ಚಿತ್ರದುರ್ಗ:
ನಗರಸಭೆ ಚುನಾವಣೆಯಲ್ಲಿ ನಿಷ್ಟಾವಂತ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸಿ ಶಿಫಾರಸ್ಸು ಹಾಗೂ ಹಣದ ಪ್ರಭಾವಕ್ಕೆ ಒಳಗಾಗಿದ್ದೆ ಕಾಂಗ್ರೆಸ್ ಹೀನಾಯವಾಗಿ ಸೋಲಲು ಕಾರಣ ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ.ಹನೀಫ್ ನೇರವಾಗಿ ಆಪಾದಿಸಿದರು.
ವೇದಿಕೆಯ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಿರುವ ಮುಸ್ಲಿಂರನ್ನು ಪಕ್ಷ ಮೊದಲಿನಿಂದಲೂ ಕಡೆಗಣಿಸುತ್ತಲೇ ಬರುತ್ತಿದೆ. ಜಿಲ್ಲೆಯಲ್ಲಿ 2.75 ಲಕ್ಷ ಜನಸಂಖ್ಯೆಯಿರುವ ಮುಸ್ಲಿಂರಿಗೆ ಯವುದಾದರೂ ಅಧಿಕಾರ ನೀಡಬೇಕು ಇಲ್ಲವಾದಲ್ಲಿ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುತ್ತೇವೆಂದು ಖಡಾ ಖಂಡಿತವಾಗಿ ನಾಯಕರುಗಳನ್ನು ಎಚ್ಚರಿಸಿದರು.
ವಿಧಾನಸಭೆ ಹಾಗೂ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ಮುಖಂಡರುಗಳು ಕಾರಣವೇ ಹೊರತು ಕಾರ್ಯಕರ್ತರುಗಳಲ್ಲ. ಜಿಲ್ಲಾ ಕಾಂಗ್ರೆಸ್‍ನಲ್ಲಿ ಮೂರುನೂರು ಉಪಾಧ್ಯಕ್ಷರು, ನೂರೈವತ್ತು ಕಾರ್ಯದರ್ಶಿಗಳನ್ನು ಬೇಕಾಬಿಟ್ಟಿಯಾಗಿ ನೇಮಕ ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಜಿಲ್ಲೆಗೆ ಉಸ್ತುವಾರಿ ಮಂತ್ರಿಗಳಾಗಿ ಬರುವವರು ಕಾಂಗ್ರೆಸ್ ಪಕ್ಷವನ್ನು ಸೋಲಿಸಲಿಕ್ಕೆಂದೆ ಸಿದ್ದವಾಗಿ ಬಂದಂತೆ ಕಾಣುತ್ತದೆ. ಪಕ್ಷ ಬಲಪಡಿಸುವ ಇಚ್ಚೆ ಯಾರಿಗೂ ಇಲ್ಲ. ಚಿತ್ರದುರ್ಗ ವಿಧಾನಸಭೆ ಚುನಾವಣೆಯಲ್ಲಿ ನೂರುಲ್ಲಾ ಷರೀಫ್, ತಾಜ್‍ಪೀರ್ ಇವರುಗಳಿಗೆ ಟಿಕೇಟ್ ನೀಡಿದ್ದನ್ನು ಬಿಟ್ಟರೆ ಕಳೆದ 21 ವರ್ಷಗಳಿಂದ ಯಾವ ಮುಸ್ಲಿಂಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡಿಲ್ಲ. ರಾಜ್ಯದಲ್ಲಿ ಆರು ಎಂ.ಎಲ್.ಸಿ.ಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಅವಕಾಶವಿದೆ.
ಜಯಮ್ಮ ಬಾಲರಾಜ್‍ರವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿದಂತೆ ಒಬ್ಬರು ಮುಸ್ಲಿಂರನ್ನು ಎಂ.ಎಲ್.ಸಿ.ಯಾಗಿ ನೇಮಕ ಮಾಡಬೇಕು. ಇಲ್ಲವೇ ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಜನಾಂಗಕ್ಕೆ ಕೊಡಬೇಕು. ಇಲ್ಲವಾದಲ್ಲಿ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಎಂದು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪ್ರತಿಯೊಬ್ಬ ಮುಸ್ಲಿಂರನ್ನು ಜಾಗೃತಿಗೊಳಿಸುವುದಾಗಿ ಕಾಂಗ್ರೆಸ್ ನಾಯಕರುಗಳಿಗೆ ಖಡಕ್ ಸಂದೇಶ ರವಾನಿಸಿದರು.
2013 ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮುಸ್ಲಿಂರ ಮತಗಳಿಂದ ಗೆದ್ದಿದ್ದೇನೆ ಎಂಬುದನ್ನು ಮರೆತಿರುವ ಸಂಸದ ಬಿ.ಎನ್.ಚಂದ್ರಪ್ಪ ಒಮ್ಮೆಯೂ ಮುಸ್ಲಿಂರ ಕೇರಿಗೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿಲ್ಲ.ಇದೇ ರೀತಿ ಉದಾಸೀನ ಮಾಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸುತ್ತೇವೆ. ಈಗಲಾದರೂ ನಾಯಕರುಗಳು ಎಚ್ಚೆತ್ತುಕೊಂಡು ಮುಸ್ಲಿಂ ಜನಾಂಗಕ್ಕೆ ಅಧಿಕಾರ ಕೊಡಲಿ ಎಂದು ಆಗ್ರಹಿಸಿದರು.
ನಗರಸಭೆ ಚುನಾವಣೆಯಲ್ಲಿ ಪಕ್ಷದಿಂದ ಟಿಕೇಟ್ ಸಿಗಲಿಲ್ಲವೆಂದು ನೊಂದು ಬಂಡಾಯವಾಗಿ ಸ್ಪರ್ಧಿಸಿರುವವರನ್ನು ಗೆಲ್ಲಿಸಿಕೊಂಡಿದ್ದೇವೆಯೇ ವಿನಃ ಪಕ್ಷೇತರರನ್ನಲ್ಲ ಎಂಬುದನ್ನು ಮೊದಲು ಮುಖಂಡರುಗಳು ಅರ್ಥಮಾಡಿಕೊಳ್ಳಲಿ . ಕಾಂಗ್ರೆಸ್ ವಿರುದ್ದ ಕೆಲಸ ಮಾಡಿರುವವರನ್ನು ಪಕ್ಷದಿಂದ ಕಿತ್ತುಹಾಕಿ ಎಂದು ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವರು ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದಿನ ಎಂ.ಪಿ.ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ದವಾಗಿಯೇ ಕೆಲಸ ಮಾಡುತ್ತೇವೆ ಎಂದು ಅಪವಾದಕ್ಕೆ ಎಂ.ಹನೀಫ್ ತಿರುಗೇಟು ನೀಡಿದರು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹನುಮಲಿ ಷಣ್ಮುಖಪ್ಪನವರು ಸೋತಿದ್ದು, ಮುಖಂಡರುಗಳ ನಿರ್ಲಕ್ಷೆಯಿಂದಲೇ ಹೊರತು ಕಾರ್ಯಕರ್ತರಿಂದಲ್ಲ.
ನಿಷ್ಟಾವಂತ ಕಾರ್ಯಕರ್ತರು ಹಾಗೂ ಮುಸ್ಲಿಂರು ಮತಗಳನ್ನು ನೀಡಿದ್ದಕ್ಕೆ ಐವತ್ತು ಸಾವಿರಕ್ಕೂ ಹೆಚ್ಚು ಮತಗಳು ಸಿಕ್ಕಿವೆ. ಕೆಲವು ಕಡೆ ಕಾಂಗ್ರೆಸ್ ಗೆದ್ದಿರುವುದು ಸ್ವಂತ ಬಲದಿಂದಲೇ ವಿನಃ ಕಾಂಗ್ರೆಸ್‍ನಿಂದಲ್ಲ. ಈಗಲಾದರೂ ಮುಸ್ಲಿಂರಿಗೆ ಅಧಿಕಾರ ನೀಡಿ ಸಾಮಾಜಿಕ ನ್ಯಾಯ ಒದಗಿಸಿ. ನಗರಸಭೆ ಚುನಾವಣೆಯಲ್ಲಿ ಬಿ.ಫಾರಂಗಳು ಮಾರಾಟವಾಗಿವೆ. ಅದಕ್ಕಾಗಿ ಡಿ.ಸಿ.ಸಿ.ಅಧ್ಯಕ್ಷರನ್ನು ಬದಲಾಯಿಸಿ ಎಂದು ವರಿಷ್ಟರುಗಳನ್ನು ಒತ್ತಾಯಿಸಿದರು.
ಹಿಂದೂ ಮಹಾಗಣಪತಿ ಹಬ್ಬದ ಮೆರವಣಿಗೆಗೆ ನಮ್ಮ ವೇದಿಕೆಯ ಸಂಪೂರ್ಣ ಬೆಂಬಲವಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಮೆರವಣಿಗೆ ಶಾಂತಿಯಿಂದ ನಡೆಯಲು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಇಮ್ತಿಯಾಜ್ ಗುಡ್‍ಲಕ್, ರಹಮತ್‍ವುಲ್ಲಾ, ಸಂಘಟನಾ ಕಾರ್ಯದರ್ಶಿ ಷಾಷವಲಿ, ಮಹಮದ್ ಶಫಿವುಲ್ಲಾ, ಪ್ರಧಾನ ಕಾರ್ಯದರ್ಶಿ ಹಸ್ನತ್‍ವುಲ್ಲಾ, ಅಲ್ಲಾವುದ್ದೀನ್, ಮುಜಾಹಿದ್, ಅಫ್ರೋಜ್, ಫಾರುಕ್, ವೇದಿಕೆಯ ಜಿಲ್ಲಾ ಮಹಿಳಾಧ್ಯಕ್ಷೆ ನಜ್ಮತಾಜ್, ಉಪಾಧ್ಯಕ್ಷೆ ಶಮಖಾನಂ, ಮಹಮದ್‍ಷರೀಫ್, ಹೈದರಾಲಿ, ಇಮ್ತಿಯಾಜ್ ಸೇರಿದಂತೆ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ