ಸಂತೇಬೆನ್ನೂರು
ಕ್ರಿಬ್ಕೋ ಸಂಸ್ಥೆಯವತಿಯಿಂದ ರೈತರ ಜೊತೆ ಕೃಷಿ ಚಟುವಟಿಕೆಗಳ ಆಗೂ ಹೋಗುಗಳ ಬಗ್ಗೆ ಸಾಮೂಹಿಕ ಚರ್ಚೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೀಪ ಬೆಳಗಿಸುವ ಮೂಲಕ ಉಧ್ಘಾಟನೆ ಮಾಡಿದ ಚನ್ನಗಿರಿ ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಶ್ರೀ ಶಿವಕುಮಾರ್ ಮಲ್ಲಾಡದ್‍ರವರು ಒಂದೇ ರೀತಿಯ ಕಾಳು, ಒಂದೇ ರೀತಿಯ ಪದಾರ್ಥಗಳನ್ನು ಸೇವಿಸಿ ಬದುಕಲು ಸಾಧ್ಯವಿಲ್ಲ.
ಎಲ್ಲಾರೀತಿಯ ಆಹಾರ ಪದಾರ್ಥಗಳನ್ನು ಬೆಳೆದು ಅವೆಲ್ಲವನ್ನು ಆಹಾರವಾಗಿ ಉಪಯೋಗಿಸಿ ಆರೋಗ್ಯವಂತರಾಗಬಹುದು. ನಮ್ಮ ಸುತ್ತಾ-ಮುತ್ತಾ ಎಲ್ಲಾ ಆಹಾರ ಪದಾರ್ಥಗಳನ್ನು ಬೆಳೆಯುವ ಪರಿಸರ, ಮಣ್ಣು ಮತ್ತು ಕೃಷಿಕರ ಶ್ರಮ ಇದ್ದೇಇದೆ. ರೈತರು ರಸಾಯನಿಕ ಮತ್ತು ಕೀಟನಾಶಕದ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಿ ಜೈವಿಕ ಮತ್ತು ಸಾವಯವ ಗೊಬ್ಬರಗಳ ಬಳಕೆ ಮಾಡುವುದು ಸೂಕ್ತವಾಗಿದ್ದು ಆರೋಗ್ಯಕ್ಕೂ ಸಹ ಸಹಕಾರಿ ಎಂದು ನುಡಿದರು.
ಚನ್ನಗಿರಿ ತಾಲ್ಲೂಕು ಗೊಬ್ಬರ ಬೀಜ ಮಾರಾಟಗಾರರ ಸಂಘದ ಉಪಾಧ್ಯಕ್ಷರಾದ ಶ್ರೀ ಕೆ.ಸಿರಾಜ್ ಅಹ್ಮದ್ ಮಾತನಾಡಿ ದ್ವಿತಿಸಂಸ್ಲೇಷಣೆ ಕ್ರಿಯೆ ಎಲ್ಲಾ ಜೀವಿಗಳಲ್ಲಿ ಇರುವಂತೆ ಮಣ್ಣಿನಲ್ಲಿ ಇರುವುದಿಲ್ಲ ಹಾಗಾಗಿ ಮಣ್ಣನ್ನು ಕಾಪಾಡುವ ಸಂಪೂರ್ಣ ಜವಬ್ದಾರಿ ರೈತ ಸಮುದಾಯದ್ದು ಹಾಗಿದ್ದು ಮಣ್ಣು ಉಳಿದರೆ ಮಾತ್ರ ಸಂಸ್ಕತಿ, ಮೌಲ್ಯಗಳು ಉಳಿಯುತ್ತವೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕ್ರಿಬ್ಕೋ ಸಂಸ್ಥೆಯ ರಾಜ್ಯ ಮಾರಾಟ ವ್ಯವಸ್ಥಾಪಕರಾದ ಶ್ರೀ ಹೆಚ್.ಈ.ಮರಿಸ್ವಾಮಿಯವರು ಕೃಷಿಯಿಂದ ವಿಮುಖರಾಗುವುದು ಬೇಡ.
ಕೃಷಿಯಿಂದ ದೂರ ಉಳಿದವ ಜೀವನದಲ್ಲಿ ಒಂಟಿಕಾಲಿನ ಪ್ರಯಾಣಿಕನಾಗುತ್ತಾನೆ. ಯಾಂತ್ರಿಕ ಲೋಕದಲ್ಲಿ ಸಾಧನೆಗಳ ಓಟದಲ್ಲಿ ಒಂಟಿಕಾಲಲ್ಲಿ ಓಡುವುದು ಕಷ್ಟಕರವಾಗಿದ್ದು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಸಹ ಕೃಷಿ ಕ್ಷೇತ್ರದಲ್ಲಿ ಪಾಲ್ಗೊಳ್ಳುವಿಕೆ ಬಹಳ ಮುಖ್ಯವಾಗಿದ್ದು ಜೀವನದಲ್ಲಿ ಪ್ರೇರಣಾ ಶಕ್ತಿ ಕೊಡುವ ಕ್ಷೇತ್ರ ಕೃಷಿ ಕ್ಷೇತ್ರ ಒಂದೇ ಎಂದು ಹಲವಾರು ಸಮಸ್ಯೆ ಮತ್ತು ಬೆಳಯ ಸಮಸ್ಯೆಗಳ ಬಗ್ಗೆ ಸೂಕ್ತ ಸಲಹೆ ಮತ್ತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತರಾದ ಶ್ರೀ ನಾಗರಾಜಪ್ಪ ಗೆದ್ದಲಹಟ್ಟಿ, ನಿವೃತ್ತ ಅಭಿಯಂತ ಶ್ರೀ ಮಹೇಶ್ವರಪ್ಪ ಉಪಸ್ಥಿತರಿದ್ದುರು . ಪ್ರಾಸ್ತವಿಕವಾಗಿ ದಾವಣಗೆರೆ ಜಿಲ್ಲೆ ಕ್ರಿಬ್ಕೋ ಕ್ಷೇತ್ರ ಅಧಿಕಾರಿ ಕೆ.ಕುಮಾರಸ್ವಾಮಿ, ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕ ಶ್ರೀ ಎಂ.ಬಿ.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು, ಹೆಚ್.ಎಸ್.ಕಲ್ಲೇಶ್ ವಂದನಾರ್ಪಣೆ ನಡೆಸಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ