ದಾವಣಗೆರೆ:
ವಿಶ್ವಗುರು ಬಸವಣ್ಣನವರ ಭಕ್ತರಾಗಿದ್ದ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿಯವರು ಬಸವಣ್ಣರವರ ಕಾಯಕ ಸಂಸ್ಕತಿಯನ್ನು ಮುನ್ನಡೆಸಿದ ಪವಾಡ ಪುರುಷರಾಗಿದ್ದಾರೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಸ್ಮರಿಸಿದರು.
ನಗರದ ಶ್ರೀನರಹರಿ ಶೇಟ್ ಕಲ್ಯಾಣ ಮಂಟಪದ ಎದುರಿನ ಟಿಎಂಟಿಎನ್ ಕಾಂಪೌಂಡ್‍ನಲ್ಲಿರುವ ರಂಗಮಂದಿರದಲ್ಲಿ ಚಿತ್ರದುರ್ಗದ ಶ್ರೀಕುಮಾರೇಶ್ವರ ನಾಟಕ ಸಂಘದ ವತಿಯಿಂದ ಏರ್ಪಡಿಸಿರುವ `ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಮಹಾತ್ಮೆ’ ಭಕ್ತಿ ಪ್ರಧಾನ ನಾಟಕ ಪ್ರದರ್ಶನದ ಪ್ರಾರಂಭೊತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
16ನೇ ಶತಮಾನದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಬಸವ ಭಕ್ತರಾಗಿದ್ದಾರೆ. ಬಸವಣ್ಣವರ ತತ್ವದಾರ್ಶಗಳನ್ನು ಪಾಲಿಸುತ್ತಾ, ಪ್ರಚಾರ ಮಾಡಿದ್ದರು. ಗುರು ತಿಪ್ಪೇರುದ್ರಸ್ವಾಮಿ ಕಾಯಕಯೋಗಿಗಳಾಗಿದ್ದರು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವದಂತೆ ಕಾಯಕದಲ್ಲೇ ಕೈಲಾಸ ಕಂಡವರಾಗಿದ್ದಾರೆ. ಅಲ್ಲದೆ, `ಮಾಡಿದಷ್ಟು ನೀಡು ದೀಕ್ಷೆ’ ಎಂಬ ಸಂದೇಶವನ್ನು ಸಾರಿದ ಮಹತ್ಮರಾಗಿದ್ದಾರೆಂದು ಹೇಳಿದರು.
ಪ್ರತಿಯೊಬ್ಬರೂ ಕಾಯಕ ಮಾಡಬೇಕು. ಕಾಯಕ ಆಚರಿಸದೆ ಉದಾಸೀನರಾದರೆ ಸೋಮಾರಿಗಳಾಗಬೇಕಾಗುತ್ತದೆ. ನಾವು ಎಷ್ಟು ಕಾಯಕ ಮಾಡುತ್ತೇವೊ ಅಷ್ಟನ್ನು ಪ್ರಡೆದು, ಪ್ರಗತಿ, ಸರ್ವತೋಮುಖವನ್ನು ಕಾಣುತ್ತೇವೆಂದು ಸಾರಿದ ತಿಪ್ಪೇರುದ್ರಸ್ವಾಮಿ ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ತಿಪ್ಪೇರುದ್ರಸ್ವಾಮಿ ಅವರ ನಾಟಕ ಬಹಳ ಹಳೆಯದು, 1985ರಲ್ಲಿಯೇ ಹಳೇ ಬಸ್‍ನಿಲ್ದಾಣ ಬಳಿಯ ಶ್ರೀನಿವಾಸ ಡ್ರಾಮಾ ಥಿಯಟೇರಿನಲ್ಲಿ 6 ತಿಂಗಳ ಪ್ರದರ್ಶನ ಯಶಸ್ವಿ ಪ್ರದರ್ಶನ ನೀಡಿತ್ತು. ತಿಪ್ಪೇರುದ್ರಸ್ವಾಮಿ ಅವರ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿದ್ದು, ನಾಟಕವನ್ನು ನೋಡಿ, ಆ ಸ್ವಾಮೀಜಿ ಕೃಪೆಗೆ ಪಾತ್ರರಾಗುವುದರ ಜೊತೆಗೆ, ನಾಟಕಗಳಿಗೆ, ಕಲಾವಿದರಿಗೆ ಹಾಗೂ ಕಂಪನಿಗಳ ಮಾಲಿಕರಿಗೆ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಬಿಆರ್ ಡ್ರಾಮ ಕಂಪನಿಯ ಮಾಲೀಕ ಚಿಂದೋಡಿ ಚಂದ್ರಧರ, ಹಿರಿಯ ಕಲಾವಿದ ಜಯಕುಮಾರ್ ಕೊಡಗನೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು
ಯರಗುಂಟೆಯ ಶ್ರೀಪರಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮೇಯರ್ ಶೋಭಾ ಪಲ್ಲಾಗಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಸಂಘದ ಮಾಲೀಕ ಬಿ.ಕುಮಾರಸ್ವಾಮಿ, ನ್ಯಾಯವಾದಿ ಡಾ.ರೇವಣ್ಣ ಬಳ್ಳಾರಿ, ಡಾ.ವಿನಯಕುಮಾರ್ ಸಾಹುಕಾರ್, ಟಿ.ಎಂ.ವಿನಾಯಕ ಮತ್ತಿತರರು ಉಪಸ್ಥಿತರಿದ್ದರು.