ತುಮಕೂರು:
ಕಾಡುಗೊಲ್ಲರಿಗೆ ಎಸ್.ಟಿ. ಮೀಸಲಾತಿ ನೀಡಬೇಕು, ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಕಾಡುಗೊಲ್ಲರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಒಂದು ದಿನದ ಶಾಂತಿಯುತ ಪ್ರತಿಭಟನೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಮನವಿ ಪತ್ರ ಸಲ್ಲಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಮಾತನಾಡಿ, ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲವರು ಇನ್ನೂ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ, ಈ ಕಾರಣದಿಂದ ಇವರು ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದ ಕಾಡುಗೊಲ್ಲರಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ನೀಡಿ ಸಕಾರದ ಸವಲತ್ತು ದೊರಕಿಸಲು ನೆರವಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಾಡುಗೊಲ್ಲರ ಜಾತಿಯನ್ನು ಅಂಗೀಕರಿಸಿ ಸರ್ಕಾರ 2018ರಲ್ಲೇ ಆದೇಶ ಮಾಡಿದ್ದರೂ ಸರ್ಕಾರದ ಕಚೇರಿಗಳಲ್ಲಿ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ,ಇದರಿಂದ ಸಮುದಾಯದ ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ. ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರ ಕೂಡಲೇ ಅಧಿಕಾರಿಗಳಿಗೆ ಆದೇಶ ನೀಡಬೇಕು. ಕಾಂತರಾಜು ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಣೆ ಮಾಡಿ ಮೂಲಭೂತ ಸೌಲಭ್ಯ ಒದಗಿಸಬೇಕು. ಕಾಡುಗೊಲ್ಲರ ಅಭಿವೃದ್ಧಿ ನಗಮಕ್ಕೆ ಅದ್ಯಕ್ಷರನ್ನು ನೇಮಕ ಮಾಡಿ ಅನುದಾನ ನೀಡಿ ಸಮುದಾಯದ ನೆರವಿಗೆ ಸಹಕರಿಸಬೇಕು ಎಂದ ಅವರು, ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯದ ವಿವಿದ 44 ತಾಲ್ಲೂಕು ಹಾಗೂ ಜಿಲ್ಲ ಕೇಂದ್ರಗಳಲ್ಲಿ ಕಾಡುಗೊಲ್ಲರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾರೆ.
ಸರ್ಕಾರ ನಿರ್ಲಕ್ಷ ಮಾಡಿದರೆ ಮುಂದೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಡಿ.ಕೆ.ಗಂಗಾಧರ್ ಮಾತನಾಡಿ, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುವ ಕಾಡುಗೊಲ್ಲರಿಗೆ ನ್ಯಾಯಯುತವಾದ ಸೌಕರ್ಯಗಳನ್ನು ನೀಡಬೇಕು. ಕಾಡುಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಶಾಲೆ ಮತ್ತಿತರ ಮೂಲಭೂತ ಸವಲತ್ತುಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ಮಾತನಾಡಿ, ಹಲವು ವರ್ಷಗಳಿಂದ ಕಾಡುಗೊಲ್ಲರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಸಮುದಾಯದ ಸಂಕಷ್ಟಗಳನ್ನು ಸರ್ಕಾರ ಅರಿತು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರ ಗಮನಕ್ಕೆ ಕಾಡುಗೊಲ್ಲರ ಬೇಡಿಕೆಗಳನ್ನು ತಂದು, ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.
ಜಿಲ್ಲಾ ಸಂಘದ ಗೌರವಾಧ್ಯಕ್ಷ ಬಸವರಾಜು, ಪ್ರಧಾನ ಕಾರ್ಯದರ್ಶಿ ಭದ್ರೇಗೌಡ, ಮುಖಂಡರಾದ ಜಿ.ಕೆ.ನಾಗಣ್ಣ, ಚಿಕ್ಕಪ್ಪಯ್ಯ, ಜಯಣ್ಣ, ಅನಂತು, ದೊಡ್ಡವೀರಯ್ಯ, ರಾಮಣ್ಣ, ಮಂಜುನಾಥ್, ಶಿವಕುಮಾರ್, ತಿಮ್ಮಯ್ಯ, ಮೋಹನ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ