ಜನವರಿಯಲ್ಲಿ ಹೊಸ ಕ್ಯಾಂಪಸ್‍ಗೆ 3 ಪಿಜಿ ಕೋರ್ಸ್

ತುಮಕೂರು:

ಹೊಸ ವರ್ಷಾರಂಭ ಜನವರಿಯಿಂದ ತುಮಕೂರು ವಿವಿ 3 ಸ್ನಾತಕೋತ್ತರ ವಿಭಾಗಗಳನ್ನು ಬಿದರಕಟ್ಟೆಯ ಹೊಸ ಕ್ಯಾಂಪಸ್‍ಗೆ ಸ್ಥಳಾಂತರ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.

ವಿವಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಸ ಕ್ಯಾಂಪಸ್‍ಗೆ 2022ರಲ್ಲಿ ಪ್ರವೇಶಿಸಲೇಬೇಕೆಂದು ದೃಢ ಸಂಕಲ್ಪ ಮಾಡಿ ಬಯೋಟೆಕ್ನಾಲಜಿ, ಎಂ.ಕಾಂ(ಐಎಸ್), ಆರ್ಗಾನಿಕ್ ಕೆಮಿಸ್ಟ್ರಿ ವಿಭಾಗವನ್ನು ಹೊಸ ಕ್ಯಾಂಪಸ್‍ಗೆ ಸ್ಥಳಾಂತರಿಸಲು ಎಲ್ಲಾ ಸಿದ್ಧತೆ ನಡೆಸಲಾಗಿದೆ. ಕ್ಯಾಂಪಸ್ ಪೂರ್ಣಗೊಂಡ ಮೇಲೆ ಹಂತ ಹಂತವಾಗಿ ಉಳಿದ ವಿಭಾಗಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು.

ಜಿಲ್ಲಾ ಕೇಂದ್ರದಿಂದ 16 ಕಿ.ಮೀ. ದೂರವಿರುವ ಕ್ಯಾಂಪಸ್‍ಗೆ ಹೋಗಿ ಬರಲು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ತೊಂದರೆಯಾಗಬಾರದೆಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಕರೊಂದಿಗೆ ಪತ್ರ ಬರೆದು ಬಸ್ ವ್ಯವಸ್ಥೆ ಕಲ್ಪಿಸುವಂತೆ, ಚರ್ಚಿಸಿದ್ದು, ಬೆಳಿಗ್ಗೆಯಿಂದ ಸಂಜೆಯವರೆಗೆ ತುಮಕೂರಿಂದ-ಬಿದರಕಟ್ಟೆ ಪ್ರತೀ ಗಂಟೆಗೊಮ್ಮೆ ಬಸ್ ಸಂಚಾರ ನಡೆಸಲು ಒಪ್ಪಿದ್ದಾರೆ. ಅತಿಥಿ ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರನ್ನು ಕ್ಯಾಂಪಸ್‍ಗೆ ತೆರಳಿ ಪಾಠಮಾಡಬೇಕೆಂದು ಸೂಚಿಸಿದ್ದು, ಸುಮಾರು 120 ವಿದ್ಯಾರ್ಥಿಗಳು ಹೊಸ ಕ್ಯಾಂಪಸ್‍ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಲಿದ್ದಾರೆ ಎಂದರು.

ಕುಲಪತಿಯಾಗಿ ಬಂದ ಕಳೆದ ಮೂರು ವರ್ಷಗಳಲ್ಲಿ ವಿವಿಯನ್ನು ಶೈಕ್ಷಣಿಕವಾಗಿ ಬೆಳೆಸಲು ಹೆಚ್ಚಿನ ಒತ್ತುಕೊಟ್ಟಿದ್ದು, 17 ಹೊಸ ಕೋರ್ಸ್ ಆರಂಭಿಸಲಾಗಿದೆ. 540 ಇದ್ದ ವಿದ್ಯಾರ್ಥಿಗಳ ಸಂಖ್ಯೆ 3000ಕ್ಕೆ ಏರಿಕೆಯಾಗಿದೆ. ಉನ್ನತ ಶಿಕ್ಷಣ ಎಲ್ಲರಿಗೂ ಸಿಗಬೇಕೆಂಬ ಸರಕಾರದ ಆಶಯವನ್ನು ಈಡೇರಿಸಲು ತುಮಕೂರು ವಿವಿ ಇತರೆ ವಿವಿಗಳಿಗಿಂತ ಒಂದು ಹೆಜ್ಜೆ ಮುಂದಡಿಯಿಟ್ಟಿದೆ. ಆಡಳಿತದಲ್ಲೂ ಪಾರದರ್ಶಕತೆ ತರಲಾಗಿದ್ದು, ಜಿಇಪಿ(ಗೌರ್ನಮೆಂಟ್ ಇ ಮಾರ್ಕೆಟ್) ವ್ಯವಸ್ಥೆಯಡಿ ಮೂಲಸೌಕರ್ಯದ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಖರೀದಿಸಲಾಗುತ್ತಿದೆ ಎಂದರು.

ಎನ್‍ಇಪಿ ಅನುಷ್ಠಾನದಲ್ಲೂ ವಿವಿ ಮುಂಚೂಣಿ

ಎನ್.ಇಪಿ ಅನುಷ್ಠಾನದಲ್ಲೂ ತುಮಕೂರು ವಿವಿ ಮುಂಚೂಣಿಯಲ್ಲಿದೆ ಎಂದು ಕುಲಪತಿಗಳು ಸರಕಾರ ಹಾಕಿಕೊಟ್ಟ ವೇಳಾಪಟ್ಟಿಯನುಸಾರವೇ ನೂತನ ರಾಷ್ಟ್ರೀಯ ನೀತಿಯನ್ನು ಅನುಷ್ಠಾನಗೊಳಿಸುತ್ತಿರುವ ಮೊದಲ ವಿವಿಯೆನಿಸಿದೆ. ನೂತನ ನೀತಿಯನುಸಾರ ಸಮಾಜವಿಜ್ಞಾನ, ಮಾನವಿಕ ವಿಜ್ಞಾನ, ವಿಜ್ಞಾನ ಹಾಗೂ ವಾಣಿಜ್ಯ ಹೀಗೆ ಎಲ್ಲಾ ನಿಖಾಯಗಳಲ್ಲೂ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗಿದ್ದು, ತಂತ್ರಜ್ಞಾವ ಆಧಾರಿತ, ವೃತ್ತಿಗೆ ಪೂರಕ ಕಲಿಕೆಗೆ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳಿಗೂ ಇದು ವರದಾನವೆನಿಸಿದೆ ಎಂದರು.

ಕೋಟ್ 2016ರಲ್ಲಿ ತುಮಕೂರು ವಿವಿ ನೂತನ ಕ್ಯಾಂಪಸ್‍ಗೆ ಮಂಜೂರಾಗಿದ್ದ 40 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಸರಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮೂಲಕ ಕೋರಿಕೆ ಸಲ್ಲಿಸಲಾಗಿದ್ದು, ಕಡತ ಸಿಎಂ ಮುಂದಿದೆ. ಶೀಘ್ರ ಅನುದಾನ ಬಿಡುಗಡೆಯಾಗುವ ನಿರೀಕ್ಷೆಇದೆ. 2022 ಜನವರಿ ಅಂತ್ಯಕ್ಕೆ ಸಿಎಂ ಸಹ ನೂತನ ಕ್ಯಾಂಪಸ್‍ಗೆ ಭೇಟಿಕೊಡಲಿದ್ದಾರೆ.

-ಪ್ರೊ.ವೈ.ಎಸ್.ಸಿದ್ದೇಗೌಡ, ತುಮಕೂರು ವಿವಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link