ಕಸದ ಮುದ್ದೆಯಾಗಿರುವ ಮತದಾರರ ಪಟ್ಟಿ: ಆರೋಪ

  ತುಮಕೂರು:

      ಮೊನ್ನೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿನ ಲೋಪಗಳಿಂದಾಗಿ ಸಾವಿರಾರು ಜನ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾದರು. ಇದೊಂದು ಕಸದ ಮುದ್ದೆಯಾದ ಮತದಾರರ ಪಟ್ಟಿಯಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪಿಸಿದರು.

      ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತರಾತುರಿಯಲ್ಲಿ ಮತದಾರರ ಪಟ್ಟಿ ತಯಾರು ಮಾಡಲಾಗಿತ್ತು. ಅಭ್ಯರ್ಥಿಗಳಿಗೆ ನೀಡಿರುವ ಮತದಾರರ ಪಟ್ಟಿ ಒಂದು ರೀತಿ ಇದ್ದರೆ ಮತದಾನ ಕೇಂದ್ರದ ಅಧಿಕಾರಿಗಳ ಬಳಿ ಮತ್ತೊಂದು ರೀತಿಯ ಪಟ್ಟಿ ಇತ್ತು. ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ಬಳಿ ಇದ್ದ ಪಟ್ಟಿಯಲ್ಲಿ ಇದ್ದ ಹೆಸರುಗಳು ಅಧಿಕಾರಿಗಳ ಬಳಿ ಇದ್ದ ಪಟ್ಟಿಯಲ್ಲಿ ಇರಲಿಲ್ಲ. ಇದಕ್ಕೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದ ಜ್ಯೋತಿಗಣೇಶ್, ಇದಕ್ಕೆ ಕಾರಣರಾಗಿರುವ ಅಧಿಕಾರಿ, ನೌಕರರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುವುದು. ಈ ಬಗ್ಗೆ ಗಂಭೀರ ತನಿಖೆಯಾಗಬೇಕು ಎಂದರು.

      ಬಹಳಷ್ಟು ಕಡೆ ಸತ್ತು ಹೋಗಿರುವ ಮತದಾರರ ಹೆಸರುಗಳು ಪಟ್ಟಿಯಲ್ಲಿವೆ. ಬದುಕಿರುವವರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ನಮ್ಮ ಗಾಂಧಿನಗರ ವಾರ್ಡ್‍ನಲ್ಲಿಯೇ ಎಸ್.ಮಲ್ಲಿಕಾರ್ಜುನಯ್ಯ ಅವರ ಹೆಸರು ಇನ್ನೂ ಇದೆ. ಇದೇ ವಾರ್ಡ್‍ನಲ್ಲಿ ಸೇರ್ಪಡೆಯಾಗಬೇಕಾದವರ ಹೆಸರೇ ಇಲ್ಲ. ತುಮಕೂರಿನ ಹಲವು ವಾರ್ಡ್‍ಗಳಲ್ಲಿ ಇಂತಹ ಪರಿಸ್ಥಿತಿ ಉಂಟಾಗಿದ್ದು, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದ್ದ ಮತದಾರರ ಪಟ್ಟಿ ಈಗ ಬದಲಾವಣೆಯಾಗಿದ್ದು, ಮತದಾರರು ಪರದಾಡುವಂತಾಯಿತು ಎಂದರು.

      ಮತದಾರರ ಪಟ್ಟಿಯನ್ನು ಅಧಿಕಾರಿಗಳು ತುಂಬಾ ವ್ಯವಸ್ಥಿತವಾಗಿ ಸಿದ್ಧತೆ ಮಾಡಬೇಕು. ಒಂದು ಬಡಾವಣೆಯ ಬೀದಿಯಲ್ಲಿರುವ ಮನೆಗಳ ನಂಬರ್ ಪ್ರಕಾರ ಲಿಸ್ಟ್ ಮಾಡಿ ಮತದಾರರ ಪಟ್ಟಿಯಲ್ಲಿ ಅದರ ಕ್ರಮಸಂಖ್ಯೆಗಳ ಪ್ರಕಾರವೇ ಹೆಸರು ಮುದ್ರಣವಾಗಬೇಕು. ತುಮಕೂರು ಈಗ ಸ್ಮಾರ್ಟ್‍ಸಿಟಿಯಾಗುತ್ತಿದ್ದು, ಮತದಾರರ ಪಟ್ಟಿಯೂ ಸ್ಮಾರ್ಟ್ ಆಗಬೇಕು ಎಂದರು.

      ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಇನ್ನೂ 7 ವಾರ್ಡ್‍ಗಳಲ್ಲಿ ಕಡಿಮೆ ಮತಗಳ ಅಂತರದಿಂದ ಸೋತಿದ್ದಾರೆ. ಸೋತವರ ಜೊತೆ ನಾವಿದ್ದೇವೆ. ಅವರ್ಯಾರೂ ಧೈರ್ಯಗೆಡುವ ಅಗತ್ಯವಿಲ್ಲ ಎಂದರು.

      ಪತ್ರಿಕಾಗೋಷ್ಠಿಯಲ್ಲಿ ಮಾಜಿ ವಿ.ಪ. ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಹಿರಿಯ ಮುಖಂಡರಾದ ದೊಡ್ಡಮನೆ ಗೋಪಾಲಗೌಡ, ಸಿ.ಎನ್.ರಮೇಶ್, ರವಿ ಹೆಬ್ಬಾಕ, ಬಾವಿಕಟ್ಟೆ ನಾಗಣ್ಣ, ರವೀಶಯ್ಯ, ಕೊಪ್ಪಳ್ ನಾಗರಾಜ್, ರುದ್ರೇಶ್, ಟಿ.ಎಚ್.ಹನುಮಂತರಾಜು, ಸಂದೀಪ್ ಗೌಡ, ಮಲ್ಲಿಕಾರ್ಜುನ, ನಂದೀಶ್, ಶಂಭುಲಿಂಗಸ್ವಾಮಿ ಹಾಗೂ ಪಾಲಿಕೆಗೆ ಆಯ್ಕೆಯಾಗಿರುವ ನೂತನ ಬಿಜೆಪಿ ಸದಸ್ಯರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap