ನವದೆಹಲಿ:
ಉಕ್ರೇನ್ ನಲ್ಲಿರುವ ಸೋವಿಯತ್ ಕಾಲದ ಬೃಹತ್ ಡ್ಯಾಂ ಅನ್ನು ರಷ್ಯಾ ಸೇನೆ ಧ್ವಂಸ ಮಾಡಿದೆ ಎಂದು ಉಕ್ರೇನ್ ಆರೋಪಿಸಿದೆ.
ದಕ್ಷಿಣ ಉಕ್ರೇನ್‌ನ ಕಖೋವ್ಕಾ ಜಲವಿದ್ಯುತ್ ಸ್ಥಾವರದಲ್ಲಿನ ಅಣೆಕಟ್ಟು ಧ್ವಂಸಗೊಂಡಿದ್ದು, ರಷ್ಯಾ ಸೇನೆಯೇ ಈ ದೃಷ್ಕೃತ್ಯ ನಡೆಸಿದೆ ಎಂದು ಉಕ್ರೇನ್ ಆರೋಪಿಸಿದೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ರಷ್ಯಾ, ಉಕ್ರೇನ್ ಸೈನಿಕರೇ ಡ್ಯಾಂ ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದೆ. ಅಣೆಕಟ್ಟು ಸ್ಫೋಟಗೊಂಡಿರುವುದರಿಂದ ಯುದ್ಧ ವಲಯದಲ್ಲಿ ಪ್ರವಾಹದ ನೀರು ಹರಿದಿದೆ.
ಪರಿಣಾಮ ಡ್ನಿಪ್ರೊದ ಪಶ್ಚಿಮ ದಂಡೆಯಲ್ಲಿರುವ ಹತ್ತು ಹಳ್ಳಿಗಳು ಮತ್ತು ಖರ್ಸನ್ ನಗರದ ಒಂದು ಭಾಗವು ಪ್ರವಾಹದ ಅಪಾಯಕ್ಕೆ ಸಿಲುಕಿವೆ. ಪ್ರಸ್ತುತ ಕಾರ್ಯನಿರತರಾಗಿರುವ ಅಧಿಕಾರಿಗಳು ಜನರನ್ನು ಸ್ಥಳಾಂತರಿಸಲು ಸೂಚನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾ ಸ್ಫೋಟದದ ವಿಡಿಯೋಗಳು ಹರಿದಾಡುತ್ತಿದ್ದು, ಅಣೆಕಟ್ಟಿನ ಅವಶೇಷಗಳ ಮೂಲಕ ನೀರು ಉಕ್ಕಿ ಹರಿಯುತ್ತಿರುವುದು ಕಂಡುಬಂದಿದೆ. ಡ್ಯಾಂ ಸ್ಫೋಟದ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ತುರ್ತು ಸಭೆ ಕರೆದಿದ್ದಾರೆ.
ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣದ ಪ್ರಾರಂಭದಲ್ಲಿ ವಶಪಡಿಸಿಕೊಂಡ ಕಾಖೋವ್ಕಾ ಅಣೆಕಟ್ಟು, ಗಮನಾರ್ಹವಾಗಿ ಕ್ರಿಮಿಯನ್ ಪರ್ಯಾಯ ದ್ವೀಪಕ್ಕೆ ನೀರನ್ನು ಪೂರೈಸುತ್ತದೆ, ಇದನ್ನು ಮಾಸ್ಕೋ 2014 ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಈ ಜಲಾಶಯವು ಜಪೋರಿಝಿಯಾ ಪರಮಾಣು ಸ್ಥಾವರಕ್ಕೆ ನೀರನ್ನು ಸಹ ಪೂರೈಸುತ್ತದೆ. ಅಣೆಕಟ್ಟು ಸ್ಫೋಟದಿಂದ ಜಪೋರಿಝಿಯಾ ಪರಮಾಣು ಸ್ಥಾವರದಲ್ಲಿ ತಕ್ಷಣಕ್ಕೆ ಪರಮಾಣು ಸುರಕ್ಷತೆಯ ಅಪಾಯವಿಲ್ಲ.. ಆದರೆ ಅದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಹೇಳಿದೆ.
ಅಣೆಕಟ್ಟೆಯ ಮೇಲೆ ಒಂದಕ್ಕಿಂತ ಹೆಚ್ಚುಬಾರಿ ಕ್ಷಿಪಣಿ ದಾಳಿಯಾಗಿದ್ದು, ಇದೇ ಡ್ಯಾಂ ಧ್ವಂಸಕ್ಕೆ ಕಾರಣ ಎಂದು ಉಕ್ರೇನ್ ಆರೋಪಿಸಿದೆ. ಡ್ಯಾಂ ಧ್ವಂಸಗೊಳಿಸುವ ಮೂಲಕ ಕೆಳ ಭಾಗದಲ್ಲಿರುವ ಉಕ್ರೇನ್ ಸೇನೆಯನ್ನು ನಾಶ ಪಡಿಸಲು ರಷ್ಯಾ ಸೇನೆ ಸಂಚು ರೂಪಿಸಿತ್ತು.
ದಕ್ಷಿಣ ಮತ್ತು ಪೂರ್ವ ಉಕ್ರೇನ್‌ನಾದ್ಯಂತ ರಷ್ಯಾ ಪಡೆಗಳ ವಿರುದ್ಧ ಉಕ್ರೇನ್‌ನ ದೀರ್ಘ-ಯೋಜಿತ ಪ್ರತಿದಾಳಿಯ ಹಿನ್ನಲೆಯಲ್ಲಿ ಈ ದಾಳಿ ಮಾಡಲಾಗಿದೆ. ಪ್ರವಾಹದ ನೀರು ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸೋವಿಯತ್ ಕಾಲದಲ್ಲಿ 1956 ರಲ್ಲಿ ಡ್ನಿಪ್ರೊ ನದಿಯ ಮೇಲೆ ನಿರ್ಮಿಸಲಾದ ಈ ಡ್ಯಾಂ ಉಕ್ರೇನ್ ಮಾತ್ರವಲ್ಲದೇ ರಷ್ಯಾದ ಹಲವು ಭಾಗಗಳಿಗೆ ನೀರು ಪೂರೈಸುತ್ತಿತ್ತು. ಈ ಡ್ಯಾಂ ನಾಶದಿಂದ ಉಕ್ರೇನ್‌ನಲ್ಲಿ ಮೂಲಸೌಕರ್ಯಕ್ಕೆ ಅತಿದೊಡ್ಡ ಹೊಡೆತ ಬಿದ್ದಂತಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ