ಇಸ್ರೇಲ್ ಮಾದರಿ ಕೃಷಿಯ ಪ್ರಾಯೋಗಿಕ ಅನುಷ್ಠಾನಕ್ಕೆ ತಯಾರಿ

ತುಮಕೂರು
               ತುಮಕೂರಿನ ಆಕೃತಿ ಎಂಬ ಕಂಪನಿಯಿಂದ ಇಸ್ರೇಲ್ ಮಾದರಿಯ ಕೃಷಿಯನ್ನು ಕೇವಲ ನೀರಾವರಿ ಅಲ್ಲದೆ ಇತರೆ ಪ್ರದೇಶಗಳಲ್ಲಿಯೂ ಅಳವಡಿಸಿಕೊಂಡು ಕೃಷಿ ಮಾಡಿ ರೈತರಿಗೆ ಅನುಕೂಲ ಮಾಡಲು ಕ್ರಿಯಾಯೋಜನೆಯನ್ನು ರೂಪಿಸಿದ್ದು, ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದೇವೆ ಎಂದು ಡ್ರೋನ್ ಪೈಲಟ್ ಅಶೋಕ್ ತಿಳಿಸಿದರು.
               ಶನಿವಾರ ನಗರದ ಖಾಸಗಿ ಹೋಟೆಲ್‍ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರವೇ ಇಸ್ರೇಲ್ ಮಾದರಿಯ ಕೃಷಿ ಪದ್ದತಿಯ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿದೆ. ಈ ಸಂಬಂಧ ಆಕೃತಿ ಕಂಪನಿಯು ರೈತರ ಕಷ್ಟಗಳನ್ನು ಅರಿತು, ಅವರ ಕಷ್ಟಗಳನ್ನು ನಿವಾರಿಸುವ ದೃಷ್ಟಿಯಿಂದ ರೈತರಲ್ಲಿ ಸೂಕ್ಷ್ಮ, ಅತಿ ಸೂಕ್ಷ್ಮ, ಸಣ್ಣ ಹಾಗೂ ಅತಿ ಸಣ್ಣ ಎಂದು ನಾಲ್ಕು ರೀತಿಯಲ್ಲಿ ವಿಂಗಡಣೆ ಮಾಡಿಕೊಂಡು ಅವರನ್ನು ಕಂಪನಿಯ ಸದಸ್ಯತ್ವಕ್ಕೆ ಸೇರಿಸಿಕೊಂಡು, ಯಾವ ಕಾಲದಲ್ಲಿ ಯಾವ ರೀತಿ ಬೆಳೆಯನ್ನು ಬೆಳೆದರೆ ಲಾಭ ಸಿಗುತ್ತದೆ ಎಂಬುದನ್ನು ಮಣ್ಣಿನ ಪರೀಕ್ಷೆ ಮಾಡಿಸುವ ಮೂಲಕ ಸಲಹೆ ನೀಡಲಾಗುವುದು ಎಂದರು.
               ಕೇವಲ 1 ರಿಂದ 100 ತೆಂಗಿನ ಗಿಡಗಳುಳ್ಳ ರೈತರನ್ನು ಮಾತ್ರ ಸದಸ್ಯತ್ವಕ್ಕೆ ಪಡೆದು ಅದರಿಂದ ಅವರಿಗೆ ಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡಲಾಗುತ್ತದೆ. ಸಾಲ ಸೌಲಭ್ಯ, ಕ್ರಿಮಿಕೀಟ ನಾಶಕಗಳು ಸೇರಿದಂತೆ ಔಷಧಿ ಸಿಂಪರಣೆಗೆ ಡ್ರೋನ್ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಯನ್ನು ನೀಡಿ ಕಂಪನಿಯಿಂದಲೇ ಕೊಂಡುಕೊಂಡು ಅದನ್ನು ರಫ್ತು ಮಾಡಿ ಮಾರಾಟ ಮಾಡಲಾಗುವುದು. ಜಿಲ್ಲೆಯಲ್ಲಿ ತೆಂಗು ಬೆಳೆಗಾರರು ಹೆಚ್ಚಾಗಿದ್ದು, ತೆಂಗು ಬೆಳೆಯುವ ಪ್ರದೇಶಗಳು ಹೆಚ್ಚಾಗಿವೆ. ಆದ್ದರಿಂದ ತೆಂಗಿನ ಕಾಯಿ ಬೆಳೆಯುವ ಆಧಾರದಲ್ಲಿ ರೈತರನ್ನು ವಿಂಗಡಣೆ ಮಾಡಿ ಮರಕ್ಕೆ 10 ರೂ. ನಂತೆ ನಿರ್ದಿಷ್ಟ ಸದಸ್ಯತದ್ವ ಹಣವನ್ನು ಪಡೆಯುತ್ತೇವೆ. ಇಸ್ರೋ ಅಧಿಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಕೃಷಿ ಮಾಡಲು ಸುಲಭ ತಂತ್ರಗಾರಿಕೆಯನ್ನು ತೋರಿಸಿಕೊಡಲಾಗುತ್ತದೆ. ಇದರಿಂದ ರೈತರು ವಲಸೆ ಹೋಗುವುದು ತಪ್ಪುತ್ತದೆ, ಜೊತೆಗೆ ಸಾಕಷ್ಟು ಮಂದಿಗೆ ಕೆಲಸ ದೊರೆತಂತಾಗುತ್ತದೆ. ಆಧುನಿಕ ತಂತ್ರಜ್ಞಾನ ಡ್ರೋನ್ ಬಳಕೆ ಮಾಡಿ ಬೆಳೆಗಳಿಗೆ ಕ್ರಿಮಿ ನಾಶಕ ಸಿಂಪಡಿಸುವ ವ್ಯವಸ್ಥೆ ಕೂಡ ನಾವೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.
              ಈ ಬಗ್ಗೆ ಪ್ರತಿ 15 ದಿನಕ್ಕೊಮ್ಮೆ ಕೃಷಿ ಇಲಾಖೆಗೆ ವರದಿ ಸಲ್ಲಿಸುವ ಮೂಲಕ ಸರ್ಕಾರದಿಂದ ಅದಕ್ಕೆ ಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಪ್ರ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಸಂಬಂಧ ತುಮಕೂರು ಗ್ರಾಮಾಂತರ ಪ್ರದೇಶ ಕೆ.ಪಾಲಸಂದ್ರ ಮತ್ತು ಸಿರಾದ ಭುವನಹಳ್ಳಿಯನ್ನು ಆಯ್ಕೆ ಮಾಡಿಕೊಂಡಿದ್ದು ಪ್ರಾಯೋಗಿಕ ಕಾರ್ಯ ಆರಂಭ ಮಾಡಲಿದ್ದೇವೆ. ಇದು ಮುಂದುವರೆದ ಭಾಗವಾಗಿ ಜನವರಿ ಅಥವಾ ಫೆಬ್ರ್ರುವರಿಯಿಂದ ಚಾಲ್ತಿಗೆ ಬರುವಂತೆ ಮಾಡಲಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಂಪನಿ ಆಪರೇಷನ್ಸ್ ಮುಖ್ಯಸ್ಥೆ ಮೇಘನಾ, ಕಂಪನಿ ಸಲಹೆಗಾರ ಸುನೀಲ್, ತಾಂತ್ರಿಕ ಸಹಾಯಕ ಭರತ್ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link