ಕೀಳರಿಮೆ ತೊರೆದು ಸಾಧನೆಯತ್ತ ಗಮನ ಹರಿಸಿ

ದಾವಣಗೆರೆ:

     ವಿದ್ಯಾರ್ಥಿಗಳು ನಾನು ಬಡವ, ನನ್ನಿಂದ ಆಗುವುದಿಲ್ಲ ಎಂಬ ಕೀಳರಿಮೆಯನ್ನು ಮನಸ್ಸಿನಿಂದ ತೆಗೆದು ಹಾಕಿ, ಉತ್ತಮ ಸಾಧನೆ ಮಾಡುವತ್ತ ಗಮನ ಹರಿಸಬೇಕೆಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ಕರೆ ನೀಡಿದರು.

     ನಗರದ ರೇಣುಕ ಮಂದಿರದಲ್ಲಿ ಭಾನುವಾರ ಹರಸೇವಾ ಸಂಸ್ಥೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ 25ನೇ ವರ್ಷದ `ಬೆಳ್ಳಿ ಬೆಡಗು’ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

     ಒಂದೇ ಬಾರಿಗೆ ಯಶಸ್ಸು ಎಂಬುದು ಸಿಗುವುದಿಲ್ಲ. ಸಹನೆ ಇಟ್ಟುಕೊಂಡು ಅವಕಾಶ ಸಿಕ್ಕಾಗ ಪರಿಶ್ರಮಪಟ್ಟರೆ ಮಾತ್ರ ಸಾಧನೆ ಸಾಧ್ಯವಾಗಲಿದೆ ಎಂದ ಶ್ರೀಗಳು, ಸಮಾಜ ಪ್ರತಿಭೆಗಳನ್ನು ಹೆಕ್ಕಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದು, ಈಗಾಗಲೇ ಸಾವಿರಾರು ಮಕ್ಕಳಿಗೆ ಪ್ರೋತ್ಸಾಹ ನೀಡಲಾಗಿದೆ. ನೀವು 90 ಅಂಕ ಗಳಿಸಿರಬಹುದು.

     ಇದರ ಹಿಂದೆ ನಿಮ್ಮ ಪೋಷಕರ ಶ್ರಮವೂ ಇರುತ್ತದೆ. ಆದ್ದರಿಂದ ನೀವು ದೊಡ್ಡವರಾದ ಮೇಲೆ ತಂದೆ-ತಾಯಿ ಹಾಗೂ ನಿಮ್ಮನ್ನು ಬೆಳೆಸಿದ ಸಮಾಜವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.ದಾವಣಗೆರೆಯಲ್ಲೀಗ ಲಿಂಗಾಯತರ ಹವಾ ಹೆಚ್ಚಾಗಿದ್ದು, 99 ವರ್ಷಗಳ ನಂತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಲಿಂಗಾಯತರಾಗಿದ್ದಾರೆ. ಪ್ರಧಾನ ಕಾಯದರ್ಶಿ ಜಗದೀಶ್ ಸಹ ಪಂಚಮಸಾಲಿ ಸಮಾಜದವರಾಗಿದ್ದಾರೆ. ಇಂತಹ ಅವಕಾಶಗಳು ನಿಮಗೆ ಸಿಕ್ಕಲ್ಲಿ, ನೀವೊಬ್ಬರೇ ಖುಷಿ ಪಡಬೇಡಿ, ಅದನ್ನು ಸಮಾಜದೊಂದಿಗೆ ಹಂಚಿಕೊಳ್ಳಿ ಎಂದು ಸಲಹೆ ನೀಡಿದರು.

      ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಸೂಪ್ತವಾಗಿರುವ ಪ್ರತಿಭೆಗಳನ್ನು ಗುರುತಿಸಿ,ಪ್ರೋತ್ಸಾಹಿಸಿ, ಸರಿಯಾದ ಅವಕಾಶಗಳನ್ನು ಕಲ್ಪಿಸುವುದು ಸಮಾಜದ ಆದ್ಯ ಕರ್ತವ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಪ್ರತಿಭಾವಂತರು ಸಿಗುತ್ತಾರೆ. ಆದರೆ ಅವರಿಗೆ ಅವಕಾಶ ಮತ್ತು ಪ್ರೋತ್ಸಾಹ ಸಿಕ್ಕಿರುವುದಿಲ್ಲ. ಅಂತಹ ಪ್ರತಿಭೆಗಳನ್ನು ಹುಡುಕಿ ಪ್ರೋತ್ಸಾಹ ನೀಡಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.

     ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದೆ ಕರ್ನಾಟಕದವರ ಸಂಖ್ಯೆ ಬಹಳ ಕಡಿಮೆ ಇರುತಿತ್ತು. ಆದರೆ, ಈಗ ಐಎಎಸ್, ಐಪಿಎಸ್ ಬರೆಯುವವರಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಜಾಗೃತಿ ಬಂದಿರುವುದೇ ಕಾರಣವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಅಂದರೆ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಮಾತ್ರ ಅಲ್ಲ. ಡಿಫೆನ್ಸ್, ಇಸ್ರೊ, ಅಗ್ರಿಕಲ್ಚರ್ ಸೈನ್ಸ್ ಹೀಗೆ ಬೇರೆ ಬೇರೆ ವಿಭಾಗಗಳಿದ್ದು, ಅವುಗಳನ್ನು ಆಯ್ಕೆ ಮಾಡಿಕೊಂಡು ಸಾಧನೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.

     ಪ್ರಾಸ್ತಾವಿಕ ಮಾತನಾಡಿದ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ಉಮಾಪತಿ, ಕಳೆದ 16 ವರ್ಷಗಳಲ್ಲಿ 4,800ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ನೀಡಲಾಗಿದೆ. ನಮ್ಮ ಸಂಘಕ್ಕೆ 25 ವರ್ಷಗಳು ತುಂಬಿದ ಕಾರಣ ಈ ಬಾರಿ ಶೇ 90ಕ್ಕೂ ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿಯ 25 ಜನರಿಗೆ ಹಾಗೂ ಪಿಯುಸಿಯ 25 ಮಂದಿಗೆ ಬೆಳ್ಳಿ ಚೌಕ ನೀಡಲಾಗುತ್ತಿದೆ. 210 ವಿದ್ಯಾರ್ಥಿಗಳಿಗೆ ಬೆಳ್ಳಿ ನಾಣ್ಯ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನಹರಿಸಿದರೆ ಗುರಿ ಮುಟ್ಟಲು ಸಾಧ್ಯವಾಗಲಿದೆ ಎಂದರು.

    ಕುವೆಂಪು ವಿವಿಯ ಕುಲಪತಿ ಪ್ರೊ.ಬಿ.ಪಿ.ವೀರಂಭದ್ರಪ್ಪ ಮಾತನಾಡಿ, ನಾನು ಕುವೆಂಪು ವಿವಿಯ ಕುಲಪತಿಯಾಗಿ ನೇಮಕಗೊಂಡಿರುವುದು ಪಂಚಮಸಾಲಿ ಸಮಾಜಕ್ಕೆ ಸಿಕ್ಕಿರುವ ದೊಡ್ಡ ಗೌರವವಾಗಿದೆ. ನಮ್ಮ ಸಮಾಜ ಅವಕಾಶ ಸಿಗದೇ ವಂಚಿತವಾಗುತ್ತಿದೆ. ಅದಕ್ಕಾಗಿ ಅವಕಾಶ ಹುಡುಕಿಕೊಂಡು ಹೋಗುವುದನ್ನು ಕಲಿಯಬೇಕೆಂದು ಕಿವಿಮಾತು ಹೇಳಿದರು.

     ಇದೇ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಎಚ್.ಎಸ್. ಗೌರಿ, ಎಸ್. ವಿದ್ಯಾಶ್ರೀ, ನಿಶ್ಚಿತ ಅವರನ್ನು ಹಾಗೂ ಸಮಾಜದ ಗಣ್ಯರಾದ ಬಾದಾಮಿ ಕರಿಬಸಪ್ಪ, ಹುಲಿಕಟ್ಟೆ ಹಾಲೇಶಪ್ಪ, ಅಮರೇಶ್ವರಪ್ಪ, ಬಸಪ್ಪ ಮೈಲೇಶ್ವರ, ಬಿ.ರಮೇಶ್, ವೀರಣ್ಣ ರಕ್ಕಸಗಿ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.

     ಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇದಕ್ಕೂ ಮುನ್ನ ಉಪನ್ಯಾಸಕ ಡಾ.ಬಿ.ವಿ.ಧನಂಜಯ ಮೂರ್ತಿ, ಮುಖ್ಯೋಪಾಧ್ಯಾಯ ಜಗನ್ನಾಥ್ ನಾಡಿಗೇರ್ ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ ದಿಂಡೂರು, ಉಪನ್ಯಾಸಕರಾದ ಡಾ. ಬಿ.ವಿ. ಧನಂಜಯಮೂರ್ತಿ, ಜಗನ್ನಾಥ ನಾಡಿಗೇರ, ಸಂಘದ ಪ್ರಮುಖರಾದ ಹದಡಿ ನಟರಾಜ್, ಎಂ.ದೊಡ್ಡಪ್ಪ, ಮಂಜುನಾಥ, ಲಕ್ಷ್ಮೀ ನಾಗರಾಜ್, ಜಯಮ್ಮ ನೀಲಗುಂದ, ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಸವರಾಜ ಬಣಕಾರ, ಬೆಟ್ಟನಗೌಡ, ಶೇಖರಪ್ಪ, ಡಾ.ಕೊಟ್ರೇಶ್, ಎಂ.ಎಸ್.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯದರ್ಶಿ ಎಸ್.ಸಿ. ಕಾಶಿನಾಥ ಸ್ವಾಗತಿಸಿದರು. ನಾಗರಾಜ ವಂದಿಸಿದರು. ಅಂಗಡಿ ಸಂಗಮೇಶ್, ಎ.ವೀರಭದ್ರಪ್ಪ ನಿರೂಪಿಸಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap