಕೊಳ್ಳುವುದಾ ಆರ್ಥಿಕ ಶಿಸ್ತು ಎಂದರೆ ಇದೇನಾ ಎಂದು ಅವರು ಪ್ರಶ್ನಿಸಿದರು.

    ಒಂದು ಪತ್ರಿಕೆಯಲ್ಲಿ ಒಂದು ವರದಿ ಓದಿದೆ. ಆನ್ ಲೈನ್ ಗೇಮ್ ನಿಂದ ಒಬ್ಬ 65 ಲಕ್ಷ ರೂಪಾಯಿ ಕಳೆದುಕೊಂಡು ಅಷ್ಟೂ ಹಣವನ್ನು ಸಾಲ ಮಾಡಿಕೊಂಡಿದ್ದಾರೆ. ಈ ಅನ್ನಭಾಗ್ಯ ಹಣ ಇದಕ್ಕೆ ಹೋಗುತ್ತೊ ಏನೋ? ಯೋಜನೆ ಮಾಡುವುದು ದೊಡ್ಡದಲ್ಲ, ಅದನ್ನು ಹೇಗೆ ಕಾರ್ಯಗತ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ. ಅದಕ್ಕೊಂದು ನಿರ್ದಿಷ್ಟ ದೂರದೃಷ್ಟಿ ಬೇಡವೇ? ಎಂದು ಅವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link