ಎಡಿಸಿ ಕಾರ್ಯಕ್ಕೆ ಜಿಲ್ಲಾಡಳಿತದ ಸಿಬ್ಬಂದಿ ಪ್ರಶಂಸೆ

ಬಳ್ಳಾರಿ

       ಬಳ್ಳಾರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಅವರು ಬೆಂಗಳೂರಿನ ವಿಕಾಸಸೌಧದ ಸಚಿವಾಲಯಕ್ಕೆ ಉಪಕಾರ್ಯದರ್ಶಿಯಾಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ವತಿಯಿಂದ ಅತ್ಯಂತ ಆತ್ಮೀಯವಾಗಿ ಸನ್ಮಾನಿಸುವ ಮೂಲಕ ಬೀಳ್ಕೊಡಲಾಯಿತು.

      ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಅವರು ಜಿಲ್ಲಾಡಳಿತದ ವತಿಯಿಂದ ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿದರು.

       ಸನ್ಮಾನ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸೋಮಶೇಖರ ಅವರು ನನಗೂ ಬಳ್ಳಾರಿಗೂ ಅತ್ಯಂತ ಅವಿನಾಭಾವ ಸಂಬಂಧವಿದೆ. ಇಲ್ಲಿ ಕಾರ್ಯನಿರ್ವಹಿಸಿದ ಪ್ರತಿಕ್ಷಣವೂ ಅತ್ಯಂತ ಅಮೂಲ್ಯವಾದುದು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಡಳಿತ ಸಿಬ್ಬಂದಿ ಕೆಲಸ ನಿರ್ವಹಣೆಗೆ ತೋರಿದ ಸಹಕಾರ ದೊಡ್ಡದು ಎಂದರು.

       2013ರಲ್ಲಿ ಬಳ್ಳಾರಿ ಉಪವಿಭಾಗದ ಸಹಾಯಕ ಆಯುಕ್ತರಾಗಿ ಮತ್ತು ಇತ್ತೀಚೆಗೆ ಒಂದುವರೆ ವರ್ಷಗಳ ಕಾಲ ಅಪರ ಜಿಲ್ಲಾಧಿಕಾರಿಯಾಗಿ ಸಲ್ಲಿಸಿದ ಸೇವೆ ಅತ್ಯಂತ ಸ್ಮರಣೀಯವಾದುದು. ಅತ್ಯಂತ ಸವಿನೆನಪುಗಳೊಂದಿಗೆ ಇಲ್ಲಿಂದ ತೆರಳುತ್ತಿರುವೆ. ಇಲ್ಲಿಂದ ತೆರಳುತ್ತಿದ್ದರೂ ಈ ಗಣಿ ಜಿಲ್ಲೆಯ ಸಂಬಂಧವಿರುವ ಗಣಿ ಇಲಾಖೆಯ ಉಪಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದು, ಆ ಮೂಲಕವೂ ನಾನು ಬಳ್ಳಾರಿಯಲ್ಲಿಯೇ ಕಾರ್ಯನಿರ್ವಹಿಸುವ ಅನುಭವವಾಗಲಿದೆ ಎಂದರು.

       ಇಡೀ ದೇಶದಾದ್ಯಂತ ಗಮನಸೆಳೆದ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಕರ್ತವ್ಯದಲ್ಲಿ ನಾನು ಭಾಗಿಯಾಗಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.

       ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿ, ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಸೋಮಶೇಖರ ನನ್ನ ಆತ್ಮೀಯರಲ್ಲಿ ಒಬ್ಬರು. ಅವರು ನಮ್ಮ ಜಿಲ್ಲಾಡಳಿತಕ್ಕೆ ಎರಡನೇ ಆಧಾರಸ್ತಂಭವಾಗಿದ್ದರು. ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು.

       ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ತಹಸೀಲ್ದಾರ್ ವಿಶ್ವಜೀತ್‍ಮೆಹತಾ, ಬಳ್ಳಾರಿ ತಹಸೀಲ್ದಾರ್ ನಾಗರಾಜ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ತಹಸೀಲ್ದಾರರು ಮತ್ತು ಜಿಲ್ಲೆಯ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link