ಕೋಲ್ಕತ್ತಾ:
2024 ರ ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಸೌಹಾರ್ದಯುತ ಸೀಟು ಹಂಚಿಕೆ ಸಾಧ್ಯವಿಲ್ಲ ಎಂದು ಗ್ರಹಿಸಿರುವ ತೃಣಮೂಲ ಕಾಂಗ್ರೆಸ್(ಟಿಎಂಸಿ), ತನ್ನನ್ನು ಅಥವಾ ಸಿಪಿಐ(ಎಂ) ನೇತೃತ್ವದ ಎಡರಂಗವನ್ನು ಮಿತ್ರ ಪಕ್ಷವಾಗಿ ಆಯ್ಕೆ ಮಾಡುವಂತೆ ದೇಶದ ಹಳೆಯ ಪಕ್ಷಕ್ಕೆ ಸಂದೇಶ ಕಳುಹಿಸಲು ನಿರ್ಧರಿಸಿದೆ ಎಂದು ಪಕ್ಷದ ಆಂತರಿಕ ಮೂಲಗಳು ಶನಿವಾರ ತಿಳಿಸಿವೆ.
ಅವರ ಪ್ರಕಾರ, ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ತಮ್ಮ ಬಗ್ಗೆ ಮೃದುವಾಗಿದ್ದರೂ, ಬಂಗಾಳ ಕಾಂಗ್ರೆಸ್ ಘಟಕ, ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ಟಾರ್ಗೆಟ್ ಮಾಡುತ್ತಿರುವುದರಿಂದ ಟಿಎಂಸಿ ಉನ್ನತ ನಾಯಕತ್ವ ಅಸಮಾಧಾನಗೊಂಡಿದೆ.
“ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಸೇರಿದಂತೆ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ, ಇಡಿ ವಿಚಾರಣೆ ಎದುರಿಸುತ್ತಿರುವ ಅಭಿಷೇಕ್ ಬ್ಯಾನರ್ಜಿ ಅವರ ಬೆಂಬಲಕ್ಕೆ ನಿಂತಿದೆ. ಆದರೆ ಇಲ್ಲಿಯ ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ವಿಶೇಷವಾಗಿ ಅವರನ್ನು ಸಿಪಿಐ(ಎಂ) ನಾಯಕರಂತೆ ಟಾರ್ಗೆಟ್ ಮಾಡುತ್ತಿದ್ದಾರೆ ”ಎಂದು ಹೆಸರು ಹೇಳಲು ಇಚ್ಚಿಸದ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯ ಸಚಿವ ಸಂಪುಟದ ಸದಸ್ಯರೊಬ್ಬರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅವರು(ಕಾಂಗ್ರೆಸ್) ನಮ್ಮೊಂದಿಗೆ ಹೋಗಬೇಕೋ ಅಥವಾ ಸಿಪಿಐ ಜೊತೆ ಹೋಗಬೇಕೋ ಎಂಬುದನ್ನು ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ನಿರ್ಧರಿಸುತ್ತದೆ ಎಂದು ಹಿರಿಯ ನಾಯಕ ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕತ್ವ ಸಹ ಸೀಟು ಹಂಚಿಕೆ ಸೂತ್ರದ ಬಗ್ಗೆ ಯಾವುದೇ ಕಾರಣಕ್ಕೂ ಎಡಪಕ್ಷಗಳೊಂದಿಗೆ ಯಾವುದೇ ಚರ್ಚೆಗೆ ಹೋಗದಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷ, ಒಟ್ಟು 42 ಲೋಕಸಭಾ ಸ್ಥಾನಗಳ ಪೈಕಿ ತಾನು ಬಿಟ್ಟುಕೊಡಲಿರುವ ಸೀಟುಗಳ ಸಂಖ್ಯೆಯನ್ನು ಕಾಂಗ್ರೆಸ್ ನಾಯಕತ್ವಕ್ಕೆ ತಿಳಿಸುತ್ತದೆ ಮತ್ತು ನಂತರ ಅವರು ಉಳಿದಿರುವ ಸ್ಥಾನಗಳನ್ನು ಹೇಗೆ ವಿಭಜಿಸುತ್ತಾರೆ ಎಂಬುದನ್ನು ಕಾಂಗ್ರೆಸ್ ನಿರ್ಧರಿಸುತ್ತದೆ ಎಂದಿದ್ದಾರೆ.








