ದಾವಣಗೆರೆ:
ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ(ಯುಜಿಸಿ)ವು ವಿದ್ಯಾರ್ಥಿಗಳನ್ನು ಕಾಟಾಚಾರದ ಸಂಶೋಧನೆ ಮಾಡಲು ಬಿಡಬಾರದು ಎಂದು ಗುಲ್ಬರ್ಗಾ ವಿಶ್ವವಿದ್ಯಾನಿಲಯದ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಬಿ.ಸಿ. ಮಹಾಬಲೇಶ್ವರಪ್ಪ ಸಲಹೆ ನೀಡಿದ್ದಾರೆ.
ನಗರದ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ರಾಜ್ಯ ಪತ್ರಾಗಾರ ನಿರ್ದೇಶನಾಲಯ ಇವುಗಳ ಸಹಯೋದಲಿ ‘ದಾವಣಗೆರೆ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ’ ವಿಷಯದ ಕುರಿತು ಎರಡು ದಿನಗಳಿಂದ ನಡೆಯುತ್ತಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುಜಿಸಿಯು ವಿದ್ಯಾರ್ಥಿಗಳನ್ನು ನೆಪದ ಹಾಗೂ ಕಾಟಾಚಾರದ ಸಂಶೋಧನೆ ಮಾಡಲು ಬಿಡಬಾರದು. ಏಕೆಂದರೆ, ಕಟಾಚಾರದ ಸಂಶೋಧನೆಯಿಂದ ಸಂಶೋಧನೆಯ ಮೂಲ ಆಶಯವೇ ಬುಡಮೇಲಾಗಲಿದೆ. ಆದ್ದರಿಂದ ಗುಣಮಟ್ಟದ ಸಂಶೋಧನೆಗೆ ಮಾತ್ರ ಪುರಸ್ಕಾರ ನೀಡಬೇಕು ಎಂದ ಅವರು, ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಇತಿಹಾಸದ ಮೂಲ ಜ್ಞಾನ ಹಾಗೂ ಭಾಷಾ ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡು ಸಂಶೋಧನೆಗೆ ಇಳಿಯಬೇಕು. ಹೀಗಾದಾಗ ಮಾತ್ರ ಗುಣಮಟ್ಟದ ಸಂಶೋಧನೆ ಹೊರಬರಲು ಸಾಧ್ಯವಾಗಲಿದೆ ಎಂದು ಹೇಳಿದರು.
ಇತ್ತೀಚಿನ ಬಹುತೇಕ ಸಂಶೋಧಕರು ಇತಿಹಾಸದ ಮೂಲಜ್ಞಾನದ ಬಗ್ಗೆ ತಿಳಿದುಕೊಳ್ಳಲು ಹೋಗುವುದೇ ಇಲ್ಲ. ಆದ್ದರಿಂದ ಸಂಶೋಧನೆಗಳಲ್ಲಿ ಸತ್ವವೇ ಇರುವುದಿಲ್ಲ. ಆದ್ದರಿಂದ ಸಂಶೋಧನೆಗೆ ಮುಂದಾಗುವ ಮೊದಲು ಯಾವ ವಿಷಯದಲ್ಲಿ ಸಂಶೋಧನೆ ಕೈಗೊಳ್ಳುತ್ತೇವೊ ಆ ವಿಷಯದ ಐತಿಹ್ಯ ತಿಳಿದುಕೊಳ್ಳುವುದರ ಜೊತೆಗೆ ಭಾಷಾ ಹಿಡಿತವನ್ನು ಸಾಧಿಸಬೇಕಾಗುತ್ತದೆ. ಅನ್ಯ ಭಾಷೆಯಲ್ಲಿ ಸಂಶೋಧನೆ ಮಾಡುವ ಬದಲು ಮಾತೃಭಾಷೆಯಲ್ಲಿ ಸಂಶೋಧನೆ ನಡೆಸುವುದೇ ಒಳ್ಳೆಯದು ಎಂದರು.
ಪ್ರಸ್ತುತ ನವೀನತೆ ಇರುವ ಸಮಾಜಮುಖಿ ಇತಿಹಾಸದ ಸಂಶೋಧನೆ ನಡೆಸುವುದು ಅತ್ಯವಶ್ಯವಾಗಿದೆ. ಪ್ರತಿಯೊಂದು ವಿಷಯ ಹಾಗೂ ಕ್ಷೇತ್ರಕ್ಕೆ ತನ್ನದೇಯಾದಂಥಹ ಇತಿಹಾಸವಿದೆ. ಹೀಗಾಗಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇತಿಹಾಸ ಅರಿವುವುದು ಅವಶ್ಯಕವಾಗಿದೆ. ಆದರೆ, ಇತ್ತೀಚೆಗೆ ಇತಿಹಾಸ ಎಂಬುದೇ ಒಂದು ಗೊಂದಲದ ಗೂಡಾಗಿ ಪರಿಣಮಿಸಿದೆ. ಏಕೆಂದರೆ, ಸಾರ್ವಜನಿಕ ವಲಯದಲ್ಲಿ ಸಂಶೋಧನೆಗಳು ಕಳಪೆಯಾಗಿವೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಸಂಶೋಧನೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಂಶೋಧಕರು ಸಂಶೋಧನೆಗಳನ್ನು ಸಮಾಜದ ಎದುರಿಗೆ ತೆರದಿಡಲು ಒಪ್ಪುವುದಿಲ್ಲ. ಇದರಿಂದಲೇ ಸಂಶೋಧನೆಗಳು ಎಷ್ಟರ ಮಟ್ಟಿಗೆ ಕಳಪೆಯಾಗಿದೆ ಎಂಬುದು ಸಾಬೀತಾಗುತ್ತಿದೆ. ಸಂಶೋಧನೆ ಯಾವತ್ತೂ ಬೀದಿಕೂಸಾಗಬೇಕೆ ಹೊರತು, ಕೋಣೆಯ ಕೂಸಾಗಬಾರದು.
ಐತಿಹಾಸಿಕ ಘಟನೆಗಳನ್ನು ಕಟ್ಟಿಕೊಡಲು ವಿಜ್ಞಾನ, ರಾಜಕೀಯ, ಸಾಮಾಜಿಕ ಎಲ್ಲದರ ಬಗ್ಗೆ ಜ್ಞಾನ ಮೈಗೂಡಿಸಿಕೊಳ್ಳುವುದು ಒಳ್ಳೆಯದು. ಪ್ರತಿ ಸಂಶೋಧನಾ ವಿದ್ಯಾರ್ಥಿಗೂ ಸರ್ಕಾರ 5 ಲಕ್ಷ ರೂ.ವನ್ನು ಧನಸಹಾಯ ನೀಡಲಿದೆ. ಇದರ ಸದುಪಯೋಗ ಪಡೆದುಕೊಂಡು ಗುಣಮಟ್ಟದ ಸಂಶೋಧನೆ ಕೈಗೊಳ್ಳಬೇಕೆಂದು ಕಿವಿಮಾತು ಹೇಳಿದರು.
12ನೇ ಶತಮಾನದ ಬಸವಾದಿ ಶರಣರ ಕಾಲದಲ್ಲಿಯೇ ಅಸ್ಪøಶ್ಯತೆ, ಜಾತಿ, ಸ್ತ್ರೀ ಶೋಷಣೆ ವಿರುದ್ಧ ಬಂಡಾಯ ಎದ್ದಿದ್ದರು. ಇದನ್ನು ಅರಿತು ಜಾತಿ, ಧರ್ಮದ ಮೇಲೆ ಸಂಶೋಧನೆ ನಡೆಸುವುದನ್ನು ಬಿಡಬೇಕು. ಅಂಥಹ ಸಂಶೋಧನೆ ಸಮಾಜಮುಖಿಯೂ ಆಗದು ಎಂದು ನುಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ|| ದಾದಾಪೀರ್ ನವಿಲೇಹಾಳ್, ಡಾ|| ಕಣ್ಣಕಟ್ಟಿ ಜಯಣ್ಣ, ಪ್ರೊ. ಎನ್. ಶಿವಲಿಂಗಪ್ಪ, ಡಾ|| ಶಕುಂತಲಾ, ಪ್ರೊ. ಪೂರ್ಣಿಮಾ ಎಸ್.ಆರ್., ಪ್ರೊ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
