ಭಾರೀ ಮಳೆಗ ತತ್ತರಿಸಿ ಉತ್ತರಭಾರತ : ತುರ್ತು ಸಭೆ ಕರೆದ ಪಿಎಂ

ನವದೆಹಲಿ: 

     ಭಾರೀ ಮಳೆಗೆ ಉತ್ತರ ಭಾರತದಲ್ಲಿ ತತ್ತರಿಸಿದ್ದು, ಕಳೆದ ಮೂರು ದಿನಗಳಲ್ಲಿ 28ಕ್ಕೂ ಹೆಚ್ಚು ಮಂದಿ ಮಳೆ ಅನಾಹುತಕ್ಕೆ ಬಲಿಯಾಗಿದ್ದಾರೆ. ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

     ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಳೆ ಪೀಡಿತ ರಾಜ್ಯಗಳಿಗೆ ಪಿಎಂ ಕೇರ್ಸ್ ನಿಧಿಯಿಂದ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಪ್ರಧಾನಿ ಮೋದಿ ಅವರು ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದ್ದು, ದೇಶದ ಕೆಲವು ಭಾಗಗಳಲ್ಲಿ ಅತಿಯಾದ ಮಳೆಯಿಂದಾದ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಪ್ರಧಾನಿ ಅವರ ಕಚೇರಿ ತಿಳಿಸಿದೆ.

 

    ಸ್ಥಳೀಯ ಆಡಳಿತಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್) ತಂಡಗಳು ಸಂತ್ರಸ್ತರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಕೆಲಸ ಮಾಡುತ್ತಿವೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

    ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳು ಉಂಟಾಗಿ ವ್ಯಾಪಕ ಹಾನಿ ಮತ್ತು ಅನಾನುಕೂಲತೆ ಉಂಟಾಗಿದೆ. ಭಾರೀ ಮಳೆಯಿಂದ ರಾಜಸ್ಥಾನದ ಅಜ್ಮೀರ್, ಸಿಕರ್ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ರಾಜಸ್ಥಾನದ ಸಿಕಾರ್‍ನಲ್ಲಿ ವ್ಯಾಪಕವಾದ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.

    ಹಿಮಾಚಲ ಪ್ರದೇಶದ ಪ್ರವಾಸಿ ಪಟ್ಟಣವಾದ ಮನಾಲಿಯಲ್ಲಿ ಸಿಲುಕಿದ್ದ 20 ಜನರನ್ನು ರಕ್ಷಿಸಲಾಗಿದೆ. ಆದರೆ ಸೋಮವಾರ ಮೂರನೇ ದಿನವೂ ಭಾರೀ ಮಳೆಯಿಂದಾಗಿ ಗುಡ್ಡಗಾಡು ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 300 ಮಂದಿ ಸಿಲುಕಿಕೊಂಡಿದ್ದಾರೆ.

   ಭಾನುವಾರ ಹಿಮಾಚಲ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿದ್ದು, ಮನೆಗಳಿಗೆ ಹಾನಿಯಾಗಿದೆ ಮತ್ತು ಹಲವಾರು ಜನರು ಸಾವನ್ನಪ್ಪಿದ್ದಾರೆ. ಹವಾಮಾನ ಇಲಾಖೆಯು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದು, ಇಂದು “ರೆಡ್” ಅಲರ್ಟ್ ಘೋಷಿಸಿದೆ.

    ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಸೋಮವಾರ ಬೆಳಗ್ಗೆ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಭಾರೀ ಮಳೆಯಲ್ಲಿ, ವಿಶೇಷವಾಗಿ ನದಿಗಳು ಮತ್ತು ನಾಲೆಗಳ ಬಳಿ ಜನರು ಹೋಗಬಾರದು ಮತ್ತು ಮುಂದಿನ 24 ಗಂಟೆಗಳ ಕಾಲ ತೀವ್ರ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದಾಗಿ ತಿಳಿಸಿದ್ದಾರೆ.

    ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ಸತತ ಮೂರನೇ ದಿನವಾದ ಸೋಮವಾರ ಭಾರಿ ಮಳೆಯಾಗುತ್ತಿದ್ದು, ಅಧಿಕಾರಿಗಳು ಹೆಚ್ಚು ಹಾನಿಗೊಳಗಾದ ಸ್ಥಳಗಳಲ್ಲಿನ ಜನರನ್ನು ತಲುಪಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಹವಾಮಾನ ಇಲಾಖೆ ಪ್ರಕಾರ, ಪಂಜಾಬ್ ಮತ್ತು ಹರಿಯಾಣದ ಹಲವೆಡೆ ಬೆಳಗ್ಗೆಯಿಂದ ಮಳೆಯಾಗುತ್ತಿದೆ.

    ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ತಮ್ಮ ಎಲ್ಲಾ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದು, ಗೃಹ, ವಿಪತ್ತು ನಿರ್ವಹಣೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ಮಳೆ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap