ದಾವಣಗೆರೆ:
ಕಬಡ್ಡಿಗೆ ಹೊಸ ಆಟಗಾರರನ್ನು ತಯಾರು ಮಾಡಲು ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಮುಂದಾಗಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಬಿ. ಲೋಕೇಶ್ ಸಲಹೆ ನೀಡಿದರು.
ನಗರದ ಅಪೂರ್ವ ಹೊಟೇಲ್ ಸಭಾಂಗಣದಲ್ಲಿ ಭಾನುವಾರ ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಸ್ತುತ ಕಬಡ್ಡಿಗೆ ಸ್ಥಳೀಯವಾಗಿ ಹೆಚ್ಚು ಮಾನ್ಯತೆ ಇಲ್ಲವಾಗಿದೆ. ಆದ್ದರಿಂದ ಆಟಗಾರರ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ, ಸಂಸ್ಥೆ ಹೊಸ ಆಟಗಾರರನ್ನು ಸೃಷ್ಟಿ ಮಾಡಲು ಪ್ರೌಢಶಾಲೆಗಳತ್ತ ಮುಖ ಮಾಡಬೇಕೆಂದು ಕಿವಿಮಾತು ಹೇಳಿದರು.
ಶಾಲೆಗಳಲ್ಲಿರುವ ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಹೊರ ತಂದಲ್ಲಿ ಈ ಸಂಸ್ಥೆಗೆ ಇನ್ನೂ ಹೆಚ್ಚಿನ ಗೌರವ ದೊರಕಲಿದೆ. ಈ ಹಿನ್ನಲೆಯಲ್ಲಿ ಎಲ್ಲರ ಸಹಕಾರ ಪಡೆಯುವಲ್ಲಿ ಸಂಸ್ಥೆ ಮುಂದಾಗಬೇಕಿದೆ ಎಂದರು.
ಸುಮಾರು ನಾಲ್ಕು ದಶಕಗಳ ಇತಿಹಾಸವುಳ್ಳ ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಯಾವುದೇ ರಾಜಕೀಯ ಪಕ್ಷಗಳ ಓಲೈಕೆಗೆ ಮುಂದಾಗಬಾರದು. ದಾವಣಗೆರೆ ಕಬಡ್ಡಿ ಎಂದರೆ ರಾಜಧಾನಿಯಲ್ಲೂ ಹಿಂದೆ ಹೆಸರುವಾಸಿಯಾಗಿತ್ತು. ಆಗ ಈ ಸಂಸ್ಥೆಗೆ ಪದಾಧಿಕಾರಿ ಆಗುವುದೇ ಪ್ರತಿಷ್ಠೆಯಾಗಿತ್ತು ಎಂದರು.
ಕಬಡ್ಡಿ ತಾಂತ್ರಿಕವಾಗಿ ಮುಂದುರೆದಿರುವ ಕಾಲದಲ್ಲಿ ಮ್ಯಾಟ್‍ನಲ್ಲಿ ಆಟಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ನೆಲದ ಅಂಕಣದಲ್ಲಿ ಆಟವಾಡುತ್ತಿದ್ದಾರೆ. ಆದ್ದರಿಂದ ನಗರದಲ್ಲೂ ಮ್ಯಾಟ್‍ನಿಂದ ನಿರ್ಮಾಣವಾಗಿರುವ ಅಂಕಣ ನಿರ್ಮಿಸುವ ಕೆಲಸ ಆಗಬೇಕು ಎಂದರು.
ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ ಮಾತನಾಡಿ, ಕಬಡ್ಡಿ ಒಂದು ಕ್ರೀಡೆ ಮಾತ್ರವಲ್ಲ. ಮೌಲ್ಯ ತುಂಬುವ ಆಟವೂ ಆಗಿದೆ. ಈ ಕ್ರೀಡೆಯಿಂದ ಹಲವರು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅದಕ್ಕೆ ಮುಖ್ಯಕಾರಣ ಈ ಕ್ರೀಡೆಯಲ್ಲಿ ಕಂಡುಬರುವ ಜಾತ್ಯತೀತ ಮನೋಭಾವ. ಕಬಡ್ಡಿಯನ್ನು ಪ್ರೀತಿಸುವ ವ್ಯಕ್ತಿಯ ಬದುಕನ್ನು ಕ್ರೀಡೆ ರೂಪಿಸಲಿದೆ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಎಂ.ಭೈರಪ್ಪ ಮಾತನಾಡಿ, ಚಿತ್ರದುರ್ಗ-ದಾವಣಗೆರೆ ಅವಿಭಜಿತ ಜಿಲ್ಲೆಯಾಗಿದ್ದ ಸಂದರ್ಭದಲ್ಲೂ ದಾವಣಗೆರೆ ಕಬಡ್ಡಿ ಕ್ರೀಡಾಪಟುಗಳಿಗೆ ಬಹುದೊಡ್ಡ ಬೆಲೆ ಇತ್ತು. ದಾವಣಗೆರೆ ಜಿಲ್ಲೆಯಾದಾಗ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು, ಕ್ರೀಡಾಪಟುಗಳನ್ನು ಬೆಳಸುವಲ್ಲಿ ಈ ಸಂಸ್ಥೆಯ ಶ್ರಮ ಸಾಕಷ್ಟಿದೆ. ಇಂದು ಕಬಡ್ಡಿ ಕ್ರೀಡಾಪಟುಗಳ ಕೊರತೆ ಇದೆ. ಈ ಹಿನ್ನಲೆಯಲ್ಲಿ ಈ ಕ್ರೀಡೆಗೆ ಪುನಶ್ಚೇತನಗೊಳಿಸುವಲ್ಲಿ ಸಂಸ್ಥೆಯಲ್ಲಿ ಎರಡು ಗುಂಪುಗಳು ಬೇಕಾಗಿಲ್ಲ. ಈ ಸಂಸ್ಥೆಗೆ ದುಡಿದ ಎಲ್ಲರನ್ನೂ ಒಗ್ಗೂಡಿಸಿ ಸಂಸ್ಥೆ ಬೆಳಸಿ, ಕಬಡ್ಡಿ ಕ್ರೀಡೆಯ ವೈಭವ ಮತ್ತೆ ಮರಕಳಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಡಿ. ಬಸವರಾಜ್, ಪಿ. ರಾಜಕುಮಾರ್, ಕಬಡ್ಡಿ ಪೋಷಕ ಟಿ. ಶಿವಕುಮಾರ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಎಂ.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಬಿ.ಪರಸಪ್ಪ, ಕ್ರೀಡಾಪಟು ನಾಗರಜ್ ಕಾಡಪ್ಪ, ಸಂಸ್ಥೆಯ ಗೌರವಾಧ್ಯಕ್ಷ ಸೈಯದ್ ನಿಸಾರ್, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
