ದಾವಣಗೆರೆ:
ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರು ವರನಟ ಡಾ.ರಾಜ್‍ಕುಮಾರ್ ಪುತ್ಥಳಿ ಸ್ಥಾಪಿಸಬೇಕು ಹಾಗೂ ಅಲ್ಲಿಯ ರಸ್ತೆಗೆ ಡಾ.ರಾಜಕುಮಾರ್ ಅವರ ಹೆಸರು ಇಡಬೇಕೆಂದು ಅಖಿಲ ಕರ್ನಾಟಕ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘ, ಡಾ.ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘ ಹಾಗೂ ರಾಜರತ್ನ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡನಾಡು, ನುಡಿ, ಭಾಷೆಗಾಗಿ ತಮ್ಮ ಜೀವನವನ್ನು ಮುಟಿಪಿಟ್ಟ ಹಾಗೂ ಚಂದನವನದಲ್ಲಿ ಅಭಿನಯದ ಮೂಲಕ ಉತ್ತಮ ಸಂದೇಶ ನೀಡಿರುವ ವರನಟ, ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರ ಪುತ್ಥಳಿ ನಿರ್ಮಾಣಕ್ಕೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಣದ ಎದುರು ಜಾಗ ಗುರುತಿಸಬೇಕು ಹಾಗೂ ಆ ರಸ್ತೆಗೆ ಡಾ.ರಾಜ್ ಕುಮಾರ್ ಅವರ ಹೆಸರು ಇಡಬೇಕೆಂದು ಒತ್ತಾಯಿಸಿ ಅ.6ರಂದು ಜಿಲ್ಲಾಧಿಕಾರಿಗಳಿಗೆ, ಮಹಾನಗರ ಪಾಲಿಕೆ ಮಹಾಪೌರರಿಗೆ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಹಿಂದೆ ಡಾ.ರಾಜ್‍ಕುಮಾರ್ ಅವರು ಅಭಿನಯಿಸಿರುವ ಹಳೇ ಸಿನಿಮಾಗಳ ಹೆಸರನ್ನೇ ಇಟ್ಟುಕೊಂಡು ಈಗಿನ ಕೆಲ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರು ಸಿನಿಮಾ ನಿರ್ಮಾಣ ಮಾಡುತ್ತಾರೆ. ಆದರೆ, ಸಿನಿಮಾದ ಟೈಟಲ್‍ಗೂ ಹಾಗೂ ಆ ಚಿತ್ರಕತೆಗೂ ತಾಳೆಯೇ ಇರುವುದಿಲ್ಲ. ಆದ್ದರಿಂದ ರಾಜ್‍ಕುಮಾರ್ ಅಭಿನಯಿಸಿರುವ ಯಾವುದೇ ಚಿತ್ರದ ಹೆಸರನ್ನು ಈಗಿನವರು ಕಾಪಿ ಮಾಡಬಾರದು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ವಾಸುದೇವ, ಮಹಿಳಾ ಘಟಕದ ಭಾಗ್ಯದೇವಿ ವೈ, ಹರೀಶ್, ತಿಪ್ಪೇಸ್ವಾಮಿ, ದ್ವಾರಜಕೇಶ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
