ಬಳ್ಳಾರಿ:
ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾ.ದೇವದಾಸ್‍ರವರು ಇಂದು ಶ್ರೀಧರಗಡ್ಡೆ ಗ್ರಾಮದ ಯುವಜನರು, ಮಹಿಳೆಯರು, ರೈತರೊಂದಿಗೆ ಪ್ರಸಕ್ತ ರಾಜಕೀಯ ಪರಿಸ್ಥಿಯ ಬಗ್ಗೆ ಚರ್ಚೆ ನಡೆಸಿದರು. ಹಾಗೆಯೇ ದುಡಿಯುವ ಜನರ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ಕಾ.ದೇವದಾಸ್ ಮಾತನಾಡುತ್ತಾ “ಇವತ್ತು ದುಡಿಯುವ ಜನರ, ರೈತರ ಮೇಲೆ ಮೋದಿ ಸರ್ಕಾರ ನಿರಂತರ ಪ್ರಹಾರ ನಡೆಸಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ ಮೋದಿ ಸರ್ಕಾರ, ಕೆಲವು ಲಕ್ಷಗಳಷ್ಟು ಉದ್ಯೋಗ ಮಾತ್ರ ನೀಡಿದೆ. ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಮೋದಿ ಅವಧಿಯಲ್ಲಿ ದಾಖಲಾಗಿದೆ. ನೋಟು ರದ್ಧತಿಯಿಂದ ದೇಶದಲ್ಲಿ 15 ಲಕ್ಷ ಉದ್ಯೋಗಗಳು ನಾಶವಾಗಿವೆ.
ಹಾಗೆಯೇ ನೋಟು ರದ್ಧತಿಯಿಂದ ಕೋಟ್ಯಾಂತರ ರೈತರು ಜನಸಾಮಾನ್ಯರು ದಿವಾಳಿಯಾಗಿದ್ದಾರೆ. ರೈತರ ಬೆಳೆಗೆ ಸರಿಯಾದ ಬೆಂಬಲ ಬೆಲೆ ನೀಡದೆ, ಮೋದಿ ಸರ್ಕಾರ ರೈತರಿಗೆ ಮೋಸ ಮಾಡಿದೆ. ಹಾಗೆಯೇ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಜಾಗತೀಕರಣ ಉದಾರೀಕರಣ ನೀತಿಗಳಿಂದಾಗಿ ರೈತರು ಆತ್ಮ ಹತ್ಯೆಗೆ ಮೊರೆ ಹೋಗುವಂತಾಯಿತು. ಕಳೆದ 25 ವರ್ಷಗಳಲ್ಲಿ ದೇಶದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ-ಕಾಂಗ್ರೆಸ್ ಈ ಎರಡು ಪಕ್ಷಗಳು ಜನದ್ರೋಹಿ ಪಕ್ಷಗಳು. ಈ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕೆಂದು” ಮನವಿ ಮಾಡಿದರು.
ಮುಂದುವರೆಯುತ್ತಾ, “ಶ್ರೀಧರಗಡ್ಡೆ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ, ಇಲ್ಲಿನ ಗ್ರಾಮಸ್ಥರಿಗೆ ಸರಿಯಾಗಿ ಉದ್ಯೋಗ ದೊರೆಯಲು ಹಾಗೂ ಈ ಯೋಜನೆಯ ಇನ್ನಿತರ ಲೋಪಗಳ ವಿರುದ್ಧ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷವು ಹಾಗೂ ನಮ್ಮ ರೈತ ಕೃಷಿ ಕಾರ್ಮಿಕರ ಸಂಘಟನೆಯು ನಿರಂತರ ಹೋರಾಟಗಳನ್ನು ಸಂಘಟಿಸಿದೆ.
ಕುಡಿಯುವ ನೀರಿಗಾಗಿ, ವಿಕಲಚೇತನ ಹಾಗೂ ವೃದ್ಧಾಪ್ಯ ವೇತನ ಸಮಸ್ಯೆಯ ವಿರುದ್ಧ, ಹತ್ತಿಗೆ ಬೆಂಬಲ ಬೆಲೆ ನೀಡಲು, ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಒದಗಿಸಲು ಅನೇಕ ಹೋರಾಟಗಳು ನಡೆದಿವೆ. ಈ ಹೋರಾಟಗಳ ಫಲವಾಗಿ ಸಾಕಷ್ಟು ಬೇಡಿಕೆಗಳು ಈಡೇರಿವೆ. ಹಾಗಾಗಿ ಹೋರಾಟಗಳಿಂದ ಸಾಕಷ್ಟು ಬದಲಾವಣೆ ಕಾಣಲು ಸಾಧ್ಯ. ಈ ಹೋರಾಟಗಳನ್ನು ಮತ್ತಷ್ಟು ಪ್ರಬಲಗೊಳಿಸುತ್ತಲೆ, ಚುನಾವಣೆಯಲ್ಲಿ ದುಡಿಯುವ ಜನರ ನೈಜ ಪ್ರತಿನಿಧಿಯಾದ ಎಸ್.ಯು.ಸಿ.ಐ (ಸಿ) ಪಕ್ಷದ ಅಭ್ಯರ್ಥಿಯನ್ನು ಚುನಾಯಿಸಲು” ಮನವಿ ಮಾಡಿದರು.