ಬೆಂಗಳೂರು:
ಮುಡಾ ಹಗರಣ ಮತ್ತು ವಾಲ್ಮೀಕಿ ನಿಗಮದ ಹಗರಣದಲ್ಲಿನ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಇತ್ತ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸುತ್ತಿದ್ದರೆ ಅತ್ತ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಮಾತ್ರ ಕಾಂಗ್ರೆಸ್ ಪಕ್ಷದ ಜನಾಂದೋಲನಕ್ಕೆ ಬೆಂಬಲ ನೀಡಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಬಿಜೆಪಿ- ಜೆಡಿಎಸ್ ಪಾದಯಾತ್ರೆಯಲ್ಲಿ ಕಾಣಿಸಿಕೊಳ್ಳದ ಬಿಜೆಪಿ ರೆಬೆಲ್ ಶಾಸಕ ಎಸ್.ಟಿ ಸೋಮಶೇಖರ್ , ಪಾದಯಾತ್ರೆಯ ವಿರುದ್ಧ ಕಾಂಗ್ರೆಸ್ (Congress) ಹಾಕಿರುವ ಬ್ಯಾನರ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಜೆಪಿ- ಜೆಡಿಎಸ್ ವಿರುದ್ಧ ಕಾಂಗ್ರೆಸ್ ಜನಾಂದೋಲನ ಆಯೋಜನೆ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಶಾಸಕ ಸೋಮಶೇಖರ್ ಕಾಣಿಸಿಕೊಳ್ಳುತ್ತಾರಾ ಎಂಬ ಅನುಮಾನ ಮೂಡಿದೆ. ಕಾಂಗ್ರೆಸ್ ಹಾಕಿರುವ ಬ್ಯಾನರ್‌ಗಳು ಈ ಕುತೂಹಲ ಮೂಡಿಸಿದ್ದು, ಬಿಡದಿಯಿಂದ ರಾಮನಗರದವರೆಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಹಾಕಿದ್ದು, ಅವುಗಳಲ್ಲಿ ಎಸ್.ಟಿ ಸೋಮಶೇಖರ್ ಭಾವಚಿತ್ರ ಕೂಡದೆ. ಇದೀಗ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿಗೆ ಇರುಸು-ಮುರುಸು ಉಂಟು ಮಾಡಿದೆ.
ಈ ಹಿಂದೆಯೂ ಕೂಡ ಬಿಜೆಪಿ ರೆಬೆಲ್ ಶಾಸಕ ಎಸ್ ಟಿ ಸೋಮಶೇಖರ್ ಬಿಜೆಪಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು. ಪಕ್ಷದ ವಿಪ್ ಉಲ್ಲಂಘಿಸಿ ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದರು. ಅಲ್ಲದೆ ಮುಡಾ ಹಗರಣದಲ್ಲೂ ಕಾಂಗ್ರೆಸ್ ಪರವಾಗಿ ಹೇಳಿಕೆ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು.
ಅಂದಹಾಗೆ ಬಿಜೆಪಿ ವಿರುದ್ಧ ರೆಬೆಲ್ ಆಗಿರುವ ಎಸ್. ಟಿ ಸೋಮಶೇಖರ್, ಡಿಕೆ ಶಿವಕುಮಾರ್ ಮತ್ತಿತರ ಕಾಂಗ್ರೆಸ್ ನಾಯಕರ ಜೊತೆಗೆ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿಕೆಶಿ ಏರ್ಪಡಿಸಿದ್ದ ಔತಣಕೂಟದಲ್ಲೂ ಅವರು ಕಾಣಿಸಿಕೊಂಡಿದ್ದರು. ಬಿಜೆಪಿಯಿಂದಲೂ ಅವರು ಸಾಕಷ್ಟು ಅಂತರ ಕಾಪಾಡಿಕೊಂಡಿದ್ದು, ಬಿಜೆಪಿಯ ಹಲವು ಕಾರ್ಯಕರ್ತರು ಇತ್ತೀಚೆಗೆ ಸೋಮಶೇಖರ್ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದರು.
ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಕೂಡ ಪಕ್ಷದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಇವರಿಬ್ಬರೂ ಕಾಂಗ್ರೆಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡುಬಂದಿದೆ. ಕಾಂಗ್ರೆಸ್ ಫ್ಲೆಕ್ಸ್‌ಗಳಲ್ಲಿ ಎಸ್.ಟಿ ಸೋಮಶೇಖರ್ ಫೋಟೋ ರಾರಾಜಿಸುತ್ತಿದೆ. ಹೀಗಾಗಿ ಎಸ್‌ಟಿಎಸ್ ನಡೆ ಭಾರಿ ಚರ್ಚೆಗೆ ಕಾರಣವಾಗಿದೆ.