
ಮೈಸೂರು: ಕೆ. ಆರ್. ಎಸ್ ಹಾಗೂ ಕಬಿನಿ ಜಲಾಶಯದಿಂದ ಕಳೆದ ಎರಡು ದಿನಗಳಿಂದ ೧೬,೬೮೫ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದ್ದು, ಒಳ ಹರಿವಿಗಿಂತ ಹೆಚ್ಚಿನ ನೀರನ್ನು ನದಿಗೆ ಬಿಡುತ್ತಿರುವುದು ಈಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಾದ ಕೆ.ಆರ್.ಎಸ್ ಹಾಗೂ ಕಬಿನಿ ಜಲಾಶಯಗಳಿಗೆ ಒಳ ಹರಿವು ಕಡಿಮೆ ಇದ್ದರೂ ಸುಮಾರು ೧೬,೬೮೫ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದ್ದು, ಕಾವೇರಿ ನೀರಾವರಿ ನಿರ್ವಹಣಾ ಪ್ರಾಧಿಕಾರ ಪ್ರತಿದಿನ ೧೨,೦೦೦ ಕ್ಯೂಸೆಕ್ ನೀರನ್ನು ಬಿಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕಳೆದ ರಾತ್ರಿಯಿಂದ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುತ್ತಿದೆ.
ಜಲಾಶಯದ ನೀರಿನ ಮಟ್ಟ ಹಾಗೂ ಹೊರ ಹರಿವು: ಇಂದು ಕಾವೇರಿ ನೀರಾವರಿ ನಿಗಮ ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲಾಶಯಗಳ ನೀರಿನ ಮಟ್ಟದ ಮಾಹಿತಿ ಬಿಡುಗಡೆ ಮಾಡಿದ್ದು, ಅದರಲ್ಲಿ ಶ್ರೀರಂಗಪಟ್ಟಣದ ಬಳಿ ಇರುವ ಕೆ.ಆರ್.ಎಸ್ ಜಲಾಶಯದ ಗರಿಷ್ಠ ಮಟ್ಟ ೧೨೪.೮೦ ಅಡಿ, ಇಂದಿನ ಗರಿಷ್ಠ ಮಟ್ಟ ೧೦೯.೫೫ ಅಡಿ. ಒಳ ಹರಿವು ೨,೦೬೯ ಕ್ಯೂಸೆಕ್, ಹೊರ ಹರಿವು ೩,೧೮೬ ಕ್ಯೂಸೆಕ್ ಇದೆ.
ಇನ್ನು ಕಬಿನಿ ಜಲಾಶಯದ ಗರಿಷ್ಠ ಮಟ್ಟ ೮೪ ಅಡಿ, ಇಂದಿನ ಮಟ್ಟ ೮೦ ಅಡಿ. ಒಳ ಹರಿವು ೭,೭೪೭ ಕ್ಯೂಸೆಕ್, ಹೊರ ಹರಿವು ೧೩,೬೦೦ ಕ್ಯೂಸೆಕ್ ಆಗಿದ್ದು, ಇಲ್ಲಿ ಗಮನಿಸಬೇಕಾದ ಅಂಶವೇನೆAದರೆ ಒಳ ಹರಿವು ಕೆ.ಆರ್.ಎಸ್ ನಿಂದ ೨,೦೬೯ ಕ್ಯೂಸೆಕ್ ದಾಖಲಾಗಿದೆ. ಇನ್ನು ಕಬಿನಿಯಿಂದ ೭,೭೪೭ ಕ್ಯೂಸೆಕ್ ಒಳ ಹರಿವಿದ್ದು, ಎರಡು ಪ್ರಮುಖ ಜಲಾಶಯಗಳಿಂದ ೯,೮೧೬ ಕ್ಯೂಸೆಕ್ ಒಳ ಹರಿವಿದೆ. ಆದರೆ ಹೊರ ಹರಿವು ೧೬,೮೮೫ ಕ್ಯೂಸೆಕ್ ಇದ್ದು, ಈಗ ರೈತರು ನಮ್ಮ ಎರಡು ಜಲಾಶಯಗಳು ತುಂಬಿಲ್ಲ ಹಾಗೂ ನಮ್ಮ ಕಾಲುವೆಗಳಿಗೆ ನೀರು ಹರಿಸಿಲ್ಲ. ಆದರೂ ನದಿಗೆ ಏಕೆ ನೀರು ಹರಿಸಲಾಗುತ್ತಿದೆ ಅದರಲ್ಲೂ ಕಬಿನಿಯಿಂದ ಬೆಳೆಗಳಿಗೆ ಹಾಗೂ ಕುಡಿಯಲು ನೀರು ಹರಿಸುವುದನ್ನು ಬಿಟ್ಟು, ನದಿಗೆ ಏಕೆ ೧೬,೬೮೫ ಕ್ಯೂಸೆಕ್ ನೀರನ್ನು ಹರಿಸಲಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ಮುಖಂಡ ಹಳ್ಳಿಹುಂಡಿ ಭಾಗ್ಯರಾಜ್ ಪ್ರಶ್ನಿಸಿದ್ದಾರೆ.
ಕೆ. ಆರ್. ಎಸ್ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗಿಲ್ಲ. ಕೇರಳದ ವಯನಾಡು ಹಾಗೂ ಕೊಡಗಿನಲ್ಲಿ ಮಳೆ ಕೂಡ ಕಡಿಮೆಯಾಗಿದೆ. ಇದರಿಂದ ಕಬಿನಿ ಹಾಗೂ ಕೆ.ಆರ್. ಎಸ್ ಜಲಾಶಯಗಳಿಗೆ ಒಳ ಹರಿವು ಕಡಿಮೆಯಾಗಿದೆ. ಆದರೂ, ರೈತರ ಬೆಳೆಗಳಿಗಾಗಿ ಕಾಲುವೆಗೆ ನೀರು ಹರಿಸುವುದನ್ನು ಬಿಟ್ಟು ನದಿಗೆ ಜಲಾಶಯಗಳಿಂದ ಒಳ ಹರಿವಿಗಿಂತ ಹೆಚ್ಚಿನ ನೀರನ್ನು ಬಿಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿ ಕದ್ದುಮುಚ್ಚಿ ನೀರು ಬಿಡುತ್ತಿದ್ದಾರೆ.
– ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷರು, ರಾಜ್ಯ ರೈತ ಸಂಘ, ಹಸಿರು ಸೇನೆ
ಮಾಹಿತಿ ನೀಡಲು ಅಧಿಕಾರಿಗಳ ನಿರಾಕರಣೆ:
ನದಿಗೆ ಕಬಿನಿ ಮತ್ತು ಕೆ.ಆರ್. ಎಸ್ ಜಲಾಶಯಗಳಿಂದ ೧೬,೬೮೫ ಕ್ಯೂಸೆಕ್ ನೀರನ್ನು ಬಿಡಲಾಗಿದೆ ಎಂದು ಮಾಹಿತಿ ನೀಡಿದ ಮೈಸೂರಿನ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಈ ನೀರು ತಮಿಳುನಾಡಿಗೆ ಹರಿಸಲಾಗುತ್ತಿದೆ ಎಂಬ ವಿಚಾರದ ಕುರಿತು ಮಾಹಿತಿ ನೀಡಲು ನಿರಾಕರಿಸಿದರು.








