ಬಳ್ಳಾರಿ:
ಹೊಸಪೇಟೆಯ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಬಲ್ಡೋಟಾ ಕಾಲೋನಿಯೂ ಒಂದಾಗಿದ್ದು ಇಲ್ಲಿ ಹಂದಿ ಸತ್ತು ಬಿದ್ದರೂ ಯಾರೂ ಕೇಳೋರು-ಕೇಳೋರು ಇಲ್ಲದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಸಪೇಟೆ ನಗರಸಭೆಯ 35ನೇ ವಾರ್ಡಿನ ಬಲ್ಡೋಟಾ ಕಾಲೋನಿಯ ನಿವಾಸಿಗಳ ಗೋಳು ಇಲ್ಲಿ ಹೇಳತೀರದು. ಹೆಸರಿಗೆ ಮಾತ್ರ ಇದು ಪ್ರತಿಷ್ಠಿತರು ವಾಸಿಸುವ ಬಡಾವಣೆ. ಇಲ್ಲಿ ಸರಿಯಾದ ರಸ್ತೆಗಳಿಲ್ಲ. ಚರಂಡಿ ಸೌಲಭ್ಯಗಳಿಲ್ಲ. ಎಲ್ಲೆಂದರಲ್ಲಿ ತ್ಯಾಜ್ಯ, ಕಸ ಗೋಚರಿಸುತ್ತಿದೆ. ನಗರಸಭೆ ಅಧಿಕಾರಿಗಳು ನಾಗರಿಕರ ಸಮಸ್ಯೆಗೆ ಇಲ್ಲಿ ಸ್ಪಂದಿಸದೇ ಇರುವುದರಿಂದ ಸ್ಥಳೀಯ ನಿವಾಸಿಗಳು ಹಲವಾರು ರೋಗಗಳಿಗೆ ತುತ್ತಾಗಬೇಕಾಗಿದೆ. ಡ್ಯಾಂ ರಸ್ತೆಯಲ್ಲಿರುವ ಈ ಬಯಲು ಜಾಗೆಯಲ್ಲಿ ಯಥೇಚ್ಛವಾಗಿ ತ್ಯಾಜ್ಯ ಬಿಸಾಡಲಾಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿನಿತ್ಯ ತರಕಾರಿ, ಹಣ್ಣು, ಹೂವು ವಹಿವಾಟ ನಡೆಯುತ್ತಿದೆ. ವಹಿವಾಟು ಮುಗಿದ ಬಳಿಕ ತ್ಯಾಜ್ಯವೆಲ್ಲ ಇದೇ ಸ್ಥಳದಲ್ಲಿ ಬಿಸಾಡಲಾಗುತ್ತಿದೆ. ಬಿಡಾಡಿ ದನಗಳ, ಬೀದಿ ನಾಯಿಗಳ, ಹಂದಿಗಳ ತಾಣವಾಗಿ ಮಾರ್ಪಟ್ಟಿದೆ.
ತ್ಯಾಜ್ಯದಿಂದಾಗಿ ಇಲ್ಲಿ ಪರಿಸರವೇ ಗಲೀಜಿನಿಂದ ಕೂಡಿದೆ. ದುರ್ವಾಸನೆ ತಾಳಲಾರದೇ ಅನೇಕರು ವಿವಿಧ ರೋಗಕ್ಕೆ ತುತ್ತಾಗಿದ್ದಾರೆ. ಈ ಖಾಸಗಿ ಜಾಗೆಯಲ್ಲಿ ರಕ್ಷಣಾ ಗೋಡೆ ಕಟ್ಟಿಸುವಂತೆ ಅಥವಾ ತಂತಿ ಬೇಲಿ ಹಾಕಿಸಲು ಸ್ಥಳದ ಮಾಲೀಕರಿಗೆ ಸೂಚಿಸುವಂತೆ ನಗರಸಭೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲದಾಗಿದೆ. ಸತ್ತ ನಾಯಿ, ಹಂದಿಗಳು, ಬೆಕ್ಕುಗಳನ್ನು ಇಲ್ಲಿ ಬಿಸಾಡುವುದರಿಂದ ಗಬ್ಬು ವಾಸನೆ ತಾಳಲಾಗುತ್ತಿಲ್ಲ. ಇನ್ನಾದರೂ ನಗರಸಭೆಯ ಆಯುಕ್ತರು ಈ ಖಾಲಿ ನಿವೇಶನದ ಸುತ್ತ ತಂತಿ ಬೇಲಿ ಹಾಕಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ವ್ಯರ್ಥವಾದ ತ್ಯಾಜ್ಯ ಹಾಕುವುದನ್ನು ತಡೆಗಟ್ಟಬೇಕು. ಇಲ್ಲದೇ ಹೋದರೆ ನಗರಸಭೆಯ ನಿರ್ಲಕ್ಷ್ಯದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಸ್ಥಳೀಯರಾದ ದೇವಿಕಾ ರಮೇಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ