ಎಲ್ಲಾ ಸವಾಲಿಗೂ ನಾವು ಸಿದ್ದ : ಸಿಎಂ

ಬೆಂಗಳೂರು:

    ರಾಜ್ಯಾದ್ಯಂತ ಮಳೆ ಉತ್ತಮವಾಗಿ ಸುರಿಯುತ್ತಿದೆ. ಹಲವು ಕಡೆ ಪ್ರಕೃತಿ ವಿಕೋಪಗಳು ವರದಿಯಾಗಿವೆ. ಜುಲೈ 31ರಿಂದ ಮಳೆಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿಂದು ಕಾರ್ಗಿಲ್ ವಿಜಯ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಳೆ ಪ್ರವಾಹ ಪರಿಸ್ಥಿತಿ ಇನ್ನೂ ಕೈಮೀರಿ ಹೋಗಿಲ್ಲ, ಜಲಾಶಯಗಳಿಗೆ ನೀರು ತುಂಬುತ್ತಿರುವುದು ಸಂತೋಷದ ವಿಚಾರ. ರೈತರಿಗೆ ಮತ್ತು ಸರ್ಕಾರಕ್ಕೆ ಇದು ಖುಷಿಯ ಸಂಗತಿ.  

     ಬರುವ ಸೋಮವಾರ ಜುಲೈ 31ರಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡುವೆ.ಅಲ್ಲಿನ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳ ಜೊತೆ ಸಭೆ ನಡೆಸಿ ಆಗಿರುವ ಹಾನಿಗಳು, ಸಂಕಷ್ಟದ ಬಗ್ಗೆ ವಿವರ ಕೇಳುತ್ತೇನೆ. ಈಗ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಿಲ್ಲ.  ರಾಜ್ಯದ ಹಲವೆಡೆ ಮಳೆಯಾಗಿ ಡ್ಯಾಂಗಳು ತುಂಬಿ ಹರಿಯುತ್ತಿವೆ. ಆಲಮಟ್ಟಿ, ಕೆಆರ್​ಎಸ್​, ಕಬಿನಿ, ಹಾರಂಗಿ ಡ್ಯಾಂಗಳಿಗೆ ನೀರು ಬಂದಿದೆ. ರಾಜ್ಯದಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ ಎಂದರು.

    ಸರ್ಕಾರವು ಅಪಾಯ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದೆ. ಸಮಸ್ಯೆಗಳನ್ನು ನಿಭಾಯಿಸಲು ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. ಜನರ ಸುರಕ್ಷತೆಗೆ ಜಿಲ್ಲಾಧಿಕಾರಿಗಳು ದುರ್ಬಲ ಪ್ರದೇಶಗಳಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಎಲ್ಲಾ ನಾಗರಿಕರು ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವಂತೆ ಹೇಳಲಾಗಿದೆ ಎಂದರು.
   ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಈ ಸ್ಥಳಗಳಲ್ಲಿ ಬಿರುಗಾಳಿ ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

 

   ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮದ ಮನೆಯೊಂದರ ಗೋಡೆ ಕುಸಿದಿದ್ದು, ಇಲ್ಲಿದ್ದವರು ಸಂಬಂಧಿಕರ ಮನೆಗೆ ತೆರಳಿದ್ದಾರೆ. ಮಳೆಯ ಅನಾಹುತಕ್ಕೆ ಪುದು ಗ್ರಾಮದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ಕಲ್ಲಡ್ಕದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸರ್ವೀಸ್ ರಸ್ತೆ ಭಾರೀ ಮಳೆಗೆ ಸಂಪೂರ್ಣ ಕೊಚ್ಚಿ ಹೋಗಿದೆ. 

   ಬೀಚ್‌ಗಳು, ನದಿಗಳು ಮತ್ತು ಜಲಪಾತಗಳಿಗೆ ಭೇಟಿ ನೀಡುವ ಮತ್ತು ಈ ಪ್ರದೇಶಗಳಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸದಂತೆ ನಿವಾಸಿಗಳು ಮತ್ತು ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap