ಕಲಬುರಗಿ
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡಲು ಇದೀಗ ಮುಂದಾಗಿದೆ. ಹಾಗಾಗಿ ಡಿಬಿಟಿ ಮೂಲಕ ಹಣ ಹಾಕುವ ಬದಲು ಜನರಿಗೆ ಅಕ್ಕಿ ಕೊಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಡತನಗಿಂತ ಕೆಳಗಿರುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ಮುಂದುವರಿಸುತ್ತೇವೆ. ಅನರ್ಹ ಬಿಪಿಎಲ್ ಕಾರ್ಡ್ಗಳನ್ನ ರದ್ದು ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಹೊಸ ಬಿಪಿಎಲ್ ಕಾರ್ಡ್ಗಾಗಿ ಸಾಕಷ್ಟು ಅರ್ಜಿಗಳು ಬಂದಿವೆ. ಸರ್ವರ್ ಸಮಸ್ಯೆ ಬಗೆಹರಿಸಿ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳ ಪೈಕಿ ಈ ಅನ್ನಭಾಗ್ಯ ಯೋಜನೆ ಕೂಡ ಒಂದು. ಅನ್ನಭಾಗ್ಯ ಯೋಜನೆಯಡಿ ಕರ್ನಾಟಕ ಸರ್ಕಾರದ ಪಾಲಿನ ಉಚಿತ 5 ಕೆಜಿ ಅಕ್ಕಿ ನೀಡುವ ವಿಚಾರಕ್ಕೆ ಕೇಂದ್ರ ಮತ್ತು ರಾಜ್ಯದ ಮಧ್ಯೆ ಜಟಾಪಟಿ ನಡೆಯುತ್ತಿತ್ತು.
ಹಸಿವುಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಜನತೆಗೆ ಪೂರೈಸುವಷ್ಟು ಅಕ್ಕಿ ಪೂರೈಸಲು ಸಾಧ್ಯವಾಗದೇ ಸರ್ಕಾರ ಪೇಚಿಗೆ ಸಿಲುಕಿತ್ತು. ಬಳಿಕ ಅಕ್ಕಿ ಬದಲಾಗಿ ಹಣ ನೀಡಲು ಮುಂದಾಗಿತ್ತು.
ತದನಂತರದ ದಿನಗಳಲ್ಲಿ ಅಕ್ಕಿ ನೀಡುವಂತೆ ಸಾಕಷ್ಟು ಬಾರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರ ಅಕ್ಕಿಯನ್ನು ನೀಡಿರಲಿಲ್ಲ. ಹಾಗಾಗಿ 5ಕೆಜಿ ಅಕ್ಕಿ ಬದಲಾಗಿ ಹಣ ನೀಡುವುದನ್ನು ಮುಂದುವರೆಸುವುದಾಗಿ ಇತ್ತೀಚೆಗೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿತ್ತು. ಬಳಿಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಅಂದ್ರೂ ಖರೀದಿಸುತ್ತಿಲ್ಲ ಎಂದು ಆರೋಪ ಕೂಡ ಇತ್ತೀಚೆಗೆ ಕೇಳಿಬಂದಿತ್ತು.