ಹಗರಿಬೊಮ್ಮನಹಳ್ಳಿ:
ಮತದಾನ ನಮ್ಮೆಲ್ಲರ ಜನ್ಮಸಿದ್ಧ ಹಕ್ಕು, ಯಾವುದಕ್ಕೂ ಜಗ್ಗದೆ ನಿಮ್ಮ ಹಕ್ಕನ್ನು ನೀವು ಚಲಾಯಿಸುವ ಒಂದು ಅವಕಾಶ ಇದಾಗಿದೆ. ಆದ್ದರಿಂದ ಮತದಾನದಿನ ಯಾರು ಮರೆಯದೆ ಮತ ಹಾಕಿ ಎಂದು ಪಟ್ಟಣದ ಜಿ.ವಿ.ಪಿ.ಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‍ನ ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷ ಎಂ.ಶಿವಮೂರ್ತಿ ಕರೆ ನೀಡಿದರು.
ಪಟ್ಟಣದ ಕೂಡ್ಲಿಗಿ ವೃತ್ತದ ಬಳಿ ಕಾಲೇಜ್‍ನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಕಾಲೇಜ್ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ, ಮತದಾನ ಜಾಗೃತಿ ಜಾಥದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಏ.23ರಂದು ನಡೆಯುವ ಲೋಕಸಭಾ ಚುನಾವಣೆಗೆ ನೀವು ಎಲ್ಲೇ ಇರಿ. ನಿಮ್ಮ ಮತದಾನ ಕೇಂದ್ರಗಳಿಗೆ ಬಂದು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸಾಂವಿಧಾನಿಕ ನಿಮ್ಮ ಹಕ್ಕನ್ನು ಚಲಾಯಿಸಬೇಕಿದೆ ಎಂದರು.
ಪ್ರತಿಯೊಬ್ಬರು ನಿಮ್ಮ ಅತ್ಯಮೂಲ್ಯ ಮತವನ್ನು ನಿಮಗೆ ಸರಿ ಅನ್ನಿಸಿದ ವ್ಯಕ್ತಿ ಹಾಗೂ ಪಕ್ಷಕ್ಕೆ ಹಾಕುವ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕಾಗಿದೆ. ಹೊಸ ಮತದಾರರಾದ ಯುವಶಕ್ತಿಯ ಮೇಲೆ ಗುರುತರವಾದ ಜವಾಬ್ದಾರಿ ಇದೆ. ಹಾಗಾಗಿ ಮೊದಲ ಬಾರಿ ಮತದಾನ ಮಾಡುತ್ತಿರುವ ಯುವ ಸಮುದಾಯ ವಿವೇಚನೆಯಿಂದ ಸೂಕ್ತ ವ್ಯಕ್ತಿಗೆ ಮತದಾನ ಮಾಡುವ ಮೂಲಕ ದೇಶದ ರಾಜಕೀಯ ಪ್ರಭುತ್ವವನ್ನು ಸದೃಢಗೊಳಿಸಬೇಕಿದೆ ಎಂದರು.
ಕಾಲೇಜ್‍ನ ಪ್ರಾಚಾರ್ಯ ಡಾ.ಎ.ಗುರುರಾಜ, ಉಪನ್ಯಾಸಕರಾದ ವಸಂತ್‍ಕುಮಾರ, ಅಣ್ಣೋಜಿ ರೆಡ್ಡಿ, ಮಲ್ಲಿಕಾರ್ಜುನ, ಸತೀಶ್ ಪಟೀಲ್, ಪ್ರೀತಿ, ಸಂಧ್ಯಾ, ಜ್ಯೋತಿ, ಹರಾಳು ಬುಳ್ಳಪ್ಪ, ವೀರೇಶ್ ನಾಯಕ, ಬೋಧಕೇತರ ಸಿಬ್ಬಂದಿಗಳಾದ ಶ್ರೀನಿವಾಸ, ಸಂದೇಶ, ಮಹೇಶ ಹಾಗೂ ಕಾಲೇಜ್‍ನ ವಿದ್ಯಾರ್ಥಿಗಳು ಈ ಜಾಥದಲ್ಲಿ ಪಾಲ್ಗೊಂಡಿದ್ದರು.