ಒಮ್ಮತಕ್ಕೆ ಬರುವಲ್ಲಿ ವಿಫಲವಾದ ಮೈತ್ರಿ ಪಕ್ಷಗಳು …!!!

ತುಮಕೂರು

         ಲೋಕಸಭಾ ಚುನಾವಣೆಗೆ ಮಾರ್ಚ್ 19 ರಂದು ಅಧಿಸೂಚನೆ ಪ್ರಕಟವಾಗಲಿದೆ. ಈ ನಡುವೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಗೊಂದಲ ಇನ್ನೂ ಮುಂದುವರೆದಿದೆ. ಮೈತ್ರಿ ಪಕ್ಷಗಳಲ್ಲಿ ಇನ್ನೂ ಒಮ್ಮತ ಮೂಡುವುದು ಸಾಧ್ಯವಾಗಿಲ್ಲ. ಈಗಾಗಲೇ ಎರಡು ಮೂರು ಸಭೆಗಳಾದರೂ ತುಮಕೂರು ಸೇರಿದಂತೆ ರಾಜ್ಯದ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರ ಮಹತ್ವ ಪಡೆದುಕೊಂಡಿದೆ.

            ಚುನಾವಣೆ ಘೋಷಣೆಯಾಗುವವರೆಗೂ ಇದ್ದ ವಾತಾವರಣ ಈಗ ಇಲ್ಲ. ಹಾಲಿ ಸಂಸದರೆ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ವಾತಾವರಣ ಮೇಲ್ನೋಟಕ್ಕೆ ಕಾಣುತ್ತಿತ್ತು. ಆದರೆ ದೋಸ್ತಿ ಪಕ್ಷಗಳ ಸಭೆಗಳಲ್ಲಿ ಕಂಡುಬಂದ ವಿದ್ಯಮಾನಗಳು ಬೇರೆಯದ್ದೇ ಚಿತ್ರಣ ಮೂಡಿಸತೊಡಗಿದವು. 12 ಕ್ಷೇತ್ರಗಳು ನಮಗೆ ಬೇಕೆಂದು ಪಟ್ಟು ಹಿಡಿದಿದ್ದ ಜೆಡಿಎಸ್ ಇದೀಗ ತನ್ನ ಪಟ್ಟನ್ನು ಸಡಿಲಿಸಿದ್ದರೂ ಕೆಲವೊಂದು ಕ್ಷೇತ್ರಗಳು ತನಗೇ ಬೇಕೆಂದು ಹಠ ಹಿಡಿದಿರುವುದು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿ ಪರಿಣಮಿಸಿದೆ.

          ಮೈಸೂರು, ತುಮಕೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ತನಗೆ ಬಿಟ್ಟು ಕೊಡುವಂತೆ ಜೆಡಿಎಸ್ ಒತ್ತಡ ಹಾಕುತ್ತಲೇ ಇದೆ. ಇದಕ್ಕೆ ಈ ಹಿಂದಿನಿಂದಲೂ ಪ್ರತಿಕ್ರಿಯಿಸುತ್ತಾ ಬಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲಿ ಸಂಸದರಿರುವ ಪಕ್ಷದ ಕ್ಷೇತ್ರಗಳನ್ನು ಬಿಟ್ಟುಕೊಡಲಾಗದು ಎಂದೇ ಹೇಳುತ್ತಿದ್ದಾರೆ. ಮೈಸೂರನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಸಿದ್ದರಾಮಯ್ಯ ಅವರಿಗೆ ಸುತಾರಾಂ ಇಷ್ಟವಿಲ್ಲ. ಟಿಕೆಟ್ ಅಂತಿಮಗೊಳಿಸುವ ಹಂತದಲ್ಲಿರುವ ಕಾಂಗ್ರೆಸ್‍ಗೆ ಈಗ ಎರಡು ರೀತಿಯ ಸವಾಲು ಎದುರಾಗಿದೆ.

          ಒಂದು ಮೈತ್ರಿ ಪಕ್ಷ ಜೆಡಿಎಸ್ ಇಟ್ಟಿರುವ ಬೇಡಿಕೆ ಒಪ್ಪಿಕೊಳ್ಳಬೇಕೋ ಅಥವಾ ಮೂರರಲ್ಲಿ ಯಾವುದನ್ನು ಆ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂಬ ಸಂದಿಗ್ದತೆ ಶುರುವಾಗಿದೆ. ತುಮಕೂರು, ಚಿಕ್ಕಬಳ್ಳಾಪುರ ಮತ್ತು ಮೈಸೂರು ಕ್ಷೇತ್ರಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿರುವುದನ್ನು ಬಹಿರಂಗವಾಗಿ ವಿರೋಧಿಸಲೂ ಆಗದೆ ಒಪ್ಪಿಕೊಳ್ಳಲೂ ಸಾಧ್ಯವಾಗದೆ ಕಾಂಗ್ರೆಸ್ ನಾಯಕರು ತಮಗೆ ತಾವೇ ಶಪಿಸಿಕೊಳ್ಳುವಂತಾಗಿದೆ.

         ತುಮಕೂರು ಜಿಲ್ಲೆಯ ಲೋಕಸಭಾ ಕ್ಷೇತ್ರವನ್ನು ಗಮನಿಸಿದರೆ ಕಾಂಗ್ರೆಸ್‍ಗಿಂತ ಜೆಡಿಎಸ್ ಸ್ಥಾನಗಳೆ ಹೆಚ್ಚಿವೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಸದಸ್ಯರಿದ್ದಾರೆ. ಒಂದು ಕಡೆ ಮಾತ್ರವೆ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಬರುವ ಮತಗಳು ಹೆಚ್ಚಾಗಿವೆ ಎಂಬುದು ಜೆಡಿಎಸ್ ವರಿಷ್ಠರ ಲೆಕ್ಕಾಚಾರಗಳು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವು ತಪ್ಪು ನಿರ್ಧಾರಗಳಿಂದಾಗಿ ಕಾಂಗ್ರೆಸ್ ಪಕ್ಷ ಹಲವು ಕಡೆ ಸೋತು ಹೋಗಲು ಕಾರಣವಾಯಿತು ಎಂದು ಕಾಂಗ್ರೆಸ್ ಮುಖಂಡರಿಗೆ ಗೊತ್ತಿದ್ದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ.

         ಮೈತ್ರಿ ಹಿನ್ನೆಲೆಯಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುವವರೆಗೆ ಜೆಡಿಎಸ್ ಮುಖಂಡರುಗಳು ತುಮಕೂರು ಕ್ಷೇತ್ರದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರಲಿಲ್ಲ. ಪ್ರತಿ ಲೋಕಸಭಾ ಚುನಾವಣೆಯಲ್ಲಿಯೂ ಇಲ್ಲಿನ ಜೆಡಿಎಸ್ ಮುಖಂಡರು ಅಷ್ಟೊಂದು ಆಸಕ್ತಿ ವಹಿಸುವುದಿಲ್ಲ ಎಂಬುದನ್ನು ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಅರಿವಾಗುತ್ತದೆ. ಆದರೆ ಈ ಬಾರಿ ಚುನಾವಣೆ ಘೋಷಣೆಯಾದ ನಂತರ ಜೆಡಿಎಸ್ ವರಿಷ್ಠರ ನಡೆಗಳು ಇಲ್ಲಿನ ಕೆಲವರಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿದೆ. ಹಾಲಿ ಸಂಸದರೆ ಅಭ್ಯರ್ಥಿಯಾಗಿ ಮುಂದುವರೆಯಲಿದ್ದಾರೆ ಎಂದು ಅವರೆಲ್ಲ ಅಂದುಕೊಂಡದ್ದು ಉಂಟು. ಆದರೆ ಕ್ಷೇತ್ರಗಳ ಬೇಡಿಕೆ ಕುಸಿಯುತ್ತಿದ್ದಂತೆ ಕೆಲವು ಕ್ಷೇತ್ರಗಳ ಮೇಲೆ ಜೆಡಿಎಸ್ ವರಿಷ್ಠರು ಕಣ್ಣಿಟ್ಟಿದ್ದು ಈಗ ತುಮಕೂರು ಕ್ಷೇತ್ರ ಕಾತರ ಮತ್ತು ಕಳವಳಕ್ಕೆ ಕಾರಣವಾಗಿದೆ. 

         ಜೆಡಿಎಸ್ ವರಿಷ್ಠರ ಕೆಲವು ತೀರ್ಮಾನಗಳ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಸೇರಿದಂತೆ ಮೂರು ಮಂದಿಯ ಹೆಸರುಗಳು ಜೆಡಿಎಸ್ ವಲಯದಲ್ಲಿ ಹರಿದಾಡುತ್ತಿವೆ. ಹೆಸರುಗಳು ಎಷ್ಟೇ ಹರಿದಾಡಿದರೂ ಅಂತಿಮವಾಗಿ ಜೆಡಿಎಸ್ ವರಿಷ್ಠರ ತೀರ್ಮಾನವೇ ಮುಖ್ಯ ಎಂಬುದು ಎಲ್ಲರಿಗೂ ಗೊತ್ತು.

          ಜೆಡಿಎಸ್ ಬೇಡಿಕೆಯಿಂದಾಗಿ ಹೆಚ್ಚು ಆತಂಕಕ್ಕೆ ಒಳಗಾಗಿರುವವರು ಇಲ್ಲಿನ ಹಾಲಿ ಸಂಸದರು. ಚುನಾವಣೆ ಘೋಷಣೆಯಾಗುವ ದಿನದವರೆಗೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜಿಲ್ಲೆಯ ಎಲ್ಲ ಕಾರ್ಯಕ್ರಮಗಳಿಗೂ ಭಾಗಿಯಾದರು. ಚಿಕ್ಕನಾಯಕಹಳ್ಳಿ ತಾಲ್ಲೂಕಿನ ಕೆಲವು ಕಾಮಗಾರಿಗಳ ಶಂಕುಸ್ಥಾಪನೆಗೂ ಹೋಗಿ ಸ್ಥಳೀಯ ರಾಜಕಾರಣದ ವಿರೋಧಾಭಾಸಕ್ಕೆ ಒಳಗಾದರು. ಚುನಾವಣೆ ಹತ್ತಿರ ಇರುವ ಈ ಸಂದರ್ಭದಲ್ಲಿ ಇವೆಲ್ಲ ಸಾಮಾನ್ಯ ಎಂಬುದು ಎರಡೂ ಪಕ್ಷಗಳಿಂದ ಕೇಳಿಬರುವ ಮಾತುಗಳು. ಅದೇನೇ ಇರಲಿ ಈ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಜಿಲ್ಲೆಯಾದ್ಯಂತ ಓಡಾಡುತ್ತಾ ಬಂದ ಹಾಲಿ ಸಂಸದರು ಈಗ ಆತಂಕಕ್ಕೆ ಒಳಗಾಗಿರುವಂತಿದೆ. ಅಂತಿಮವಾಗಿ ಟಿಕೆಟ್ ಘೋಷಣೆಯಾಗುವವರೆಗೆ ಹಲವರ ಆತಂಕ ಇದೇ ರೀತಿ ಮುಂದುವರೆಯಬಹುದು.

          ದೋಸ್ತಿ ಪಕ್ಷಗಳಲ್ಲಿ ಟಿಕೆಟ್ ಗೊಂದಲ ಮುಂದುವರೆದಿರುವುದನ್ನು ಗಮನಿಸಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿ ನಿರತವಾಗಿದೆ. ಮೈತ್ರಿ ಪಕ್ಷಗಳ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದನ್ನು ಆ ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೈತ್ರಿ ಪಕ್ಷಗಳ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಸ್ಪಷ್ಟವಾದ ಬಳಿಕವೇ ತುಮಕೂರು ಲೋಕಸಭಾ ಕ್ಷೇತ್ರದ ರಾಜಕೀಯ ಚಿತ್ರಣ ರಂಗು ಪಡೆಯುವ ಸಾಧ್ಯತೆಗಳಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap