ಕಸಾಪ ಎಲ್ಲಾ ಸಮ್ಮೇಳನ ರದ್ದುಪಡಿಸಿ ಸಂತ್ರಸ್ತರಿಗೆ ನೆರವಾಗಿ

ತುಮಕೂರು:

              ಮುಂಬರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರದ್ದುಪಡಿಸಿ ನೆರೆ ಸಂತ್ರಸ್ತರ ನಿಧಿಗೆ ಹಣ ವರ್ಗಾಯಿಸುವಂತೆ ತಾ.ಕಸಾಪ ಮಾಜಿ ಅಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ ಒತ್ತಾಯಿಸಿದ್ದಾರೆ.
              ಗುರುವಾರ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ರಾಜ್ಯವು ಬರಗಾಲ ಮತ್ತು ಜಲಪ್ರಳಯದಂತಹ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಜನರು ಸಂಕಷ್ಟದಲ್ಲಿ ಸಿಲುಕಿರುವುದರಿಂದ 2018-19 ಸಾಲಿಗೆ ಉದ್ದೇಶಿಸಿರುವ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಸಾಪದ ಎಲ್ಲಾ ಸಮ್ಮೇಳವನ್ನು ರದ್ದು ಪಡಿಸಿ ನೆರೆ ಸಂತ್ರಸ್ತರ ನಿಧಿಗೆ ಹಣ ವರ್ಗಾಯಿಸುವಂತೆ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
               ಕೊಡಗು, ಕರಾವಳಿ ಪ್ರದೇಶಗಳಲ್ಲಿ ಜನರು ವಾಸದ ಮನೆ ಜತೆಗೆ ಜೀವನೋಪಾಯಕ್ಕೆ ಇದ್ದ ತೋಟ, ತುಡಿಕೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅನೇಕ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಅವರಿಗೆ ನೆರವಾಗುವುದು ಕನ್ನಡ ತಾಯಿಗೆ ಸೇವೆ ಸಲ್ಲಿಸಿದಂತೆ, ಈ ಹೊತ್ತಿನಲ್ಲಿ ಕಸಾಪ ಸಮ್ಮೇಳನಗಳನ್ನು ನಡೆಸುವುದು ಸರ್ವತಾಸಾಧುವಲ್ಲ, ಅವರಿಗೆ ನೆರವಾಗುವುದು ಸಮ್ಮೇಳನಕ್ಕಿಂತ ಮಿಗಿಲಾದುದ್ದು ಎಂದರು.
               ಶತಮಾನದಿಂದ ಕಸಾಪ ತನ್ನ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿದೆ. ಮಹಾರಾಜರು ಒಳಗೊಂಡಂತೆ ಅನೇಕ ಚಿಂತಕರು, ವಿದ್ವಾಂಸರು, ಸಾಹಿತಿಗಳು, ಲೇಖಕರು ಇದೂವರೆಗೂ ಕಸಾಪ ಅಧ್ಯಕ್ಷರಾಗಿ ಕಸಾಪ ನಿಬಂಧನೆಗಳಿಗೆ ಅನುಗುಣವಾಗಿ ಕನ್ನಡ ಸಾಹಿತ್ಯ ಸೇವೆ ಮಾಡುತ್ತಾ ಬಂದಿದೆ. ಗೌರವಯುತ ಜವಾಬ್ದಾರಿಯನ್ನು ಅಧಿಕಾರವೆಂದು ತಿಳಿದು 3 ವರ್ಷಕ್ಕೆ ಇದ್ದ ಅವಧಿಯನ್ನು 5 ವರ್ಷಕ್ಕೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕಾರಿ ಸಮಿತಿಯನ್ನೇ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯ ಸಹಕಾರಿ ಸಂಘಗಳ ನೊಂದಣಿ ಸಂಸ್ಥೆ (ರಿಜಿಸ್ಟ್ರಾರ್)ಯು ಪರಿಷತ್ತಿನ ಅಧ್ಯಕ್ಷರ ಅವಧಿ ಹೆಚ್ಚಿಸಬೇಕೆಂಬ ಪ್ರಸ್ತಾವನೆಯನ್ನು ಏಕಾಏಕಿ ತಿರಸ್ಕರಿಸಿ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದೆ. ಆದೇಶಕ್ಕೆ ಬೆಲೆಕೊಡದೆ ಪರಿಷತ್ತಿನ ರಾಜ್ಯಾಧ್ಯಕ್ಷರು ಹೈಕೋರ್ಟ್‍ಗೆ ಮೇಲ್ಮನವಿಸಲ್ಲಿಸಲು ಚಿಂತನೆ ನಡೆಸಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಸ್ವಾರ್ಥಕ್ಕಾಗಿ ಪರಿಷತ್ತನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಅಧ್ಯಕ್ಷರ ಈ ಧೋರಣೆ ಖಂಡನೀಯ.
                ಮೂರು ಲಕ್ಷದ ಹನ್ನೆರಡು ಸಾವಿರ ಕಸಾಪ ಸದಸ್ಯರನ್ನು ಮತ್ತು ಆರು ಕೋಟಿ ಕನ್ನಡಿಗರನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಮಾಡಿರುವುದು ಸರಿಯಲ್ಲ. ಇಷ್ಟಕ್ಕೂ ಡಾ.ಮನುಬಳಿಗಾರ್ ಅವರನ್ನು ಕಸಾಪ ಸದಸ್ಯರು ಆಯ್ಕೆ ಮಾಡಿರುವುದು 3 ವರ್ಷದ ಅವಧಿಗೆ ಮಾತ್ರ. ಅಧ್ಯಕ್ಷರ ಅವಧಿ ಮಾರ್ಚ್ 2019ಕ್ಕೆ ಕೊನೆಗೊಳ್ಳುವುದರಿಂದ ಪರಿಷತ್ತಿನ ನಿಯಮಾನುಸಾರ 3 ತಿಂಗಳು ಮುಂಚಿತವಾಗಿ ಡಿಸೆಂಬರ್ 2018ಕ್ಕೆ ಆಡಳಿತಾಧಿಕಾರಿ ನೇಮಿಸಿ ಕಸಾಪ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಮಾರ್ಚ್ 2019ಕ್ಕೆ ಚುನಾವಣೆ ನಡೆಸಿ ರಾಜ್ಯ ಮತ್ತು ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಜಿಲ್ಲಾ ಮಾಜಿ ಕಸಾಪ ಅಧ್ಯಕ್ಷರಾದ ಡಾ.ಕವಿತಾಕೃಷ್ಣ, ಡಾ.ಸೋಮುಭಾಸ್ಕರಚಾರ್, ಸಾಹಿತಿ ಕಮಲಾಬಡ್ಡಿಹಳ್ಳಿ ಇತರರು ಇದ್ದರು.

Recent Articles

spot_img

Related Stories

Share via
Copy link