ಇದೆಂಥಾ ಸಂಡೆ ಲಾಕ್‍ಡೌನ್…?

ತುಮಕೂರು

     ಪ್ರತಿ ಭಾನುವಾರ ರಾಜ್ಯಾದ್ಯಂತ ಸಂಡೆ ಲಾಕ್‍ಡೌನ್ ಘೋಷಣೆಯಾಗಿದೆ. ವಾರದಲ್ಲಿ ಒಂದು ದಿನವಾದರೂ ಜನತೆ ಮನೆಯಿಂದ ಹೊರಗೆ ಬಾರದಿರಲಿ ಎಂಬುದು ಇದರ ಹಿಂದಿರುವ ಮುಖ್ಯ ಉದ್ದೇಶ. ಅಂದರೆ, ಅಂತರ ಕಾಪಾಡಿಕೊಂಡು ಮನೆಯಲ್ಲಿಯೇ ಇರುವ ಮೂಲಕ ಕೊರೊನಾ ವೈರಸ್ ವ್ಯಾಪಿಸುವುದನ್ನು ತಡೆಗಟ್ಟಬಹುದಾಗಿದೆ ಎಂಬುದರ ಅರ್ಥವಿದು.

     ಆದರೆ ಭಾನುವಾರದ ಲಾಕ್‍ಡೌನ್ ಕೆಲವರ ಪ್ರಕಾರ ಲಾಕ್‍ಡೌನ್ ಅಲ್ಲವೆ ಅಲ್ಲ. ಏಕೆಂದರೆ, ಸಹಜ ಜೀವನದ ರೀತಿಯಲ್ಲಿಯೇ ಬದುಕು ಸಾಗುತ್ತಿದೆ. ಮುಖ್ಯ ರಸ್ತೆಗಳಷ್ಟೆ ಜನಜಂಗುಳಿಯಿಂದ ಹೊರತಾಗಿರಬಹುದು. ವಾಹನಗಳು ಸಂಚರಿಸದೆ ಇರಬಹುದು. ಅಷ್ಟರ ಮಟ್ಟಿಗೆ ಬಿ.ಎಚ್. ರಸ್ತೆ ಸೇರಿದಂತೆ ಕೆಲವು ಪ್ರಮುಖ ರಸ್ತೆಗಳು ಕಂಡುಬರುತ್ತವೆ. ಇಲ್ಲೆಲ್ಲಾ ಅಂಗಡಿಗಳೂ ಸಹ ಬಂದ್ ಆಗಿರುವ ಕಾರಣ ಯಾರೂ ಅತ್ತ ಸುಳಿಯುವುದಿಲ್ಲ. ಈ ದೃಶ್ಯವನ್ನು ನೋಡಿದಾಗ ಸಂಡೆ ಲಾಕ್‍ಡೌನ್ ಯಶಸ್ವಿ ಎನ್ನಿಸುತ್ತದೆ.

    ಆದರೆ ಪ್ರಮುಖ ರಸ್ತೆಗಳನ್ನು ದಾಟಿ ವಾರ್ಡ್‍ಗಳಿಗೆ ಪ್ರವೇಶ ಮಾಡಿದಾಗ ಅಲ್ಲಿ ಕಂಡು ಬರುವ ಚಿತ್ರಣವೆ ಬೇರೆ. ಒಳ ಹೊಕ್ಕು ಪ್ರವೇಶಿಸಿದಂತೆಲ್ಲಾ ಈ ಹಿಂದಿನ ದಿನಗಳಿಗಿಂತ ಹೆಚ್ಚಾಗಿ ಅಲ್ಲೆಲ್ಲಾ ಜನನಿಬಿಡ ರಸ್ತೆಯಾಗಿ ಕಂಡುಬರುತ್ತದೆ. ವ್ಯಾಪಾರ ವಹಿವಾಟು ನಡೆದೆ ಇರುತ್ತದೆ. ಬೆಳಗಿನಿಂದ ಮಧ್ಯಾಹ್ನದವರೆಗೂ ಮಟನ್, ಚಿಕನ್ ಖರೀದಿಗಾಗಿ ಹೊರ ಬರುವ ಮತ್ತು ಹೋಗುವವರ ಸಂಖ್ಯೆ ಅತ್ಯಧಿಕ.

     ತುಮಕೂರಿನ ಕೆಲವು ಪ್ರದೇಶಗಳು ಮಟನ್ ಅಂಗಡಿಗಳಿಗೆ ಹೆಸರುವಾಸಿಯಾಗಿವೆ. ಇಲ್ಲೆಲ್ಲ ಭಾನುವಾರ ಬಂದಿತೆಂದರೆ ಉದ್ದನೆಯ ಕ್ಯೂ ನಿರ್ಮಾಣವಾಗುತ್ತದೆ. ಕೊರೊನಾ ವೈರಸ್ ಹರಡುವುದಕ್ಕಿಂತ ಹಿಂದಿನ ದಿನಗಳಲ್ಲಿಯೂ ಇಷ್ಟು ಸಂಖ್ಯೆಯ ಜನರನ್ನು ಕಾಣಲಿಲ್ಲ ಎಂಬಂತೆ ಜನ ಈ ಅಂಗಡಿಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

     ವಾರದ 6 ದಿನಗಳಲ್ಲಿ ತರಕಾರಿ, ಅಂಗಡಿಗಳ ಸಾಮಾನು ಇತ್ಯಾದಿ ಖರೀದಿಸಲು ಅವಕಾಶವಿರುತ್ತದೆ. ಆದರೆ ಭಾನುವಾರವೂ ಇದೇ ಕೆಲಸವನ್ನು ಮುಂದುವರೆಸುತ್ತಿರುವ ಜನತೆ ನಮ್ಮೊಡನೆ ಹೆಚ್ಚು ಹೆಚ್ಚಾಗಿ ಇರುವ ಕಾರಣ ಕೊರೊನಾ ವೈರಸ್ ನಿಗ್ರಹ ಹೇಗೆ ಸಾಧ್ಯ ಎಂಬುದು ಕೆಲವರ ಪ್ರಶ್ನೆ.

     ಎಂ.ಜಿ.ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ ಸೇರಿದಂತೆ ಈ ಭಾಗಗಳಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಭಾನುವಾರ ಸಂಪೂರ್ಣ ರಜೆ ಮಾಡಿದ್ದಾರೆ. ಹೀಗಾಗಿ ಅಂಗಡಿಗಳು ತೆರೆಯುತ್ತಿಲ್ಲ. ವಾಹನಗಳ ಓಡಾಟವೂ ಇಲ್ಲಿಲ್ಲ. ಪರಿಣಾಮವಾಗಿ ಈ ಭಾಗದಲ್ಲಿ ರಸ್ತೆ ಸಂಚಾರ ಬಿಕೋ ಎನ್ನುತ್ತದೆ. ಆದರೂ ಆ ಮಾರ್ಗವಾಗಿ ಓಡಾಡುವ ದ್ವಿಚಕ್ರ ವಾಹನಗಳಿಗೆ ಬರವಿಲ್ಲ. ಇನ್ನು ಬಡಾವಣೆಯ ಒಳಗೆ ಪ್ರವೇಶಿಸಿದರೆ ಎಂದಿನಂತೆ ದ್ವಿಚಕ್ರ ವಾಹನಗಳ ಓಡಾಟ, ಅಂಗಡಿಗಳಲ್ಲಿ ಖರೀದಿ ಬರಾಟೆ ಮುಂದುವರಿದೆ ಇತ್ತು. ಹೀಗಾದರೆ ಸಂಡೆ ಲಾಕ್‍ಡೌನ್ ಮಾಡಿ ಪ್ರಯೋಜನವಾದರೂ ಏನು?

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap