ತಿಪಟೂರು
ತಾಲ್ಲೂಕಿನಲ್ಲಿ ಈ ಬಾರಿಯು ಮಳೆ ಕೈಕೊಟ್ಟಿದ್ದು ರೈತರು ಮಳೆಗಾಗಿ ಪ್ರಾರ್ಥಿಸುವಂತಾಗಿದ್ದು ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಗಳ ಚೆಲ್ಲಿ ಎಂಬ ಕವಿವಾಣಿಯಂತೆ, ಮಳೆಯ ಹನಿಗಾಗಿ ಕಾಯುವ ಚಕ್ರವಾಕ ಪಕ್ಷಿಗಳಂತೆ ಮಳೆಯ ಹನಿಗಾಗಿ ಕಾಯುತ್ತಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಪಶ್ಚಿಮಘಟ್ಟದಲ್ಲಿ ಮಳೆಯಾಗಿ ಅನಾವೃಷ್ಟಿಯನ್ನು ಸೃಷ್ಟಿಸಿದೆ. ಆದರೆ ನಮ್ಮ ಜಿಲ್ಲೆಗಳ ಕಡೆ ಸೂಕ್ತ ಸಮಯಕ್ಕೆ ಮಳೆಬಾರದೆ ಮತ್ತೆ ಬರಗಾಲದ ಛಾಯೆ ಆವರಿಸುವಂತೆ ಕಾಣುತ್ತಿದೆ. ರೈತರು ಈಗ ಬೀಳುತ್ತಿರುವ ಅಲ್ಪಮಳೆಯಲ್ಲೇ ತಮ್ಮ ಜಮೀನನ್ನು ಸ್ವಚ್ಛಗೊಳಿಸಿಕೊಂಡು ನಾಟಿಗೆ ಅಣಿಮಾಡಿಕೊಂಡಿದ್ದಾರೆ. ಆದರೆ ಈ ಬಾರಿ ಮಳೆಯ ಕಣ್ಣಾಮುಚಾಲೆ ಆಟದಿಂದ ರೈತರು ಸಾಲ ಸೋಲ ಮಾಡಿಕೊಂಡು ಬಿತ್ತನೆ ಬೀಜವನ್ನು ಮತ್ತು ಗೊಬ್ಬರವನ್ನು ತಂದು ಮಳೆಗಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಒಂದು ವೇಳೆ ಮಳೆ ಬಾರದೆ ಇದ್ದರೆ ವ್ಯವಸಾಯವನ್ನೇ ನಂಬಿರುವ ನಾವುಗಳು ವ್ಯವಸಾಯವನ್ನೇ ಮರೆತು ಜೀವನಕ್ಕಾಗಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೇರೆ ಕೆಲಸಗಳನ್ನು ಹುಡುಕಿಕೊಂಡು ನಗರದತ್ತ ವಲಸೆ ಹೋಗದೆ ವಿಧಿಯೇ ಇಲ್ಲವೆನ್ನುತ್ತಿದ್ದಾರೆ.
ತಿಪಟೂರು ತಾಲ್ಲೂಕಿನಲ್ಲಿ ನಿವ್ವಳ ಸಾಗುವಳಿ 27415 ಹೆಕ್ಟೇರ್ ಇದ್ದು ಇದರಲ್ಲಿ 13331 ಹೆಕ್ಟೇರ್ ಬಿತ್ತನೆಯಾಗಿದ್ದು ಶೇಕಡ 48ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಅಂದರೆ ಇನ್ನೂ ಶೇಕಡ 52% ಬಿತ್ತನೆಯಾಗಬೇಕಾಗಿದ್ದು ಈ ತಿಂಗಳ ಕೊನೆಯವರೆಗೂ ಅಲ್ಪಾವಧಿಯ ರಾಗಿ ತಳಿಗಳಾದ ಜಿ.ಪಿ.ಯು 28, ಎಂ.ಎಲ್ 68 ಬಿತ್ತನೆ ಮಾಡಿದರೆ ಉತ್ತಮ ಇಳುವರಿಯನ್ನು ನಿರೀಕ್ಷಿಸಬಹುದಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿಗಳಾದ ಜಯಪ್ಪ ತಿಳಿಸಿದರು.
ತಾಲ್ಲೂಕಿನಲ್ಲಿ 2018ನೇ ಸಾಲಿನಲ್ಲಿ 335mm ಆದರೆ 211mm ಮಳೆಯಾಗಿದ್ದು 123mm ಮಳೆ ಕೊರತೆ ಕಾಣುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 123 mm ಮಳೆಕೊರತೆ ಇದೆ. ಜುಲೈನಲ್ಲಿ ವಾಡಿಕೆ ಮಳೆ 59mm ಆದರೆ ಕೇವಲ 12mm ಮಳೆಯಾಗಿದ್ದು 47mm ಮಳೆ ಕೊರತೆಯಾಗಿದ್ದು ರಾಗಿ ಬಿತ್ತನೆ ಕುಂಠಿತವಾಗಿದೆ. ಈ ತಿಂಗಳಲ್ಲಿ ಇನ್ನೂ ಹದಿನೈದು ದಿನಗಳು ಬಾಕಿ ಇದ್ದು ಉಳಿಕೆ ವಾಡಿಕೆ ಮಳೆಯಾದರೆ ರಾಗಿಯ ಬಿತ್ತನೆಗೆ ಉತ್ತಮವಾಗುತ್ತದೆ. ಇಲ್ಲದಿದ್ದರೆ ಹುರುಳಿ ಕಾಳನ್ನು ಬಿತ್ತನೆಮಾಡಿದರೆ ಉತ್ತಮ ಇಳುವರಿ ನಿರೀಕ್ಷಿಸಬಹುದಾಗಿದೆ.
ಕೃಷಿ ಇಲಾಖೆಯಿಂದ ಈಗಾಗಲೇ ಎಲ್ಲಾ ಹೋಬಳಿ ಕೇಂದ್ರದಲ್ಲಿ ಬಿತ್ತನೆ ರಾಗಿಯನ್ನು ರೈತರಿಗೆ ಹಂಚಿದ್ದು ಹೊನ್ನವಳ್ಳಿ 3825 ಹೆಕ್ಟೇರ್, ಕಿಬ್ಬನಹಳ್ಳಿ (ಬಿಳಿಗೆರೆ) 2440 ಹೆಕ್ಟೇರ್ ಹಾಗೂ ನೋಣವಿನಕೆರೆ 1767 ಯಲ್ಲಿ ಹೋಬಳಿಗಳಲ್ಲಿ ಶೇಕಡ 48.63 % ಬಿತ್ತನೆಯಾಗಿದೆ. ಆದರೆ ಕಸಬಾ 5298 ಹೆಕ್ಟೇರ್ ಮತ್ತು ಇಲ್ಲಿನ ಗುರುಗದಹಳ್ಳಿ, ಶಿವರ, ತಡಸೂರು, ಗೌಡನಕಟ್ಟೆ ಸುತ್ತಮುತ್ತ ಬಿತ್ತನೆ ಕುಂಠಿತವಾಗಿದೆ. ಇನ್ನೂ ನೀರಾವರಿ ಆಶ್ರಯದಲ್ಲಿ ಒಟ್ಟು 310 ಹೆಕ್ಟೇರ್ ಇದ್ದು 37.10 ಹೆಕ್ಟೇರ್ ಭತ್ತ ಬಿತ್ತನೆಯಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ರೈತರುಗಳು ಈಗ ಬೀಳುತ್ತಿರುವ ತುಂತುರು ಮಳೆಯನ್ನೇ ನಂಬಿಕೊಂಡು ಮತ್ತು ಈ ತಿಂಗಳೂ ಕಳೆದರೆ ಬೆಳೆ ಬರುವುದಿಲ್ಲ ಎಂದು ದೇವರÀ ದಯೆಯಿಂದ ಮಳೆಬರುತ್ತೆ ಎಂದು ಬಿತ್ತನೆಬೀಜ ಮತ್ತು ಗೊಬ್ಬರವನ್ನು ತಂದು ನಮ್ಮ 4 ಎಕರೆ ಜಮೀನಿನಲ್ಲಿ ರಾಗಿಯನ್ನು ಬಿತ್ತಿದ್ದೇವೆ ಎಂದು ಯುವ ರೈತನಾದ ಮಾದಿಹಳ್ಳಿ ಗೊಲ್ಲರಹಟ್ಟಿಯ ಚಿದಾನಂದ್ ತಿಳಿಸಿದರು.
ರೈತಮುಖಂಡರಾದ ರಾಜಣ್ಣ ಮಾತನಾಡಿ ಪ್ರತಿ ಸಾರಿಗಿಂತ ಈ ಬಾರಿ ತುಂಬಾ ಕಡಿಮೆ ಮಳೆಯಾಗಿದೆ. ಇದರಿಂದ ರೈತರಿಗೆ ಬಿತ್ತನೆಗೆ ತುಂಬಾ ತೊಂದರೆಯಾಗಿದ್ದು ಈ ಮಳೆ ಉತ್ತಮವಾಗಿ ಈ ತಿಂಗಳೊಳಗೆ ಬಂದರೆ ಉತ್ತಮ ಇಳುವರಿಯನ್ನು ನಿರೀಕ್ಷಿಸಬಹುದು. ಆದರೆ ಮಳೆ ಕೈಕೊಟ್ಟರೆ ಬಿತ್ತಿದೆ ಕೂಲಿಯು ಸಿಗುವುದಿಲ್ಲ, ಇದರಿಂದ ಈಗಾಗಲೇ ತೊಂದರೆಯಲ್ಲಿರುವ ರೈತರು ಇನ್ನೂ ಹೆಚ್ಚಿನ ತೊಂದರೆಗೆ ಸಿಕ್ಕಿ ಜೀವನ ಮಾಡುವುದೇ ದುಸ್ಥರವಾಗುತ್ತದೆ. ಆದ್ದರಿಂದ ಸರ್ಕಾರವು ಕೂಡಲೇ ನೆರವಿಗೆ ದಾವಿಸಬೇಕೆಂದು ಆಗ್ರಹಿಸಿದರು.