ಶಿರಾ:
ಸ್ವಾತಂತ್ರ ಚಳುವಳಿಯಲ್ಲಿ ಕಂಡ ಕನಸು ನಮ್ಮ ಸಂವಿಧಾನದ ಮೂಲಕ ಗಣರಾಜ್ಯದ ಅಸ್ತಿತ್ವದೊಂದಿಗೆ ಸಾಕಾರ ಪಡೆಯಿತು. ಡಾ. ಬಿ. ಆರ್. ಅಂಬೇಡ್ಕರ್ ಅದನ್ನು ಸಾದ್ಯವಾಗಿಸಿದರು. ಅವರ ದೃಷ್ಟಿಕೋನ ಮತ್ತು ಜೀವನಾನುಭವ ಸಂವಿಧಾನದಲ್ಲಿ ಮೇಳೈಸಿದೆ ಎಂದು ನಿವೃತ್ತ ಆಂಗ್ಲ ಭಾಷಾ ಅಧ್ಯಾಪಕ ಪ್ರೊ. ಮಹಲಿಂಗಯ್ಯ ಅಭಿಪ್ರಾಯಿಸಿದರು.
ಅವರು ಸಿರಾ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಸಂವಿಧಾನದ ಆಶಯ ಒಳಗೊಳ್ಳುವಿಕೆಯ ವಿವೇಕ” ಎಂಬ ವಸ್ತುವಿಷಯ ಆಧರಿಸಿ ಹಮ್ಮಿಕೊಂಡಿದ್ದ 70 ನೇ ಗಣರಾಜ್ಯೋತ್ಸವ ಸಮಾರಂಭದ ಅತಿಥಿಯಾಗಿ ಮಾತನಾಡಿದರು. ಖ್ಯಾತ ಕಾನೂನು ತಜ್ಞ ನಾನಿ ಪಾಲ್ಕಿವಾಲರ ಕೃತಿಯ ಮೂಲಕ ಭಾರತದ ಸಂವಿಧಾನವನ್ನು ಅರ್ಥೈಸಿ ಅದು ಎದುರುಸುತ್ತಿರುವ ಬಿಕ್ಕಟ್ಟನ್ನು ವಿಶ್ಲೇಷಿಸಿದರು.
ವಾಣಿಜ್ಯಶಾಸ್ತ್ರ ಅಧ್ಯಾಪಕ ಡಾ.ಎಸ್. ಟಿ.ರಂಗಪ್ಪ ಮಾತನಾಡಿ ಸಾಮಾಜಿಕ, ವೈಯಕ್ತಿಕ ಮತ್ತು ರಾಜಕೀಯ ನೈತಿಕತೆಗಳು ಅಂಬೇಡ್ಕರರು ರೂಪಿಸಿದ ಸಂವಿಧಾನ ಒಳಗೊಂಡಿರುವ ಸಂಗತಿಗಳ ಕುರಿತು ಉದಾಹರಣೆಗಳೊಂದಿಗೆ ಮಾತನಾಡಿದರು. ಡಾ. ನಾಗಭೂಷಣಯ್ಯ ಬಿ. ಎನ್. ಗಣರಾಜ್ಯದ ಪರಿಕಲ್ಪನೆ ಕುರಿತು ಮಾತನಾಡಿದರು.
ಸಂವಿಧಾನದ ಆಶಯಗಳಾದ ಸಮಾಜವಾದ ಮತ್ತು ಜಾತ್ಯಾತೀತವಾದಗಳು ವರ್ತಮಾನದ ಭಾರತದಲ್ಲಿ ಗೇಲಿಗೆ ಒಳಗಾಗಿರುವ ಹಾಗೂ ಹಿಂಸೆ ಮತ್ತು ಅಸಹಿಷ್ಣತೆ ನಮ್ಮ ಆಲೋಚನೆ ಮತ್ತು ಕ್ರಿಯೆಯನ್ನು ಪ್ರಭಾವಿಸುತ್ತಿರುವ ಅಪಾಯವನ್ನು ಸಂವಿಧಾನದಲ್ಲಿ ಮಿಳಿತವಾಗಿರುವ ರಾಷ್ಟ್ರೀಯ ಪರಿಕಲ್ಪನೆ ಇಂದು ಹೇಗೆ ರಾಜಕೀಯಕರಣಗೊಂಡು ತಿರುಚಲ್ಪಟ್ಟಿದೆ ಎಂದು ಅಧ್ಯಕ್ಷವಹಿಸಿದ್ದ ಪ್ರಾಂಶುಪಾಲ ಡಾ. ತಿಮ್ಮನಹಳ್ಳಿ ವೇಣುಗೋಪಾಲ್ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನಿಪುಣ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಜ್ಯ ಪುರಸ್ಕಾರ ಪರೀಕ್ಷೆಗೆ ಅರ್ಹತೆ ಪಡೆದ ಭಾರತ್ ಸ್ಕೌಟ್ಸ್ & ಗೈಡ್ಸ್ 20 ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರ ವಿತರಿಸಲಾಯಿತು. ಎನ್.ಸಿ.ಸಿ, ಎನ್.ಎಸ್.ಎಸ್, ಸ್ವಯಂಸೇವಕರು, ಅಧ್ಯಾಪಕರು, ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಶಿವಣ್ಣ ಆರ್. ಸ್ವಾಗತಿಸಿ ಮತ್ತು ಪ್ರೊ. ಹಸೀಬಾ ಖಾನಂ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
