ಕಾವೇರಿ ವಿಚಾರದಲ್ಲಿ ಕೇಂದ್ರ ಸರಕಾರ, 25 ಸಂಸದರು ರಾಜ್ಯದ ಜೊತೆಗಿದ್ದಾರೆ- ತೇಜಸ್ವಿ ಸೂರ್ಯ

ಬೆಂಗಳೂರು

     ಕಾಂಗ್ರೆಸ್ಸಿನವರು 25 ಬಿಜೆಪಿ ಸಂಸದರ ಬಗ್ಗೆ ಮಾತನಾಡುತ್ತಾರೆ. ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಹಿಂದೆಯೂ, ಇವತ್ತು ಮತ್ತು ಮುಂದೆಯೂ ಕರ್ನಾಟಕದ ಜೊತೆಗಿದೆ. ರಾಜ್ಯದ 25 ಸಂಸದರೂ ರಾಜ್ಯದ ನೆಲ, ಜಲದ ಪರವಾಗಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನಲ್ಲಿ ಕಾವೇರಿ ನೀರಿನ ಆದೇಶದ ಸಂಬAಧ ಅದನ್ನು ಪರಿವರ್ತಿಸಲು 2018ರಲ್ಲಿ ಕೋರಲಾಗಿತ್ತು. ಅದಕ್ಕಾಗಿ ಪ್ರಮಾಣ ಪತ್ರ ಸಲ್ಲಿಸಲಾಗಿತ್ತು. ಹೆಚ್ಚು ನೀರು ಕೊಡಲು ಕೇಳಲಾಗಿತ್ತು. ಪರಿಣಾಮವಾಗಿ ಸುಪ್ರೀಂ ಕೋರ್ಟ್ ಆದೇಶ ಮಾರ್ಪಾಡು ಮಾಡಿ 14.75 ಟಿಎಂಸಿ ಹೆಚ್ಚು ನೀರನ್ನು ಕೊಟ್ಟಿತ್ತು. ಅದರಲ್ಲಿ ಹಿಂದಿನ ಸಚಿವ ಅನಂತಕುಮಾರರ ಪಾತ್ರ ಪ್ರಮುಖವಾಗಿತ್ತು ಎಂದು ವಿವರಿಸಿದರು.

    ನೀರಿನಲ್ಲಿ ರಾಜಕೀಯ ನಮ್ಮದಲ್ಲ. ಕರ್ನಾಟಕಕ್ಕೆ ನಮ್ಮ ಬದ್ಧತೆ ಇದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 24, 25ನೇ ಸಭೆಯಲ್ಲಿ ರಾಜ್ಯದ ಪರವಾಗಿ ಸಂಸದರು ನಿಂತಿದ್ದಾರೆ. ರಾಜ್ಯ ಸರಕಾರದ ವಸ್ತುಸ್ಥಿತಿ ಕುರಿತು ವರದಿಯನ್ನು ನಾವು ಬೆಂಬಲಿಸಿದ್ದೇವೆ. ಇದರ ಹಿಂದೆ ರಾಜ್ಯ 25 ಸಂಸದರ ಪ್ರಯತ್ನ ಇತ್ತು. ಮಾನ್ಯ ಯಡಿಯೂರಪ್ಪ, ಪ್ರಲ್ಹಾದ್ ಜೋಷಿ, ನಾನು, ಪಿ.ಸಿ.ಮೋಹನ್, ಸದಾನಂದ ಗೌಡ, ಮುನಿಸ್ವಾಮಿ, ಪ್ರತಾಪಸಿಂಹ ಮತ್ತಿತರರು ಇದಕ್ಕಾಗಿ ಶ್ರಮಿಸಿದ್ದೇವೆ. ನಾನು, ಪಿ.ಸಿ.ಮೋಹನ್, ಸದಾನಂದ ಗೌಡ, ಮುನಿಸ್ವಾಮಿ, ಪ್ರತಾಪಸಿಂಹ ಮತ್ತಿತರರು ಪ್ರಲ್ಹಾದ್ ಜೋಷಿಯವರ ನೇತೃತ್ವದಲ್ಲಿ ಕೇಂದ್ರ ಸಚಿವರನ್ನೂ ಭೇಟಿ ಮಾಡಿದ್ದೇವೆ ಎಂದು ವಿವರ ನೀಡಿದರು.

     ಪ್ರಲ್ಹಾದ್ ಜೋಷಿ, ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಸಂಸದರು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್‌ರನ್ನು ಭೇಟಿಯಾಗಿ ಇದೆಲ್ಲದರ ಬಳಿಕ ಮಾಧ್ಯಮಗಳ ಮುಂದೆ 25 ಸಂಸದರ ನಿಲುವಿನ ಬಗ್ಗೆ ಪ್ರಶ್ನಿಸುವುದು ರಾಜಕೀಯ ಹೊರತು ಮತ್ತೇನಲ್ಲ ಎಂದು ಆಕ್ಷೇಪಿಸಿದರು. ರಾಜ್ಯ ಕಾಂಗ್ರೆಸ್ ಸರಕಾರದ ಸುಳ್ಳು ಹೇಳಿಕೆ ಆಕ್ಷೇಪಾರ್ಹ ಎಂದು ತಿಳಿಸಿದರು.

     ರಾಜ್ಯ ಸರಕಾರದ ನಿಲುವನ್ನು ಸತತವಾಗಿ ನಾವು ಸಮರ್ಥಿಸಿದ್ದೇವೆ. ಕರ್ನಾಟಕದಲ್ಲಿ ನೀರಿನ ಕೊರತೆ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಪರವಾಗಿ ಕೇಂದ್ರದ ಅಧಿಕಾರಿಗಳು ವಾದ ಮಾಡಿಲ್ಲವೆಂದು ಸಿಎಂ, ಡಿಸಿಎಂ ಅವರು ದಾಖಲೆ ನೀಡಿ ಹೇಳಲಿ ಎಂದು ಸವಾಲೆಸೆದರು. ನೀರು, ನಾಡಿನ ನುಡಿ, ಭಾಷೆ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ಬೇರೆಬೇರೆಯಲ್ಲ. ನಾವು ನಾಡಿನ ನ್ಯಾಯದ ಪರ ಇರಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡದಿರಿ ಎಂದು ಮನವಿ ಮಾಡಿದರು.

     ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ವಸ್ತುಸ್ಥಿತಿ ತಿಳಿಯದೆ ಎ.ಸಿ. ಕೊಠಡಿಯಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ನೀರು ಬಿಡಲು ಸೂಚಿಸಬಾರದು. ತಜ್ಞರ ಮೂಲಕ ವಸ್ತುಸ್ಥಿತಿ ತಿಳಿದುಕೊಳ್ಳಿ ಎಂದು ಒತ್ತಾಯಿಸಿದರು. ಇದಕ್ಕಾಗಿ ತಜ್ಞರ ಸಮಿತಿ ಕಳಿಸಲು ರಾಜ್ಯ ಸರಕಾರ ಆಗ್ರಹಿಸಬೇಕು ಎಂದು ಕೋರಿದರು.

     ಕಾಂಗ್ರೆಸ್- ಡಿಎಂಕೆ ?ಇಂಡಿಯ? ಮೈತ್ರಿಕೂಟದಲ್ಲಿವೆ. ರಾಜ್ಯದ ಸಂಕಷ್ಟದ ಸಂದರ್ಭದಲ್ಲಿ ತಮಿಳುನಾಡಿನ ಜೊತೆ ಸಲೀಸಾಗಿ ಮಾತನಾಡಲು ಕಾಂಗ್ರೆಸ್ಸಿಗರಿಗೆ ಅವಕಾಶವಿದೆ. ರಾಜಕೀಯ ದೋಸ್ತಿಯನ್ನು ಸಮಸ್ಯೆ ಪರಿಹಾರಕ್ಕಾಗಿ ಬಳಸಿ. ಮೇಕೆದಾಟು ಯೋಜನೆಗೆ ಅನುಮತಿ ಪಡೆದುಕೊಳ್ಳಿ ಎಂದು ತೇಜಸ್ವಿ ಸೂರ್ಯ ಅವರು ಆಗ್ರಹಿಸಿದರು.

    ಕರ್ನಾಟಕದ ಇತಿಹಾಸದಲ್ಲಿ ಎಂದೆAದಿಗೂ ಕಾವೇರಿ ಸಮಸ್ಯೆ ಪರಿಹರಿಸಿದವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಎಂದು ದಾಖಲಾಗುತ್ತದೆ. ಖಾಯಂ ಪರಿಹಾರ ನೀಡಿದವರೆಂದು ನಿಮಗೆ ಕ್ರೆಡಿಟ್ ಸಿಗುತ್ತದೆ ಎಂದು ತಿಳಿಸಿದರು. ಕಾವೇರಿ ನೀರಿನ ವಿಷಯದಲ್ಲಿ ಸ್ಟಾಲಿನ್ ಜೊತೆ ಮಾತನಾಡುವ ವಿಚಾರದಲ್ಲಿ ಬಿಜೆಪಿ ನಿಮ್ಮ ಜೊತೆಗಿದೆ ಎಂದು ತಿಳಿಸಿದರು.

     ಇವತ್ತು ರಾಜ್ಯದಲ್ಲಿ ಹಲವಾರು ರೈತಪರ ಸಂಘಟನೆಗಳು ಕುಡಿಯುವ ನೀರಿಗೆ ಸಂಕಷ್ಟ ಇದ್ದರೂ ಮಂಡ್ಯ ಮತ್ತು ಹಲವಾರು ಭಾಗದ ರೈತರಿಗೆ ಬೆಳೆಗಳಿಗೆ ನೀರಿನ ಕೊರತೆ ಇದ್ದರೂ ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಬಂದ್ ಕರೆಕೊಟ್ಟಿದ್ದಾರೆ. ಈ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದರು. ಕಾವೇರಿ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ವಸ್ತುಸ್ಥಿತಿ ಮಂಡನೆಯಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಇದು ಖಂಡನೀಯ ಎಂದು ತಿಳಿಸಿದರು. ಇದರಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿವರಿಸಿದರು.

    ರಾಜ್ಯದ ಕಾಂಗ್ರೆಸ್ ಸರಕಾರ ತನ್ನ ವೈಫಲ್ಯ ಮರೆಮಾಚಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಿದೆ. ನೆಲ, ಜಲದಂಥ ವಿಚಾರದಲ್ಲಿ ಎಲ್ಲ ಪಕ್ಷಗಳೂ ಒಂದಾಗಿ ಪ್ರಯತ್ನ ಮಾಡಬೇಕಿದೆ. ಶೇ 60ರಷ್ಟು ಮಳೆ ಕೊರತೆ ಆಗಿದೆ. ಕಾವೇರಿ ಕೊಳ್ಳ ಪ್ರದೇಶದಲ್ಲಿ 32 ತಾಲ್ಲೂಕುಗಳು ತೀವ್ರ ಬರಪೀಡಿತ ಎಂದು ಪ್ರಕಟಿಸಲಾಗಿದೆ. ಜಲವರ್ಷದಲ್ಲಿ ಜುಲೈ ಮುಕ್ತಾಯದವರೆಗೆ 106 ಟಿಎಂಸಿ ಬೇಕು. ಆದರೆ, 52 ಟಿಎಂಸಿ ನೀರಿದೆ. ರಾಜ್ಯದಲ್ಲಿ ಮುಂಗಾರು ಸಂಪೂರ್ಣ ವಿಫಲವಾಗಿದೆ. ತಮಿಳುನಾಡಿಗೆ ಮುಂಗಾರು, ಹಿಂಗಾರಿನಲ್ಲೂ ಮಳೆ ಬೀಳುತ್ತದೆ ಎಂದು ತಿಳಿಸಿದರು.

    ಮಳೆಗಾಲ ಮುಗಿದ ಬಳಿಕ ನೀರಿನ ಕೊರತೆ ಬರಲಿದ್ದು, ಆಗ ತಮಿಳಿನಾಡಿನಿಂದ ಕರ್ನಾಟಕಕ್ಕೆ ನೀರನ್ನು ಪಂಪ್ ಮಾಡಲು ಸೂಚಿಸಲು ಸಾಧ್ಯವೇ ಎಂದು ಪ್ರಶ್ನೆಯನ್ನೂ ಮುಂದಿಟ್ಟರು. ಇದನ್ನು ರಾಜ್ಯ ಕಾಂಗ್ರೆಸ್ ಸರಕಾರವು ಸಮರ್ಪಕವಾಗಿ ತಿಳಿಸಿಲ್ಲ; ವಾದ ಮಾಡಿಲ್ಲ. ಇದರಿಂದ ನಮ್ಮ ವಿರುದ್ಧ ಆದೇಶಗಳು ಬಂದಿವೆ ಎಂದು ನುಡಿದರು.

    ಬೆಂಗಳೂರು ಬಂದ್ ಇದ್ದಾಗ 3 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶ ಮಾಡಿದರು. ಇಡೀ ರಾಜ್ಯ ಮತ್ತು ಎಲ್ಲ ಪಕ್ಷಗಳು ಇದನ್ನು ಒಕ್ಕೊರಲಿನಿಂದ ವಿರೋಧಿಸಬೇಕಿತ್ತು. ಆದರೆ, ಇದು ರಾಜ್ಯದ ಪರ ಆದೇಶ ಎಂದು ಸಿಎಂ ಮತ್ತು ಡಿಸಿಎಂ ಹೇಳಿಕೆ ಕೊಟ್ಟರು. ಬಳಿಕ ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ತಿಳಿಸಿದರು. ಸಿಎಂ ಮತ್ತು ಡಿಸಿಎಂಗೆ ಸ್ಪಷ್ಟತೆ ಇಲ್ಲ ಎಂದು ಟೀಕಿಸಿದರು.

     ಸಿಎಂ ಮತ್ತು ಡಿಸಿಎಂ ನಡುವೆ ಸಮನ್ವಯತೆ ಕೊರತೆ ಇದೆ. ಬೆಂಗಳೂರಿನಲ್ಲೂ ಕುಡಿಯುವ ನೀರಿನ ಕೊರತೆ ಆದೀತೆಂದು ವಕೀಲರ ವಾದ ಇದ್ದರೆ, ಇನ್ನೊಂದೆಡೆ ಪ್ರಾಧಿಕಾರದ ಸೂಚನೆಯನ್ನು ಸರಕಾರ ಸ್ವಾಗತಿಸಿದೆ. ಹಾಗಿದ್ದಾಗ, ವಕೀಲರ ಮನಸ್ಥಿತಿ ಹೇಗಿದ್ದೀತು ಎಂದು ಪ್ರಶ್ನಿಸಿದರು. ಸಂಸದರಾದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ನಾರಾಯಣ್, ಶಾಸಕರಾದ ಎಸ್.ಮುನಿರಾಜು, ಸಿ.ಕೆ.ರಾಮಮೂರ್ತಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap