ಬೆಂಗಳೂರು,
ಹೆಚ್ಚಿನ ವೇತನದ ಸಂಬಳ ಸಿಗದೇ ಹತಾಶೆಗೊಳಗಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ( ಕೆಐಎಎಲ್)ಕ್ಕೆ ಬಾಂಬ್ ಇಡಲಾಗಿದೆ ಎಂದು ಹುಸಿ ಕರೆ ಮಾಡಿ ತಲೆ ನೋವಾಗಿ ಪರಿಗಣಿಸಿದ್ದ ಕರಾವಳಿ ಮೂಲದ ಇಂಜಿನಿಯರ್‍ನನ್ನು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಣಿಪಾಲ ಮೂಲದ ಆದಿತ್ಯ ರಾವ್ (34) ಬಂಧಿತ ಆರೋಪಿ. ಕಳೆದ 15 ದಿನಗಳಲ್ಲಿ ಎರಡು ಬಾರಿ ಟರ್ಮಿನಲ್ ಮ್ಯಾನೇಜರ್‍ಗೆ ಕರೆ ಮಾಡಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ್ದ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
ಮೊದಲು ಏರ್ ಪೋರ್ಟ್ಗೆ ಕರೆ ಮಾಡಿ ಪಾರ್ಕಿಂಗ್‍ನಲ್ಲಿ ಬಾಂಬ್ ಇದೆ ಬೆದರಿಸಿದ್ದ ಆದಿತ್ಯ ರಾವ್, ಮತ್ತೆ ಏರ್ ಪೋರ್ಟ್ಗೆ ಕರೆ ಮಾಡಿ ಪಾರ್ಕಿಂಗ್ ಹೋಗುವ ದಾರಿಯಲ್ಲಿ ಬಾಂಬ್ ಇದೆ ಎಂದು ಹೇಳಿದ್ದ. ಈತನ ಬೆದರಿಕೆ ಕರೆಯಿಂದ ವಿಮಾನ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.ಎರಡು ದಿನ ಬಿಟ್ಟು ರೈಲು ನಿಲ್ದಾಣಕ್ಕೆ ಕರೆ ಮಾಡಿ ರೈಲಿನಲ್ಲಿ ಬಾಂಬ್ ಇದೆ ಎಂದು ಬೆದರಿಸಿ ತದನಂತರ ಏರ್ ಪೋರ್ಟ್ ಮತ್ತೆ ಕರೆ ಮಾಡಿ ವಿಮಾನದಲ್ಲಿಯೇ ಬಾಂಬ್ ಇದೆ ಎಂದು ಬೆದರಿಸಿದ್ದ
ಕೆಲಸ ಬಿಟ್ಟಿದ್ದ ಆದಿತ್ಯ: ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿಯ ಹೆಚ್ಚಿನ ವಿಚಾರಣೆಯ ವೇಳೆ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣಕ್ಕೂ ಬೆದರಿಕೆ ಕರೆ ಮಾಡಿದ್ದು ನಾನೇ ಎಂದು ತಪೊಪ್ಪಿಕೊಂಡಿದ್ದಾನೆ. ಆದಿತ್ಯ ರಾವ್ ಬಿಇ ಮತ್ತು ಎಂಬಿಎ ಪದವಿ ಮುಗಿಸಿ ಕೆಲ ತಿಂಗಳ ಹಿಂದೆ ಕೆಐಎಎಲ್‍ನಲ್ಲಿ ಕೆಲಸಕ್ಕೆ ಸೇರಿದ್ದು ಅಲ್ಲಿನ ಅಧಿಕಾರಿಗಳು ತನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಕೆಲಸ ಬಿಟ್ಟಿದ್ದ.
ಇದೇ ಕೋಪಕ್ಕೆ ಬೆದರಿಕೆ ಕರೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಕೆಐಎಎಲ್ ಪೊಲೀಸರು ಆದಿತ್ಯ ರಾವ್‍ನ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈತನ ಮೇಲೆ ಬೆಂಗಳೂರಿನಲ್ಲೆ ಹಲವಾರು ಕೇಸ್‍ಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.
ಉದ್ಯೋಗ ಅರಸಿ ಬಂದಿದ್ದ: ಬಿಇ,ಎಂಬಿಎ ಪದವಿ ಪಡೆದು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ. ರೈಲ್ವೆ ಇಲಾಖೆ ಹಾಗೂ ದೇವನಹಳ್ಳಿ ಇಂಟರ್‍ನ್ಯಾಷನಲ್ ಏರ್ ಪೋರ್ಟ್ನಲ್ಲಿ ಕೆಲಸಕ್ಕೆ ಪ್ರಯತ್ನಿಸಿದ್ದ.ಆದರೆ ಎರಡೂ ಕಡೆ ಉದ್ಯೋಗ ದೊರೆಯದೆ ಹತಾಶೆಗೆ ಒಳಗಾಗಿದ್ದ.
15 ದಿನಗಳಲ್ಲಿ ಎರಡು ಬಾರಿ ಟರ್ಮಿನಲ್ ಮ್ಯಾನೇಜರ್‍ಗೆ ಫೋನ್ ಮಾಡಿ ಬಾಂಬ್ ಹಾಕಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಷ್ಟೇ ಅಲ್ಲದೆ ರೈಲ್ವೆ ಸ್ಟೇಶನ್ ಕೂಡ ಸ್ಫೋಟಿಸುವುದಾಗಿ ಹೇಳಿದ್ದ. ಮತ್ತೆ ಈಗ ಎರಡು ದಿನಗಳ ಹಿಂದೆ ಏರ್ ಪೋರ್ಟ್ ಪಾರ್ಕಿಂಗ್ ಜಾಗದಲ್ಲಿ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ತನಿಖೆ ನಡೆಸಿದ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಆರೋಪಿ ಆದಿತ್ಯನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







