ಹಾನಗಲ್ಲ :
ಹಾನಗಲ್ಲ ಪುರಸಭೆ ಕಾಂಗ್ರೇಸ್ಸಿಗೆ ಅಭೂತಪೂರ್ವ ಜಯ ನೀಡಿದ್ದು ಒಂದಾದರೆ ಬಿಜೆಪಿ ಸೋಲಿನ ಕಹಿ ಅನುಭವಿಸಿದೆ. ಜೆಡಿಎಸ್ ಹಾಗೂ ಪಕ್ಷೇತರರು ಖಾತೆ ತೆರೆಯಲೇ ಇಲ್ಲ. ಇದು ಹಾನಗಲ್ಲ ಪುರಸಭೆಯ ಫಲಿತಾಂಶ.
ಹಾನಗಲ್ಲ ಪುರಸಭೆ ಹತ್ತು ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿತ್ತು. ಈ ಭಾರಿ ಬಿಜೆಪಿ ಕಾಂಗ್ರೇಸ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದ್ದು ಮಾತ್ರವಲ್ಲ ಇದು ಬಿಜೆಪಿ-ಕಾಂಗ್ರೇಸ್ಸಿಗೆ ಪ್ರತಿಷ್ಠೆಯ ಚುನಾವಣೆಯಾಗಿತ್ತು. ಹಾಲಿ ಶಾಸಕ ಸಿ.ಎಂ.ಉದಾಸಿ ಗೆಲುವಿನ ಭರವಸೆಯಲ್ಲಿದ್ದರು. ಹಾನಗಲ್ಲ ತಾಲೂಕಿನಲ್ಲಿ ಚುನಾವಣೆ ಹೊಸ ವರಸೆ ಆರಂಭಿಸಿರುವ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರು ಮಾಜಿ ಸಚಿವ ಮನೋಹರ ತಹಶೀಲ್ದಾರ ಒಳಗೊಂಡಂತೆ ಕಾಂಗ್ರೇಸ್ ನಾಯಕರೊಡಗೂಡಿ ಈ ಚುನಾವಣೆ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆಯಲು ಪಣ ತೊಟ್ಟಂತಿತ್ತು. ಈಗ ಕಾಂಗ್ರೇಸ್ ಗೆಲುವಿನ ನಗೆ ಬೀರಿದೆ. ಬಿಜೆಪಿ ಸೋಲಿನ ಪರಾಮರ್ಶೆ ನಡೆಸಿದೆ. ಜೆಡಿಎಸ್ ಹಲವು ವರ್ಷಗಳಿಂದ ಸ್ಪರ್ಧಿಸುತ್ತಿದ್ದರೂ ಗೆಲುವು ಮಾತ್ರ ಗಗನ ಕುಸುಮವಾಗಿದೆ. ಪಕ್ಷೇತರರಿಗೆ ಇಲ್ಲಿನ ಮತದಾರ ಬೆಂಬಲಿಸಲಿಲ್ಲ.
ಹಾನಗಲ್ಲ ಪಟ್ಟಣದ 23 ವಾರ್ಡುಗಳಲ್ಲಿ 19 ಸ್ಥಾನಗಳು ಕಾಂಗ್ರೇಸ್ ಪಾಲಾದರೆ, ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಸಮಾಧಾನಪಟ್ಟುಕೊಂಡಿದೆ. ಕಾಂಗ್ರೇಸ್ಸಿನಿಂದ 1 ನೇ ವಾರ್ಡಿನ ನಾಸೀರಾ ಬಡಗಿ, 2 ನೇ ವಾರ್ಡಿನ ಖುರ್ಷಿದ ಅಹ್ಮದ ಹುಲ್ಲತ್ತಿ, 3 ನೇ ವಾರ್ಡಿನ ವೀಣಾ ರಾಜೇಶ ಗುಡಿ, 5 ನೇ ವಾರ್ಡಿನ ಸುನೀತಾ ಭದ್ರಾವತಿ, 6 ನೇ ವಾರ್ಡಿನ ಪ್ರಕಾಶ ತಳವಾರ, 8 ನೇ ವಾರ್ಡಿನ ಮಹೇಶ ಪವಾಡಿ, 9 ನೇ ವಾರ್ಡಿನ ರಶೀದಾಭಿ ನಾಯ್ಕನವರ, 10 ನೇ ವಾರ್ಡಿನ ವಿರುಪಾಖ್ಷಪ್ಪ ಕಡಬಗೇರಿ, 11 ನೇ ವಾರ್ಡಿನ ಗಂಗುಬಾಯಿ ನಿಂಗೋಜಿ, 13 ನೇ ವಾರ್ಡಿನ ಅನಂತವಿಕಾಸ ನಿಂಗೋಜಿ, 14 ನೇ ವಾರ್ಡಿನ ಶೋಭಾ ಹೊಂಬಳಿ, 15 ನೇ ವಾರ್ಡಿನ ರವಿ ಹನುಮನಕೊಪ್ಪ, 16 ನೇ ವಾರ್ಡಿನ ಸೈಯದ ಅಹ್ಮದಭಾಷಾ ಪೀರಜಾದೆ, 17 ನೇ ವಾರ್ಡಿನ ಮಮತಾ ಆರೆಗೊಪ್ಪ, 18 ನೇ ವಾರ್ಡಿನ ಪರಶುರಾಮ ಖಂಡುನವರ, 19 ನೇ ವಾರ್ಡಿನ ನಜೀರಸಹ್ಮದ ಸವಣೂರ, 21 ನೇ ವಾರ್ಡಿನ ನಾಗಪ್ಪ ಸವದತ್ತಿ, 22 ನೇ ವಾರ್ಡಿನ ರಾಧಿಕಾ ದೇಶಪಾಂಡೆ, 23 ನೇ ವಾರ್ಡಿನ ಶಮಶಿಯಾಬಾನು ಬಾಳೂರ ಆಯ್ಕೆಯಾಗಿದ್ದಾರೆ.
ಬಿಜೆಪಿಯಿಂದ 4 ನೇ ವಾರ್ಡಿನ ಸುನಕವ್ವ ಚಿಕ್ಕಣ್ಣನವರ, 7 ನೇ ವಾರ್ಡಿನ ಜಮೀರಹ್ಮದ ದರ್ಗಾ, 12 ನೇ ವಾರ್ಡಿನ ಶೋಭಾ ಉಗ್ರಣ್ಣನವರ, 20 ನೇ ವಾರ್ಡಿನ ಹಸೀನಾಬಿ ನಾಯಕ ಆಯ್ಕೆಗೊಂಡಿದ್ದಾರೆ.
ಹಾನಗಲ್ಲ ಪುರಸಭಾ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಬಿಜೆಪಿಯ ಹಸೀನಾಬಿ ನಾಯಕ, ಕಾಂಗ್ರೇಸ್ಸಿನ ನಜೀರಅಹ್ಮದ ಸವಣೂರ ಹಾಗೂ ಸೈಯದ ಅಹ್ಮದಬಾಷಾ ಪೀರಜಾದೆ ಆಯ್ಕೆಯಾಗಿದ್ದಾರೆ. ಬಿಜೆಪಿಯ ಕಲ್ಯಾಣಕುಮಾರ ಶೆಟ್ಟರ, ಲಕ್ಷ್ಮವ್ವ ಹಳೇಕೋಟಿ ಪರಾಭವಗೊಂಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಕೆಜೆಪಿ ಬಿಜೆಪಿ ವಿಂಗಡನೆಯಿಂದ ಕೆಜೆಪಿಯ 15 ಹಾಗೂ ಕಾಂಗ್ರೇಸ್ಸಿನ 8 ಸದಸ್ಯರು ಆಯ್ಕೆಯಾಗಿದ್ದರು. ಬಿಜೆಪಿ ಕಳೆದ ಎರಡು ಅವಧಿಗೆ ಆಡಳಿತ ನಡೆಸುತ್ತಿತ್ತು.
ಕಾಂಗ್ರೇಸ್ ಗೆಲುವು ಅನಿರೀಕ್ಷಿತ ಎಂಬ ವಾದವೊಂದಿದ್ದರೆ ಬಿಜೆಪಿ ಬಹುಮತ ಪಡೆಯುವಲ್ಲಿ ವಿಫಲವಾಗಿರುವುದು ಮಾತ್ರವಲ್ಲ, ತೀರ ಕಡಿಮೆ ಸಂಖ್ಯೆಯ ಆಯ್ಕೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಹಾನಗಲ್ಲಿನಲ್ಲಿ ಕಾಂಗ್ರೇಸ್ ಹಾಗೂ ಬಿಜೆಪಿ ನಡುವೆ ಈ ಬಾರಿಯ ಚುನಾವಣೆ ಮುಂದಿನನ ಚುನಾವಣೆಗಳಿಗೂ ಮಾರ್ಗದರ್ಶಿಯಾಗಬಲ್ಲದು ಎಂಬ ಇಂಗಿತ ಸಾರ್ವಜನಿಕರಲ್ಲಿ ಮೂಡಿದೆ.